ಪೆರುವಿನಲ್ಲಿ ರಾಜಕೀಯ ಸಂಘರ್ಷಕ್ಕೆ 42 ಬಲಿ
ಲಿಮಾ, ಜ 14 : ಪೆರುವಿನಲ್ಲಿ ಮಾಜಿ ಅಧ್ಯಕ್ಷರ ಬೆಂಬಲಿಗರು ಮತ್ತು ಭದ್ರತಾ ಪಡೆಗಳ ನಡುವಿನ ಪ್ರತಿಭಟನೆಯಿಂದ 42 ಮಂದಿ ಬಲಿಯಾಗಿದ್ದಾರೆ. 41 ನಾಗರಿಕರು ಮತ್ತು ಓರ್ವ ಪೊಲೀಸ್ ಅಧಿಕಾರಿ ಸಾವನ್ನಪ್ಪಿದ್ದಾರೆ.
ಪೆರು ಮಾಜಿ ಅಧ್ಯಕ್ಷ ಪೆಡ್ರೊ ಕ್ಯಾಸ್ಟಿಲ್ಲೊ ಬೆಂಬಲಿಗರು ಮತ್ತು ಭದ್ರತಾ ಪಡೆಗಳ ನಡುವೆ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಯುತ್ತಿದೆ. ಈ ಪ್ರತಿಭಟನೆಯಿಂದಾಗಿ ಅಮಾಯಕ ಜೀವಗಳು ಬಲಿಯಾಗಿವೆ. 41 ನಾಗರಿಕರು ಮತ್ತು ಓರ್ವ ಪೊಲೀಸ್ ಅಧಿಕಾರಿ ಸಾವನ್ನಪ್ಪಿದ್ದರೆ, 355 ಮಂದಿ ನಾಗರಿಕರು ಹಾಗು 176 ರಾಷ್ಟ್ರೀಯ ಪೊಲೀಸ್ ಏಜೆಂಟರು ಸೇರಿದಂತೆ ಒಟ್ಟು 531 ಮಂದಿ ಗಾಯಗೊಂಡಿದ್ದಾರೆ. ಘಟನೆ ಸಂಬಂಧ ಈಗಾಗಲೇ 329 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಟಾರ್ನಿ ಜನರಲ್ ಕಚೇರಿ ಹೇಳಿಕೆ ತಿಳಿಸಿರುವುದಾಗಿ ವರದಿಯಾಗಿದೆ.
ಕಳೆದ ವರ್ಷ ಡಿಸೆಂಬರ್ 7ರಂದು ಎಡಪಂಥೀಯ ಅಧ್ಯಕ್ಷರ ಬಂಧನವಾದ ನಂತರ ಉಪಾಧ್ಯಕ್ಷರಾಗಿದ್ದ ದಿನಾ ಬೊಲುವಾರ್ಟೆ ಪ್ರಮಾಣವಚನ ಸ್ವೀಕರಿಸಿದ್ದು, ಆ ಬಳಿಕ ದಕ್ಷಿಣ ಅಮೆರಿಕಾದಲ್ಲಿ ಪ್ರತಿಭಟನೆಗಳು ಕಾವೇರಿದೆ. ಬೊಲುವಾರ್ಟೆ ರಾಜೀನಾಮೆಗೆ ಒತ್ತಾಯಿಸಿ ಮತ್ತು ಕ್ಯಾಸ್ಟಿಲ್ಲೊರನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಕ್ಯಾಸ್ಟಿಲ್ಲೊ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದಾರೆ.