ಪಿಜಿಯಲ್ಲಿ ಯುವತಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಆರೋಪಿ ಅರೆಸ್ಟ್
ಬೆಂಗಳೂರು, ಜುಲೈ.27: ನಗರದ ಕೋರಮಂಗಲದ ಪಿಜಿಯಲ್ಲಿ ಕೃತಿ ಕುಮಾರಿ ಎಂಬ ಯುವತಿ ಯ ಕೊಲೆ (Murder) ಪ್ರಕರಣಕ್ಕೆ ಸಂಬಂಧಿಸಿ ಕೊಲೆ ಆರೋಪಿ ಅಭಿಷೇಕ್ನನ್ನು ಕೋರಮಂಗಲ ಪೊಲೀಸರು (Koramangala Police) ಬಂಧಿಸಿದ್ದಾರೆ.
ಜುಲೈ 23ರ ರಾತ್ರಿ ಚಾಕುವಿನಿಂದ ಇರಿದು ಕೃತಿ ಕುಮಾರಿಯನ್ನು ಹತ್ಯೆಗೈದಿದ್ದ ಅಭಿಷೇಕ್, ಮಧ್ಯ ಪ್ರದೇಶಕ್ಕೆ ಹೋಗಿ ತಲೆ ಮರೆಸಿಕೊಂಡಿದ್ದ. ಸದ್ಯ ಮಧ್ಯ ಪ್ರದೇಶದಲ್ಲೇ ಆರೋಪಿಯನ್ನು ಬಂಧಿಸಿ ಬೆಂಗಳೂರಿಗೆ ಕರೆದುಕೊಂಡು ಬರಲಾಗಿದೆ.
ಜುಲೈ 23ರ ರಾತ್ರಿ 11.13ಕ್ಕೆ ಪಿಜಿಗೆ ನುಗ್ಗಿದ್ದ ಅಭಿಷೇಕ್, 3ನೇ ಮಹಡಿಯ ಕೊಠಡಿ ಬಳಿಗೆ ಬಂದು ಕೃತಿ ಕುಮಾರಿ ಕೊಠಡಿ ಬಾಗಿಲು ತೆಗೆಯುತ್ತಿದ್ದಂತೆ ಏಕಾಏಕಿ ಮನಸೋಇಚ್ಛೆ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದ. ಆರೋಪಿಗಾಗಿ ಹುಡುಕಾಟ ನಡೆಸಿದ್ದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಮಧ್ಯ ಪ್ರದೇಶಕ್ಕೆ ಹೋಗಿದ್ದ ಆರೋಪಿಯನ್ನು ಅಲ್ಲೇ ಬಂಧಿಸಿದ್ದಾರೆ. ಸದ್ಯ ಈಗ ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.
