ಪಿರಿಯಾಪಟ್ಟಣ : ಕಾಂಗ್ರೆಸ್ ಅಭ್ಯರ್ಥಿ ಮತ್ತು ಆಪ್ತನ ನಿವಾಸಗಳ ಮೇಲೆ ಐಟಿ ರೈಡ್
ಪಿರಿಯಾಪಟ್ಟಣ: ಮಾಜಿ ಶಾಸಕ ಹಾಗೂ ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ವೆಂಕಟೇಶ್ ಹಾಗೂ ಅವರ ಆಪ್ತ ಕೆ.ಹೊಲದಪ್ಪನವರ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಮಾಹಿತಿ ಪರಿಶೀಲನೆ ನಡೆಸಿದ್ದಾರೆ.
ಮಾಜಿ ಶಾಸಕ ಕೆ.ವೆಂಕಟೇಶ್ ಅವರ ಮರದೂರು ತೋಟದ ಮನೆ ಮೇಲೆ ಹಾಗೂ ಅವರ ಆಪ್ತ ಕೆ.ಹೊಲದಪ್ಪನವರ ಮನೆಯ ಮೇಲೆ ಶನಿವಾರ ಮಧ್ಯಾಹ್ನ ಬೆಂಗಳೂರಿನಿಂದ ಖಾಸಗಿ ವಾಹನದಲ್ಲಿ ಆಗಮಿಸಿದ ಐಟಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದು, ಶಾಸಕ ಕೆ.ವೆಂಕಟೇಶ್ ಅವರ ಪತ್ನಿ ಭಾರತಿ ವೆಂಕಟೇಶ್ ಮನೆಯಲ್ಲಿ ಇದ್ದು, ಮನೆಯನ್ನು ಪರಿಶೀಲಿಸಿದಾಗ ಮನೆಯಲ್ಲಿ ಅಂದಾಜು 5 ಲಕ್ಷ ರೂ. ಹಣ ಇದ್ದು ಇದಕ್ಕೆ ಸೂಕ್ತ ದಾಖಲಾತಿಯನ್ನು ನೀಡುವಂತೆ ಅಧಿಕಾರಿಗಳು ಸೂಚಿಸಿ ಹೊರನಡೆದರು. ಹಾಗೂ ಕೆ.ಹೊಲದಪ್ಪನವರ ಮನೆಯಲ್ಲಿ ಪರಿಶೀಲಿಸಿದಾಗ 2.5 ಲಕ್ಷ ಹಣವಿದ್ದು, ಇದಕ್ಕೆ ಸೂಕ್ತ ದಾಖಲಾತಿಯನ್ನು ನೀಡಿದಾಗ ವಾಣಿಜ್ಯ ತೆರಿಗೆ ಅಧಿಕಾರಿಗಳು ವಾಪಸಾಗಿದ್ದಾರೆ.
ರಾಜಕೀಯ ದುರುದ್ದೇಶದಿಂದ ಚುನಾವಣೆಯಲ್ಲಿ ಆತ್ಮಸ್ಥೈರ್ಯ ಕುಗ್ಗಿಸುವ ಸಲುವಾಗಿ ಈ ದಾಳಿ ನಡೆದಿದ್ದು, ಆದಾಯ ತೆರಿಗೆ ಸಂಸ್ಥೆಯನ್ನು ಸ್ಥಳೀಯ ಜನಪ್ರತಿನಿಧಿಗಳು ದುರುಪಯೋಗ ಪಡಿಸಿಕೊಂಡು ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಭಾರಿಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಮನೆಯಲ್ಲಿ ಇರುವ ಹಣಕ್ಕೆ ಸೂಕ್ತ ದಾಖಲಾತಿಗಳನ್ನು ನೀಡುತ್ತೇನೆ. ಕೋಟಿಗಟ್ಟಲೆ ಹಣ ದೋಚಿರುವ ಭ್ರಷ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಬಿಟ್ಟು ನಮ್ಮಂತಹವರ ಮೇಲೆ ದಾಳಿ ಮಾಡುತ್ತಿರುವುದು ಗುಬ್ಬಿಯ ಮೇಲೆ ಬ್ರಹ್ಮಾಸ್ತ ಬಿಟ್ಟಂತಾಗಿದೆ ಎಂದು ಮಾಜಿ ಶಾಸಕ ಕೆ.ವೆಂಕಟೇಶ್ ವಿಷಾದ ವ್ಯಕ್ತ ಪಡಿಸಿದ್ದಾರೆ.