ಪಕ್ಷಿ ಬಡಿದು ಎಂಜಿನ್‌ಗೆ ಬೆಂಕಿ – ತುರ್ತು ಭೂಸ್ಪರ್ಶ ಮಾಡಿದ ವಿಮಾನ
ವಾಷಿಂಗ್ಟನ್: ವಿಮಾನ (Flight) ಹಾರಾಟ ನಡೆಸುತ್ತಿದ್ದ ವೇಳೆ ಪಕ್ಷಿ (Bird) ಬಡಿದ ಪರಿಣಾಮ ಎಂಜಿನ್‌ನಲ್ಲಿ ಬೆಂಕಿ (Fire) ಕಾಣಿಸಿಕೊಂಡು ವಿಮಾನವನ್ನು ತುರ್ತು ಭೂಸ್ಪರ್ಶ (Emergency Landing) ಮಾಡಿರುವ ಘಟನೆ ಅಮೆರಿಕದಲ್ಲಿ (America) ನಡೆದಿದೆ.
ಘಟನೆಗೆ ಸಂಬಂಧಿಸಿದ ವೀಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಅಮೆರಿಕನ್ ಏರ್‌ಲೈನ್ಸ್‌ನ ವಿಮಾನವೊಂದು ಟೇಕ್‌ಆಫ್ ಆದ ಕೆಲವೇ ಹೊತ್ತಿನಲ್ಲಿ ಅದರ ಎಂಜಿನ್‌ನಲ್ಲಿ ಬೆಂಕಿ ಗೋಚರಿಸಿಕೊಂಡಿದೆ. ಈ ಹಿನ್ನೆಲೆ ವಿಮಾನವನ್ನು ತಕ್ಷಣವೇ ಕೊಲಂಬಸ್‌ನ ಜಾನ್ ಗ್ಲೆನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಸಲಾಗಿದೆ.
Taken from Upper Arlington, Ohio. AA1958. pic.twitter.com/yUSSMImaF7
— CBUS4LIFE (@Cbus4Life) April 23, 2023
ವರದಿಗಳ ಪ್ರಕಾರ ಬೋಯಿಂಗ್ 737 ಫ್ಲೈಟ್ 1958 ಕೊಲಂಬಸ್‌ನಿಂದ ಫೀನಿಕ್ಸ್‌ಗೆ ಹೊರಟಿತ್ತು. ವಿಮಾನ ಟೇಕ್‌ಆಫ್ ಆಗುತ್ತಿದ್ದಂತೆ ಹಕ್ಕಿ ಬಡಿದ ಪರಿಣಾಮ ಬೆಂಕಿ ಕಾಣಿಸಿಕೊಂಡಿದೆ. ದಟ್ಟ ಹೊಗೆ ಆವರಿಸುತ್ತಿದ್ದಂತೆಯೇ ಎಚ್ಚೆತ್ತ ಪೈಲಟ್‌ಗಳು ತಕ್ಷಣವೇ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿದ್ದಾರೆ. ಸದ್ಯ ಯಾವುದೇ ಪ್ರಯಾಣಿಕರು ಅಥವಾ ಸಿಬ್ಬಂದಿ ಗಾಯಗೊಂಡಿಲ್ಲ.
ವಿಮಾನವನ್ನು ಸುರಕ್ಷಿತವಾಗಿ ಇಳಿಸಿದ ಬಳಿಕ ಎಲ್ಲಾ ಪ್ರಯಾಣಿಕರಿಗೆ ಬೇರೆ ವಿಮಾನದ ವ್ಯವಸ್ಥೆ ಮಾಡಲಾಯಿತು. ವಿಮಾನಕ್ಕೆ ಹಕ್ಕಿ ಬಡಿದಿರುವ ಘಟನೆ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.