ಮಧ್ಯಪ್ರದೇಶದ ಭೋಪಾಲ್ ಮೂಲದ ಕೊಲೆ ಆರೋಪಿ ಅಭಿಷೇಕ್, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಕೃತಿ ಕುಮಾರಿ ಸ್ನೇಹಿತೆಯನ್ನು ಪ್ರೀತಿಸುತ್ತಿದ್ದ. ಕೃತಿ ಕುಮಾರಿ ನೆಲೆಸಿದ್ದ ಪಿಜಿಗೆ ಆಗಾಗ ಬಂದು ಹೋಗುತ್ತಿದ್ದ. ಇತ್ತೀಚೆಗೆ ಅಭಿಷೇಕ್, ಕೃತಿ ಸ್ನೇಹಿತೆ ಪ್ರೀತಿಯಲ್ಲಿ ಬಿರುಕು ಮೂಡಿತ್ತು. ಯಾವುದೇ ಕೆಲಸ ಕಾರ್ಯ ಮಾಡದೆ ಓಡಾಡಿಕೊಂಡಿದ್ದ ಅಭಿಷೇಕ್ ಭೋಪಾಲ್ನಿಂದ ಬೆಂಗಳೂರಿಗೆ ಬಂದು ಪ್ರಿಯತಮೆ ಜತೆ ಸುತ್ತಾಡುತ್ತಿದ್ದ. ಎಲ್ಲಾದರೂ ಕೆಲಸಕ್ಕೆ ಸೇರುವಂತೆ ಅಭಿಷೇಕ್ಗೆ ಆತನ ಪ್ರಿಯತಮೆ ಬುದ್ದಿ ಹೇಳಿದ್ದರು. ಪ್ರಿಯತಮೆ ಹೇಳಿದಾಗ ಕೆಲಸಕ್ಕೆ ಸೇರಿದ್ದೇನೆಂದು ಅಭಿಷೇಕ್ ಸುಳ್ಳು ಹೇಳಿದ್ದ, ಈ ವಿಚಾರ ಪ್ರಿಯತಮೆಗೆ ಗೊತ್ತಾಗಿತ್ತು. ಹೀಗಾಗಿ ಆತನ ಪ್ರೇಯಸಿ ಅಭಿಷೇಕ್ನನ್ನು ದೂರ ಮಾಡಲು ಪ್ರಯತ್ನಿಸುತ್ತಿದ್ದಳು.
ಬಳಿಕ ಕೃತಿ ಕುಮಾರಿ ನೆಲೆಸಿದ್ದ ಪಿಜಿ ಬಳಿ ಬಂದು ಅಭಿಷೇಕ್ ಗಲಾಟೆಮಾಡಿದ್ದ. ನಿನ್ನಿಂದ ನನ್ನ ಪ್ರೇಯಸಿ ಅವಾಯ್ಡ್ ಮಾಡುತ್ತಿದ್ದಾಳೆಂದು ಜಗಳವಾಡಿದ್ದ. ಹೀಗಾಗಿ ಸ್ನೇಹಿತೆಯನ್ನು ಬೇರೆ ಪಿಜಿಗೆ ಕೃತಿ ಸ್ಥಳಾಂತರಿಸಿದ್ದಳು. ಅಭಿಷೇಕ್ ಕರೆ ಮಾಡಿದರೆ ಸ್ವೀಕರಿಸದೆ ಅವಾಯ್ಡ್ ಮಾಡುವಂತೆ ತನ್ನ ಸ್ನೇಹಿತೆಗೆ ಹೇಳಿದ್ದಳು. ತನ್ನ ಪ್ರಿಯತಮೆ ಕೃತಿಯ ಮಾತು ಕೇಳಿ ತನನ್ನು ದೂರ ಮಾಡುತ್ತಿದ್ದಾಳೆ ಎಂದು ಕುಪಿತಗೊಂಡ ಅಭಿಷೇಕ್, ಕೃತಿ ಕುಮಾರಿ ನೆಲೆಸಿದ್ದ ಪಿಜಿ ಕೊಠಡಿ ಬಳಿಗೆ ಬಂದು ಕೊಲೆ ಮಾಡಿದ್ದ.
