ಪೊಲೀಸ್ ಕಸ್ಟಡಿಯಲ್ಲಿದ್ದ ಕುಖ್ಯಾತ ಮಾಫಿಯಾ ಡಾನ್ ಅತೀಕ್ ಅಹ್ಮದ್ ಗುಂಡಿಟ್ಟು ಹತ್ಯೆ!
ಲಖನೌ(ಏ.15): ಪುತ್ರನ ಎನ್ಕೌಂಟರ್ ಬೆನ್ನಲ್ಲೇ ಉತ್ತರ ಪ್ರದೇಶದ ಕುಖ್ಯಾತ ಮಾಫಿಯಾ ಡಾನ್, ಮಾಜಿ ಸಂಸದ ಹಾಗೂ ಮಾಜಿ ಶಾಸಕ ಅತೀಕ್ ಅಹ್ಮದ್ನನ್ನು ಶನಿವಾರ ತಡರಾತ್ರಿ ಹತ್ಯೆ ಮಾಡಲಾಗಿದೆ. ಆತನ ಜತೆ ಸೋದರ ಅಶ್ರಫ್ ಅಹ್ಮದ್ನನ್ನೂ ಗುಂಡಿಕ್ಕಿ ಸಾಯಿಸಲಾಗಿದೆ. ಟಿವಿ ಕ್ಯಾಮರಾಗಳ ಎದುರೇ ಈ ಘಟನೆ ನಡೆದಿದ್ದು, ಕೃತ್ಯ ಎಸಗಿದ ಮೂವರನ್ನೂ ಬಂಧಿಸಲಾಗಿದೆ. ಇವರನ್ನು ಲವಲೇಶ್ ತಿವಾರಿ, ಸನ್ನಿ ಹಾಗೂ ಅರುಣ್ ಮೌರ್ಯ ಎಂದು ಗುರುತಿಸಲಾಗಿದೆ.
ಬಿಎಸ್ಪಿ ಶಾಸಕ ರಾಜು ಪಾಲ್ ಕೊಲೆ ಹಾಗೂ ಈ ಪ್ರಕರಣದ ಸಾಕ್ಷಿ ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಅತೀಕ್ ಅಹ್ಮದ್ ಆರೋಪಿಯಾಗಿದ್ದ. ಈ ಹಿನ್ನೆಲೆಯಲ್ಲಿ ಈತನ ವಿಚಾರಣೆ ನಡೆದಿತ್ತು. ಅತೀಕ್ನನ್ನು ವೈದ್ಯಕೀಯ ಪರೀಕ್ಷೆಗಾಗಿ ರಾತ್ರಿ 10.30ಕ್ಕೆ ಪ್ರಯಾಗ್ರಾಜ್ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಪತ್ರಕರ್ತರು ಅತೀಕ್ನ ಹೇಳಿಕೆ ಪಡೆಯುತ್ತಿದ್ದರು. ಈ ವೇಳೆ ಪತ್ರಕರ್ತರ ವೇಷದಲ್ಲಿ ಮೂವರು ಬಂದು ‘ಜೈ ಶ್ರೀರಾಂ’ ಎಂದು ಕೂಗಿದರು. ಆಗ ನೇರವಾಗಿ ಅತೀಕ್ ತಲೆಗೆ ಹಾಗೂ ಅಶ್ರಫ್ಗೆ ಪಿಸ್ತೂಲು ಇಟ್ಟು ಗುಂಡು ಹಾರಿಸಿದರು. ಕೂಡಲೇ ಇಬ್ಬರೂ ನೆಲಕ್ಕುರುಳಿದರು. ಆಗಲೂ ಅವರಿಗೆ ಗುಂಡಿಕ್ಕಿದರು. ತಕ್ಷಣ ಹಂತಕರನ್ನು ಪೊಲೀಸರು ಗಟ್ಟಿಯಾಗಿ ಹಿಡಿದುಕೊಂಡು ತಮ್ಮ ವಶಕ್ಕೆ ತೆಗೆದುಕೊಂಡರು.
ನಂತರ ಸ್ಥಳವನ್ನು ಸುತ್ತುವರಿದ ಪೊಲೀಸರು ಶವಗಳನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. 10 ಸುತ್ತುಗಳ ಗುಂಡು ಹಾರಾಟ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.