ಪೊಲೀಸರ ಮೇಲೆ ಹಲ್ಲೆ – ಆಂಧ್ರ ಸಿಎಂ ಸಹೋದರಿ ವೈಎಸ್ ಶರ್ಮಿಳಾ ಖಾಕಿ ವಶಕ್ಕೆ
ಹೈದರಾಬಾದ್: ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ವೈಎಸ್‍ಆರ್ ತೆಲಂಗಾಣ ಪಕ್ಷದ (YSR Telangana Party) ನಾಯಕಿ ಹಾಗೂ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಯವರ (Jagan Mohan Reddy) ಸಹೋದರಿ ವೈ.ಎಸ್ ಶರ್ಮಿಳಾ (Y.S Sharmila) ಅವರನ್ನು ಪೊಲೀಸರು ಸೋಮವಾರ ವಶಕ್ಕೆ ಪಡೆದಿದ್ದಾರೆ.
ರಾಜ್ಯ ಸರ್ಕಾರ ನಡೆಸಿದ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿರುವ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಎಸ್‍ಐಟಿ (SIT) ಕಚೇರಿಗೆ ತೆರಳುತ್ತಿದ್ದಾಗ ಶರ್ಮಿಳಾ ಅವರನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ತೀವ್ರ ವಿರೋಧ ವ್ಯಕ್ತಪಡಿಸಿದ ಶರ್ಮಿಳಾ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ನಡೆಸದಂತೆ ಮನವರಿಕೆ ಮಾಡಲು ತೆರಳಿದ ಪೊಲೀಸರ ಮೇಲೆ ಅವರು ಹಲ್ಲೆ ನಡೆಸಿದ್ದಾರೆ.
#WATCH | Telangana Police detains YSRTP Chief YS Sharmila and shifts her to the local police station. She was detained after police officials received information about her visiting SIT office over the TSPSC question paper leak case pic.twitter.com/n6VaYgRarx
— ANI (@ANI) April 24, 2023
ಲಂಗಾಣದಲ್ಲಿ ಸ್ವತಂತ್ರವಾಗಿ ರಾಜಕೀಯ ಗುರುತನ್ನು ಕಟ್ಟಿಕೊಳ್ಳಲು ಶ್ರಮಿಸುತ್ತಿರುವ ಶರ್ಮಿಳಾ ಅವರು ನಿರಂತರವಾಗಿ ಪತ್ರಿಕೆ ಸೋರಿಕೆ ವಿಷಯವನ್ನು ಎತ್ತುತ್ತಿದ್ದಾರೆ. ಕಳೆದ ತಿಂಗಳು, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಹೈದರಾಬಾದ್‍ನಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿತ್ತು.
ಶರ್ಮಿಳಾ ಇತ್ತೀಚೆಗೆ ತೆಲಂಗಾಣದಾದ್ಯಂತ ಮೆರವಣಿಗೆ ನಡೆಸಿದ್ದರು. ಈ ವೇಳೆ ಆಂಧ್ರದಲ್ಲಿ ಅಧಿಕಾರದಲ್ಲಿರುವ ತನ್ನ ಸಹೋದರನ ವೈಎಸ್‍ಆರ್ ಕಾಂಗ್ರೆಸ್ (YSR Congress Party) ಪಕ್ಷಕ್ಕೂ ತನ್ನ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅವರು ಒತ್ತಿ ಹೇಳಿದ್ದರು.
ತೆಲಂಗಾಣ ರಾಜ್ಯ ಪಬ್ಲಿಕ್ ಸರ್ವಿಸ್ ಕಮಿಷನ್ (Telangana, State Public Service Commission) ನಡೆಸಿದ ನೇಮಕಾತಿ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾದ ನಂತರ ತೆಲಂಗಾಣದಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿವೆ. ಈಗಾಗಲೇ ಪ್ರಕರಣ ಸಂಬಂಧ 11 ಜನರನ್ನು ಬಂಧಿಸಲಾಗಿದೆ. ಹುದ್ದೆಗಳ ಭರ್ತಿಗೆ ಬಾಕಿಯಿದ್ದ ಮೂರು ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸೋರಿಕೆ ಆರೋಪದ ಬಗ್ಗೆ ವಿರೋಧ ಪಕ್ಷಗಳು ಕೆ. ಚಂದ್ರಶೇಖರ ರಾವ್ (K.Chandrashekar Rao) ಸರ್ಕಾರವನ್ನು ಗುರಿಯಾಗಿಸಿಕೊಂಡಿವೆ.