ನ್ಯೂಜಿಲೆಂಡ್ ವಿರುದ್ಧ ತಿಣುಕಾಡಿ ರೋಚಕ 6 ವಿಕೆಟ್‌ಗಳ ಜಯ ಸಾಧಿಸಿದ ಭಾರತ
ಲಕ್ನೋ:ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 8 ವಿಕೆಟ್ ನಷ್ಟಕ್ಕೆ 99 ರನ್ ಗಳಿಸಿತು. ಈ ಅಲ್ಪ ಮೊತ್ತವನ್ನು ಬೆನ್ನಟ್ಟಿದ ಭಾರತ 19.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 101 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಈ ಮೂಲಕ ಮೂರು T20 ಪಂದ್ಯಗಳ ಸರಣಿ 1-1ರಲ್ಲಿ ಸಮವಾಗಿದೆ.
ಕೊನೆಯ 18 ಎಸೆತಗಳಲ್ಲಿ ಗೆಲುವಿಗೆ 18 ರನ್ ಬೇಕಿತ್ತು. 18ನೇ ಓವರ್‌ನಲ್ಲಿ 5 ರನ್ ಬಂದರೆ 19ನೇ ಓವರ್‌ನಲ್ಲಿ 7 ರನ್ ಬಂತು. ಕೊನೆಯ ಓವರ್‌ನಲ್ಲಿ 6 ರನ್ ಬೇಕಿತ್ತು.
ಕೊನೆಯ ಓವರ್ ಹೇಗಿತ್ತು?
ಟಿಕ್ನರ್ ಎಸೆದ ಮೊದಲ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ (Hardik Pandya) 1 ರನ್ ತೆಗೆದರೆ ಎರಡನೇ ಎಸೆತದಲ್ಲಿ ಯಾವುದೇ ರನ್ ಬಂದಿರಲಿಲ್ಲ. ಮೂರನೇ ಎಸೆತದಲ್ಲಿ ಸೂರ್ಯಕುಮಾರ್ (Suryakumar Yadav) ಕ್ಯಾಚ್ ಔಟ್ ಆಗುವ ಸಾಧ್ಯತೆ ಇತ್ತು. ಆದರೆ ವೇಗವಾಗಿ ಬಂದಿದ್ದ ಚೆಂಡನ್ನು ಹಿಡಿಯಲು ಟಿಕ್ನರ್ ವಿಫಲರಾದರು.
4ನೇ ಎಸೆತದಲ್ಲಿ ಪಾಂಡ್ಯ ಒಂದು ರನ್ ಓಡಿದರು. ಈ ವೇಳೆ ಪಾಂಡ್ಯ ರನೌಟ್ ಆಗುವ ಸಾಧ್ಯತೆ ಇತ್ತು. ನೇರವಾಗಿ ವಿಕೆಟ್‌ಗೆ ಚೆಂಡು ಬಡಿಯುತ್ತಿದ್ದರೆ ಪಾಂಡ್ಯ ಪೆವಿಲಿಯನ್ ಸೇರಬೇಕಿತ್ತು. 5ನೇ ಎಸೆತದಲ್ಲಿ ಸೂರ್ಯಕುಮಾರ್ ಮಿಡ್ ಆಫ್ ಕಡೆ ಬೌಂಡರಿ ಹೊಡೆದು ತಂಡಕ್ಕೆ ಜಯವನ್ನು ತಂದುಕೊಟ್ಟರು.
ಸೂರ್ಯಕುಮಾರ್ ಯಾದವ್ ಔಟಾಗದೇ 26 ರನ್(31 ಎಸೆತ, 1 ಬೌಂಡರಿ) ಇಶನ್ ಕಿಶನ್ 19 ರನ್(32 ಎಸೆತ, 2 ಬೌಂಡರಿ) ಹಾರ್ದಿಕ್ ಪಾಂಡ್ಯ ಔಟಾಗದೇ 15 ರನ್ (20 ಎಸೆತ, 1 ಬೌಂಡರಿ) ಹೊಡೆದರು. ಈ ಪಂದ್ಯದಲ್ಲಿ ಭಾರತದ ಪರ ಒಂದು ಸಿಕ್ಸ್ ಸಿಡಿಯದೇ ಇರುವುದು ವಿಶೇಷ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ನಾಯಕ ಮಿಚೆಲ್ ಸ್ಯಾಂಟ್ನರ್ ಔಟಾಗದೇ 19 ರನ್ ಹೊಡೆದದ್ದೇ ಗರಿಷ್ಟ ಸ್ಕೋರ್.
ಅರ್ಶ್‌ದೀಪ್ ಸಿಂಗ್ 2 ವಿಕೆಟ್ ಪಡೆದರೆ ಪಾಂಡ್ಯ, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಹಲ್, ದೀಪಕ್ ಹೂಡಾ, ಕುಲದೀಪ್ ಯಾದವ್ ತಲಾ ಒಂದೊಂದು ವಿಕೆಟ್ ಪಡೆದರು.