ಪಿಜಿ, ಹಾಸ್ಟೆಲ್ ಬಿಟ್ಟು ಅಪಾರ್ಟ್ಮೆಂಟ್‌ನಲ್ಲಿ ವಾಸವಿದ್ದ ಹುಡ್ಗೀರು – ಮಂಗಳೂರು ಡ್ರಗ್ಸ್ ದಂಧೆಯ ರೋಚಕ ಸತ್ಯ ಬಯಲು
ಮಂಗಳೂರು: ಇಲ್ಲಿನ ಪ್ರತಿಷ್ಠಿತ ಕಾಲೇಜಿನ ವೈದ್ಯರು (Doctors) ಹಾಗೂ ವೈದ್ಯಕೀಯ ವಿದ್ಯಾರ್ಥಿನಿಯರು (Medical Student) ಭಾಗಿಯಾಗಿದ್ದ ಭಾರೀ ಹೈಪ್ರೊಫೈಲ್ ಗಾಂಜಾ ದಂಧೆ ಭೇದಿಸಿರುವ ಮಂಗಳೂರು ಪೊಲೀಸರು (Mangaluru Police) ಅನೇಕ ರೋಚಕ ಸತ್ಯಗಳನ್ನ ಬಯಲಿಗೆಳೆದಿದ್ದಾರೆ.
ಹೌದು. ಬುಧವಾರ ತಡರಾತ್ರಿವರೆಗೂ ನಡೆಸಿದ ವಿಚಾರಣೆಯಲ್ಲಿ ಮಂಗಳೂರಿನ ಇನ್ನೂ ಮೂರ್ನಾಲ್ಕು ಕಾಲೇಜುಗಳ ಹೆಸರು ಕೇಳಿಬಂದಿದೆ. ಡ್ರಗ್ (Drugs) ಪೆಡ್ಲರ್ ನೀಲ್ ಮಾಹಿತಿ ಆಧರಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ನಿರ್ದೇಶನದ ಮೇರೆಗೆ ಪೊಲೀಸರು ತನಿಖೆ ನಡೆಸಿದ್ದಾರೆ. ಕೆಲ ಕಾಲೇಜು ವಿದ್ಯಾರ್ಥಿಗಳ ಮೇಲೂ ಎಫ್‌ಐಆರ್ ದಾಖಲಾಗಿದೆ.
ಗಾಂಜಾ ನಶೆಗೆ ಬಿದ್ದದ್ದು ಹೇಗೆ?: ಗಾಂಜಾ ದಂಧೆಗೆ ಬಿದ್ದಿದ್ದ ವಿದ್ಯಾರ್ಥಿನಿಯರು ಡ್ರಗ್ಸ್‌ಗಾಗಿ ಪಿಜಿ, ಹಾಸ್ಟೆಲ್ (PG, Hostel) ಬಿಟ್ಟು ಲಿವಿಂಗ್ ರಿಲೇಷನ್‌ಶಿಪ್ (Live In Relationship) ಹೆಸರಲ್ಲಿ ಅಪಾರ್ಟ್ಮೆಂಟ್‌ನಲ್ಲಿ ವಾಸಿಸುತ್ತಿದ್ದರು. ಅಲ್ಲಿ ಬಾಯ್‌ಫ್ರೆಂಡ್‌ಗಳಿಂದ ಗಾಂಜಾ ನಶೆಗೆ ಬಿದ್ದಿದ್ದರು ಎಂದು ಹೇಳಲಾಗಿದೆ.
