ಪುತ್ತೂರು ಸಭಾಂಗಣದಲ್ಲಿ ಅರುಣ್ ಪುತ್ತಿಲ ಬೆಂಬಲಿಗರ ಸಭೆ ;ಪಕ್ಷೇತರ ಸ್ಪರ್ಧೆಗೆ ಬೆಂಬಲಿಗರ ಒತ್ತಾಯ
ಮಂಗಳೂರು: ಹಾಲಿ ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Elections 2023) ಕಣಕ್ಕಿಳಿಯುವ ಬಿಜೆಪಿ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿ ಬಿಡುಗಡೆಯಾಗಿದ್ದೇ ತಡ ಕರಾವಳಿಯ ಮೂರು ಕ್ಷೇತ್ರಗಳಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಉಡುಪಿ ತಾಲೂಕಿನಲ್ಲಿ ಶಾಸಕ ರಘಪತಿ ಭಟ್ ಅಸಮಾಧಾನಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಹಾಗೂ ಸುಳ್ಯದಲ್ಲೂ ಬಿಜೆಪಿಗೆ ಬಿಸಿ ತಟ್ಟುವ ಲಕ್ಷಣ ಕಾಣುತ್ತಿದೆ. ಪುತ್ತೂರಿನಲ್ಲಿ ಶಾಸಕ ಸಂಜೀವ ಮಠಂದೂರು ವಿರುದ್ಧ ತೊಡೆತಟ್ಟಿದ್ದ ಅರುಣ್ ಪುತ್ತಿಲ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಈ ಬಾರಿ ಪುತ್ತಿಲಗೆ ಬಿಜೆಪಿ ಮಣೆ ಹಾಕಲಿದೆ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿಬಂದಿದ್ದವು. ಅಚ್ಚರಿ ಎಂಬಂತೆ ಆಶಾ ತಿಮ್ಮಪ್ಪ ಗೌಡ ಅವರಿಗೆ ಟಿಕೆಟ್ ಘೋಷಣೆಯಾಗಿದ್ದು, ಇದು ಪುತ್ತಿಲ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಪುತ್ತೂರು ಕ್ಷೇತ್ರದ ಟಿಕೆಟ್ ಕೈತಪ್ಪಿದ ಹಿನ್ನೆಲೆ ಹಿಂದೂ ಸಂಘಟನೆ ಮುಖಂಡ ಅರುಣ್ ಪುತ್ತಿಲ ಕೋಟೆಚಾ ಸಭಾಂಗಣದಲ್ಲಿ ಬೆಂಬಲಿಗರ ಸಭೆ ನಡೆಸಿ ಶಕ್ತಿ ಪ್ರದರ್ಶನ ಮಾಡಿದರು. ಹಾಲ್ ತುಂಬಾ ಸೇರಿದ್ದ ಬೆಂಬಲಿಗರು ಟಿಕೆಟ್ ನೀಡದ್ದಕ್ಕೆ ಆಕ್ರೋಶ ಹೊರಹಾಕಿದರಲ್ಲದೆ ಪಕ್ಷೇತರವಾಗಿ ಸ್ಪರ್ಧಿಸುವಂತೆ ಸೂಚಿಸಿದ್ದಾರೆ. ಈ ವೇಳೆ ಮಾತನಾಡಿದ ಅರುಣ್ ಪುತ್ತಿಲ, ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಇತ್ತ ಸುಳ್ಯ ತಾಲೂಕಿನಲ್ಲಿ ಟಿಕೆಟ್ ಕಳೆದುಕೊಂಡ ಸಚಿವ ಎಸ್ ಅಂಗಾರ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಸುಳ್ಯದಲ್ಲಿ ಮೊದಲ ಬಾರಿ ಸ್ಪರ್ಧಿಸಿ ಸೋಲು ಕಂಡಿದ್ದ ಅಂಗಾರ ಅವರು ಬಳಿಕ 6 ಬಾರಿ ಆಯ್ಕೆಯಾಗುವ ಮೂಲಕ ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದರು. ಇದೀಗ ಇವರ ಬದಲಿಗೆ ಭಾಗೀರಥಿ ಮುರುಳ್ಯ ಅವರಿಗೆ ಟಿಕೆಟ್ ಘೋಷಣೆಯಾಗಿದೆ. ಇದರಿಂದ ಅಸಮಾಧಾನಗೊಂಡ ಅಂಗಾರ, ನನ್ನ ಬಳಿ ಮಾತುಕತೆ ನಡೆಸದೇ ಈ ರೀತಿ ನಡೆದುಕೊಂಡದ್ದು ಸರಿಯಲ್ಲ. ನಾನು ಪಕ್ಷ, ಪಕ್ಷದ ನಾಯಕರನ್ನು ದೂರುವುದಿಲ್ಲ. ನನ್ನ ನಡೆಯೇ ನನಗೆ ಮುಳ್ಳಾಯಿತು. ಇಲ್ಲಿಗೆ ರಾಜಕೀಯ ಸಾಕು ಎಂದು ಅಸಮಾಧಾನ ಹೊರ ಹಾಕಿದ್ದಾರೆ.