ಪಿಚ್‌ನ ಮಣ್ಣು ತಿಂದ ರಹಸ್ಯ; ರೋಹಿತ್ ಶರ್ಮ ಹೇಳಿದ್ದೇನು?
ಟಿ20 ವಿಶ್ವಕಪ್ 2024ರ ಗೆಲುವಿನ ನಂತರ ಭಾರತ ತಂಡದ ಕ್ಯಾಪ್ಟನ್ ಮಣ್ಣು ತಿನ್ನುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ರೋಹಿತ್ ಶರ್ಮಾ ಈ ನಡುವಳಿಕೆಯ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
ತಮ್ಮ ಗೆಲುವಿಗೆ ಆಸರೆಯಾದ ಕಾರಣವಾದ ಪಿಚ್‌ಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಮಣ್ಣು ತಿಂದಿದ್ದೇನೆ ಎಂದು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ರೋಚಕ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ 7 ರನ್ ಗಳ ಜಯ ಸಾಧಿಸಿದ್ದು ಗೊತ್ತೇ ಇದೆ. ಈ ಗೆಲುವಿನೊಂದಿಗೆ ಟೀಂ ಇಂಡಿಯಾ 11 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಐಸಿಸಿ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.
ಈ ಗೆಲುವಿನ ನಂತರ ರೋಹಿತ್ ಶರ್ಮಾ ಬಾರ್ಬಡೋಸ್ ಪಿಚ್‌ನ ಮೇಲೆ ಮಣ್ಣು ತಿನ್ನುವ ಸನ್ನವೇಶ ಕಂಡುಬಂತು, ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಮತ್ತು ಫೋಟೋಗಳು ವೈರಲ್ ಆಗುತ್ತಿರುವ ಬೆನ್ನಲ್ಲೆ, ರೋಹಿತ್ ಶರ್ಮಾ ಮಣ್ಣನ್ನು ತಿನ್ನಲು ಕಾರಣ ಏನು ಎಂಬ ಸಂಗೆಯನ್ನು ಬಹಿರಂಗಪಡಿಸಿದ್ದಾರೆ.
“ಟೀಮ್ ಇಂಡಿಯಾ ಬಾರ್ಬಡೋಸ್ ವಿಕೆಟ್‌ನಲ್ಲಿ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ, ಹಾಗಾಗಿ ಈ ಪಿಚ್ ನನಗೆ ತುಂಬಾ ವಿಶೇಷ. ಈ ಗೆಲುವಿನ ಜೊತೆಗೆ ಈ ಪಿಚ್ ಜೀವನ ಪರ್ಯಂತ ನನ್ನ ನೆನಪಿನಲ್ಲಿ ಉಳಿಯಲಿದೆ. ಪಿಚ್ ಅನ್ನು ನನ್ನ ಭಾಗವಾಗಿಸುವ ಉದ್ದೇಶದಿಂದ ನಾನು ಮಣ್ಣನ್ನು ತಿಂದಿದ್ದೆನೆ, ಈ ಗೆಲುವಿನ ಕ್ಷಣಗಳು ತುಂಬಾ ವಿಶೇಷ. ನಮ್ಮ ಹಲವು ವರ್ಷಗಳ ಕನಸು ಇಲ್ಲಿ ನನಸಾಗಿದೆ. ಹೀಗಾಗಿ ಈ ಮೈದಾನ ಮತ್ತು ಪಿಚ್ ನಮಗೆ ತುಂಬಾ ವಿಶೇಷವಾಗಿದೆ” ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
“ವಿಶ್ವಕಪ್ ಗೆದ್ದ ಅನುಭವ ನಂಬಲಸಾಧ್ಯ. ಫೈನಲ್ ಪಂದ್ಯ ಮುಗಿದಾಗಿನಿಂದ ಇಲ್ಲಿಯವರೆಗೆ ಎಲ್ಲವೂ ಕನಸಿನಂತೆ ಭಾಸವಾಗುತ್ತಿದೆ, ವಿಶ್ವಕಪ್ ಗೆಲ್ಲುವುದು ತುಂಬಾ ವಿಶೇಷ” ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಈ ವಿಶ್ವಕಪ್ ಗೆಲುವಿನೊಂದಿಗೆ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಿಗೆ ವಿದಾಯ ಹೇಳಿದ್ದಾರೆ. ಅವರು ನಿವೃತ್ತಿ ಘೋಷಿಸಲು ಬಯಸದಿದ್ದರೂ, ಇದಕ್ಕಿಂತ ಉತ್ತಮ ಸಮಯ ಇನ್ನೊಂದಿಲ್ಲ ಎಂದು ತಮ್ಮ ಮನದಾಳದ ಮಾತನ್ನು ಪಂದ್ಯದ ನಂತರ ಹಿಟ್‌ಮ್ಯಾನ್ ಹಂಚಕೊಂಡಿದ್ದರು.