ಪೆಡ್ಲರ್ ಸ್ಫೋಟಕ ರಹಸ್ಯ: ಮಂಗಳೂರಿನ ಗಾಂಜಾ ದಂಧೆಗೆ ಸಂಬಂಧಿಸಿದಂತೆ ಅನೇಕ ಸ್ಫೋಟಕ ರಹಸ್ಯಗಳನ್ನ ಹೊರತೆಗೆದಿದ್ದಾರೆ. ಯು.ಕೆ ಪ್ರಜೆಯಾಗಿರುವ ಪೆಡ್ಲರ್ ನೀಲ್ ಕಿಶೋರಿಲಾಲ್ ರಾಮ್ ಜೀ ಶಾ (38) ಓವರ್ ಸೀಸ್ ಸಿಟಿಜನ್ ಆಫ್ ಇಂಡಿಯಾ ಕೋಟಾದ ಅಡಿ ಮಂಗಳೂರಿನಲ್ಲಿ ಮೆಡಿಕಲ್ ಸೀಟ್ ಪಡೆದು ವಿದ್ಯಾಭ್ಯಾಸ ಮಾಡ್ತಿದ್ದ. ಪದೇ – ಪದೇ ಫೇಲ್ ಆಗ್ತಾ ಇದ್ದರೂ 15 ವರ್ಷಗಳಿಂದ ಒಂದೇ ಕಾಲೇಜಿನಲ್ಲಿ ಓದಿಕೊಂಡಿದ್ದ. ವಿದ್ಯಾಭ್ಯಾಸ ಮಾಡುವ ಸೋಗಿನಲ್ಲಿ ಇತರ ವಿದ್ಯಾರ್ಥಿಗಳಿಗೆ ಗಾಂಜಾ ಸರಬರಾಜು ಮಾಡ್ತಿದ್ದ. ಬಂಟ್ಸ್ (ಬಂಟರ ಸಮುದಾಯ) ಹಾಸ್ಟೆಲ್‌ನಲ್ಲಿರುವ ತನ್ನ ಫ್ಲಾಟ್‌ನಲ್ಲೇ ಗಾಂಜಾ ಮಾರಾಟ ಮಾಡುತ್ತಿದ್ದ ನೀಲ್, ವಿದ್ಯಾರ್ಥಿಗಳ ಬೇಡಿಕೆ ಈಡೇರಿಸುತ್ತಿದ್ದ ಎಂದು ಪೊಲೀಸ್ ವಿಚಾರಣೆ ವೇಳೆ ತಿಳಿದುಬಂದಿದೆ.
ಮಂಗಳೂರಿನಲ್ಲಿ ಮೆಡಿಕಲ್ ವಿದ್ಯಾರ್ಥಿಗಳ ಡ್ರಗ್ಸ್ ಜಾಲದ ಬೆನ್ನತ್ತಿದ ಪೊಲೀಸರು ಇನ್ನೂ ಮೂವರನ್ನ ಬಂಧಿಸಿದ್ದಾರೆ. ಪೆಥಾಲಜಿ ಎಂಡಿ ಓದುತ್ತಿದ್ದ ತುಮಕೂರು ಮೂಲದ ಹರ್ಷ ಕುಮಾರ್, ಡಿ ಫಾರ್ಮಾ ಅಂತಿಮ ವರ್ಷ ಓದುತ್ತಿದ್ದ ಕೊಚ್ಚಿ ಮೂಲದ ಆಡೋನ್ ದೇವ್ ಹಾಗೂ ಮಂಗಳೂರು ಬಂದರಿನಲ್ಲಿ ಹಣ್ಣಿನ ವ್ಯಾಪಾರಿಯಾಗಿದ್ದ ಮಹಮ್ಮದ್ ಅಫ್ಸರ್ ಮೂವರನ್ನು ಬಂಧಿಸಲಾಗಿದೆ. ಡ್ರಗ್ಸ್ ಜಾಲದ ಕಿಂಗ್ ಪಿನ್ ಇಂಗ್ಲೆಂಡ್ ಪ್ರಜೆ ಕಿಶೋರಿಲಾಲ್ ನೀಡಿದ್ದ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಯುತ್ತಿದೆ.
ಮಂಗಳೂರಿನ ಪ್ರತಿಷ್ಠಿತ ಕಾಲೇಜಿನ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿನಿಯರು ಭಾಗಿಯಾಗಿದ್ದ ಭಾರೀ ಹೈಪ್ರೊಫೈಲ್ ಗಾಂಜಾ ದಂಧೆ ಮಂಗಳೂರು ಪೊಲೀಸರು ಬುಧವಾರ ಕೆ.ಎಂ.ಸಿ. ಅತ್ತಾವರ, ಕೆ.ಎಂ.ಸಿ ಮಣಿಪಾಲ, ದೇರಳಕಟ್ಟೆಯ ಯೆನೇಪೋಯಾ ಮೆಡಿಕಲ್ ಕಾಲೇಜಿನ ವೈದ್ಯರು ಹಾಗೂ ವಿದ್ಯಾರ್ಥಿಗಳು ಸೇರಿ 10 ಮಂದಿಯನ್ನು ಬಂಧಿಸಿದದ್ದರು.