ಪಿಂಚಣಿ ಹಣ ಪಡೆಯಲು ಕುರ್ಚಿ ಬಳಸಿ ಕಿಲೋಮೀಟರ್ ಗಟ್ಟಲೆ ನಡೆದುಕೊಂಡು ಹೋದ ವೃದ್ಧೆ; ಮನಕಲುಕುವ ವಿಡಿಯೋ ವೈರಲ್
ಭುವನೇಶ್ವರ: ಪಿಂಚಣಿ ಹಣವನ್ನು ಪಡೆಯಲು ವೃದ್ಧೆಯೊಬ್ಬರು ಕಿ.ಮೀ ಗಟ್ಟಲೆ ನಡೆದುಕೊಂಡೇ ಹೋಗಿರುವ ಮನಕಲುಕುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಒಡಿಶಾದ ನಬ್ರಂಗ್‌ಪುರ ಜಿಲ್ಲೆಯ ಜರಿಗಾಂವ್ ಬ್ಲಾಕ್‌ನ 70 ವರ್ಷದ ಸೂರ್ಯ ಹರಿಜನ ಎಂಬ ವೃದ್ಧೆಗೆ ತಿಂಗಳಿಗೆ ಬರುವ ಪಿಂಚಣಿ ಹಣ ಬಡತನದ ಬದುಕು ಸಾಗಿಸಲು ಅನಿವಾರ್ಯ. ಇವರ ಹಿರಿಯ ಮಗ ಬೇರೆ ಬೇರೆ ರಾಜ್ಯದಲ್ಲಿ ವಲಸೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದು, ವೃದ್ಧೆ ಕಿರಿಯ ಮಗನೊಂದಿಗೆ ವಾಸಿಸುತ್ತಿದ್ದಾರೆ. ಕಿರಿಯ ಮಗ ದನಗಳನ್ನು ಮೇಯಿಸುತ್ತಾ ಜೀವನ ಸಾಗಿಸುತ್ತಾನೆ. ಗುಡಿಸಲಿನಲ್ಲೇ ವಾಸಿಸುವ ವೃದ್ಧೆಗೆ ತಿಂಗಳ ಪಿಂಚಣಿ ಹಣ ಮೂರು ಹೊತ್ತಿನ ಊಟಕ್ಕೆ ಅನಿವಾರ್ಯ.
70 ವರ್ಷವಾದರೂ ಅವರು ಪಿಂಚಣಿ ಹಣಕ್ಕಾಗಿ ಬ್ಯಾಂಕ್ ಇರುವ ಸ್ಥಳಕ್ಕೆ ನಡೆದುಕೊಂಡು ಹೋಗುತ್ತಾರೆ. ವಯಸ್ಸಾದ ಕಾರಣ ಬಾಗಿದ ಬೆನ್ನು, ಬರೀ ಕಾಲಿನಲ್ಲಿ ಖುರ್ಚಿಯೊಂದರ ಸಹಾಯ ಪಡೆದು ಮೆಲ್ಲನೆ ಕುಂಟುತ್ತಾ ಬ್ಯಾಂಕಿಗೆ ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ.ಅಷ್ಟು ಕಷ್ಟಪಟ್ಟು ಹೋದ ವೃದ್ಧೆಗೆ ಆಕೆಯ ಹೆಬ್ಬೆರಳು ದಾಖಲೆಗಳಿಗೆ ಹೊಂದಿಕೆ ಆಗಿಲ್ಲ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬ್ಯಾಂಕ್ ಮ್ಯಾನೇಜರ್, ವೃದ್ದೆಯ ಬೆರಳು ಮುರಿದಿದೆ. ಇದರಿಂದ ಅವರು ಥಂಬ್ ನೀಡಲು ಆಗುತ್ತಿಲ್ಲ. ಈ ಸಮಸ್ಯೆಯನ್ನು ಪರಿಹರಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
“ಅವರ ಬೆರಳುಗಳು ಮುರಿದುಹೋಗಿವೆ. ಆದ್ದರಿಂದ ಅವರು ಹಣವನ್ನು ಪಡೆಯಲು ಆಗುತ್ತಿಲ್ಲ. ಸದ್ಯ ಅವರಿಗೆ ಬ್ಯಾಂಕ್ ನಿಂದಲೇ ಕ್ಯಾಶ್ ರೂಪದಲ್ಲಿ 3,000 ರೂ.ವನ್ನು ನೀಡಲಾಗಿದೆ. ನಾವು ಈ ಸಮಸ್ಯೆಯನ್ನು ಶೀಘ್ರದಲ್ಲೇ ಪರಿಹರಿಸುತ್ತೇವೆ” ಎಂದು ಜರಿಗಾಂವ್ ಶಾಖೆಯ ಎಸ್‌ಬಿಐ ವ್ಯವಸ್ಥಾಪಕರು ತಿಳಿಸಿದ್ದಾರೆ.ಗ್ರಾಮದ ಸರಪಂಚ್ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಇಂಥ ಅಸಹಾಯಕ ವ್ಯಕ್ತಿಗಳ ಸಮಸ್ಯೆಯನ್ನು ಆಲಿಸಿ ನಾವು ಪಿಂಚಣಿ ಹಣವನ್ನು ತಲುಪಿಸಲು ಪ್ರಯತ್ನಿಸುತ್ತೇವೆ ಎಂದಿದ್ದಾರೆ.
Aise na karo yaar!! This is so heart breaking to see ?
— Naveen (@_naveenish) April 20, 2023