ಠಾಣೆಯಲ್ಲಿ ಪುನೀತ್ ಕೆರೆಹಳ್ಳಿ ತೀವ್ರ ಅಸ್ವಸ್ಥ –ಆಸ್ಪತ್ರೆಗೆ ದಾಖಲು
ಬೆಂಗಳೂರು: ಸರ್ಕಾರಿ ನೌಕರರ ಕೆಲಸಕ್ಕೆ ಅಡ್ಡಿಪಡಿಸಿದ ಹಾಗೂ ಶಾಂತಿ ಸುವ್ಯವಸ್ಥೆಗೆ ಭಂಗ ತಂದ ಆರೋಪದ ಮೇಲೆ ಬಂಧನಕ್ಕೊಳಗಾದ ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ (Puneeth Kerehalli) ಪೊಲೀಸರ ವಿಚಾರಣೆ ವೇಳೆ ಹೊಟ್ಟೆ ನೋವಿನಿಂದ ಏಕಾಏಕಿ ಕುಸಿದು ಬಿದ್ದಿದ್ದಾರೆ. ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ನಾಯಿ ಮಾಂಸದ ಜೊತೆಗೆ ಕುರಿ ಮಾಂಸವನ್ನು ರಾಜಸ್ಥಾನದಿಂದ ಬೆಂಗಳೂರಿಗೆ (Bengaluru) ತಂದು ಮಾರಾಟ ಮಾಡುತ್ತಿದ್ದಾರೆ ಎಂದು ಪುನೀತ್ ಕೆರೆಹಳ್ಳಿ ಹಾಗೂ ಹಿಂದೂ ಪರ ಕಾರ್ಯಕರ್ತರು ಮೆಜೆಸ್ಟಿಕ್ ರೈಲು ನಿಲ್ದಾಣದ ಬಳಿ ಪ್ರತಿಭಟಿಸಿದ್ದರು.
ಈ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಳಿಕ ಮಧ್ಯರಾತ್ರಿ 12:00 ಗಂಟೆ ವೇಳೆಗೆ ಅವರನ್ನು ಕಾಟನ್ ಪೇಟೆ ಪೊಲೀಸರು (Cottonpet Police) ಬಂಧಿಸಿದ್ದರು.
ಬಂಧನವಾಗುತ್ತಿದ್ದAತೆ ಪುನೀತ್ ಕೆರೆಹಳ್ಳಿ ಅಸ್ವಸ್ಥಗೊಂಡಿದ್ದರು. ಇನ್ನೂ ಬೆಳಗಿನ ಜಾವ 4:45ರ ವೇಳೆಗೆ ತೀವ್ರವಾಗಿ ಅಸ್ವಸ್ಥಗೊಂಡ ಅವರನ್ನು ಆಸ್ಪತ್ರೆಗೆ ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ವೈದ್ಯರು ಆರೋಗ್ಯ ತಪಾಸಣೆ ವೇಳೆ ಎಲ್ಲಾ ನಾರ್ಮಲ್ ಇರುವುದು ತಿಳಿದುಬಂದಿದೆ. ಅದರೆ ಇನ್ನೂ ಅವರು ಅಸ್ವಸ್ಥ ಸ್ಥಿತಿಯಲ್ಲಿದ್ದಾರೆ. ಊಟ ಮಾಡದ ಕಾರಣ ಅಸ್ವಸ್ಥರಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ.
ಬೆಂಗಳೂರಿನ ಐಶಾರಾಮಿ ಹಾಗೂ ಸಾಮಾನ್ಯ ಹೋಟೆಲ್‌ಗಳಿಗೆ ರಾಜಸ್ಥಾನದಿಂದ ಬರುತ್ತಿದ್ದ ಮಾಂಸ ಸರಬರಾಜಾಗುತ್ತಿತ್ತು. ಪ್ರಕರಣ ಸಂಬಂಧ ಮಾಂಸ ಸರಬರಾಜು ಮಾಡುತ್ತಿದ್ದ ಅಬ್ದುಲ್ ರಜಾಕ್ ಎಂಬವರನ್ನು ಇಂದು (ಶನಿವಾರ) ವಿಚಾರಣೆ ಮಾಡುವ ಸಾಧ್ಯತೆ ಇದೆ.
ಪುನೀತ್ ಕೆರೆಹಳ್ಳಿ ವಿರುದ್ಧ ಬಿಎನ್‌ಎಸ್‌ನ 132 ಆಕ್ಟ್ (ಸರ್ಕಾರಿ ನೌಕರರ ಕೆಲಸಕ್ಕೆ ಅಡ್ಡಿ) 351 (2) ಶಾಂತಿಭಂಗ ಪ್ರಕರಣ ದಾಖಲಿಸಲಾಗಿದೆ.