ನೀರಲ್ಲಿ ಮುಳುಗುತ್ತಿದ್ದ ಹೆಣ್ಣು ಮಕ್ಕಳನ್ನು ಕಾಪಾಡಿದ ಕೆಎಸ್‌ಆರ್‌ಟಿಸಿ ಬಸ್ ಚಾಲಕ
ಶಿರಾ (ಜ.30): ಕೆರೆಯಲ್ಲಿ ಮುಳುಗುತ್ತಿದ್ದ ಇಬ್ಬರು ಹೆಣ್ಣು ಮಕ್ಕಳನ್ನು ಕೆಎಸ್‌ಆರ್‌ಟಿಸಿ ಡ್ರೈವರ್ ನೀರಿಗೆ ಜಿಗಿದು ಬಾಲಕಿಯರನ್ನು ಕಾಪಾಡಿರುವ ಘಟನೆ ತಾಲೂಕಿನ ಹಂದಿಕುಂಟೆ ಗ್ರಾಮದಲ್ಲಿ ನಡೆದಿದೆ. ಕೆಎಸ್‌ಆರ್‌ಟಿಸಿ ಬಸ್ ಚಾಲಕ ಮಂಜುನಾಥ ಅವರು ಶಿರಾದಿಂದ ನಾಗಪ್ಪನಹಳ್ಳಿ ಗೇಟ್ ಮಾರ್ಗವಾಗಿ ಸಂಚರಿಸುತ್ತಿದ್ದಾಗ ಹಂದಿಕುಂಟೆ ಅಗ್ರಹಾರ ಕೆರೆಯಲ್ಲಿ ಇಬ್ಬರು ಹೆಣ್ಣು ಮಕ್ಕಳು ನೀರಿನಲ್ಲಿ ಮುಳುಗುತ್ತಿರುವುದನ್ನು ಗಮನಿಸಿ ತಕ್ಷಣ ಬಸ್ಸನ್ನು ರಸ್ತೆಯ ಪಕ್ಕಕ್ಕೆ ನಿಲ್ಲಿಸಿ ನೀರಿಗೆ ಜಿಗಿದು ಇಬ್ಬರು ಹೆಣ್ಣು ಮಕ್ಕಳನ್ನು ನೀರಿನಿಂದ ಹೊರಕ್ಕೆ ತಂದು ಜೀವ ಉಳಿಸಿದ್ದಾರೆ.
ಕೆಎಸ್‌ಆರ್‌ಟಿಸಿ ಚಾಲಕ ಮಂಜುನಾಥ ಅವರ ಕಾರ್ಯಕ್ಕೆ ಶಿರಾ ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕ ವಿನೋದ್ ಅಮ್ಮನಗಿ ಹಾಗೂ ಶಿರಾ ತಾಲೂಕಿನ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೇ ಮಾಜಿ ಸಚಿವ ಸುರೇಶ್ ಕುಮಾರ್ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಚಾಲಕನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಸ್ತೆ ಸುರಕ್ಷತಾ ಸಪ್ತಾಹ: ಕೊರಟಗೆರೆ ತಾಲೂಕಿನ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ರಸ್ತೆ ಸುರಕ್ಷಿತ ಸಪ್ತಾಹ ಅಭಿಯಾನದಡಿಯಲ್ಲಿ ಶಾಲಾ ಮಕ್ಕಳಿಗೆ ರಸ್ತೆಯ ಸುರಕ್ಷತೆಯ ಬಗ್ಗೆ ಹಾಗೂ ಪರಿವಾರದ ಕಾಳಜಿ ಬಗ್ಗೆ ಹೇಗೆ ಇರಬೇಕು ಎನ್ನುವುದರ ಬಗ್ಗೆ ಕೊರಟಗೆರೆ ಪೊಲೀಸ್ ಠಾಣಾ ಸಬ್ ಇನ್‌ಸ್ಪೆಕ್ಟರ್ ಮಂಜುಳಾ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು. ದ್ವಿಚಕ್ರ ವಾಹನಗಳಲ್ಲಿ ಹೋಗುವಾಗ ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು, ಮದ್ಯಪಾನ ಮಾಡಿ ವಾಹನ ಚಲಾಯಿಸಬಾರದು, ದ್ವಿಚಕ್ರ ವಾಹನಗಳಲ್ಲಿ ಮೂರು ಜನ ಪ್ರಯಾಣ ಮಾಡಬಾರದು,
ಗುಂಪು ಗುಂಪಾಗಿ ರಸ್ತೆಗೆ ಇಳಿಯಬಾರದು, ಫೋನ್‌ನಲ್ಲಿ ಮಾತನಾಡುತ್ತಾ ವಾಹನ ಚಲಾಯಿಸಬಾರದು. ಅಪಘಾತಗಳು ನಡೆದ ಸ್ಥಳಗಳಲ್ಲಿ ಫೋಟೋ ವಿಡಿಯೋ ಮಾಡುವುದನ್ನು ಬಿಟ್ಟು ಸಹಾಯ ಮಾಡಬೇಕು. ಸಹಾಯ ಮಾಡಿದವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಯಾವುದೇ ಕಾರಣಕ್ಕೂ ಕೇಸ್ ದಾಖಲಿಸುವುದಿಲ್ಲ. ಅಪಘಾತವಾದ ಸ್ಥಳಗಳಲ್ಲಿ ಧೈರ್ಯದಿಂದ ಸಹಾಯ ಮಾಡಿ ಸ್ಥಳೀಯರ ಸಹಾಯದಿಂದ ಗಾಯನಗಳನ್ನು ಆಸ್ಪತ್ರೆಗೆ ರವಾನಿಸಬೇಕು ಅಥವಾ ತುರ್ತು ವಾಹನ ಸೇವಾ ಕೇಂದ್ರಗಳಿಗೆ ಕರೆ ಮಾಡಿ ತಿಳಿಸಬೇಕು. ಇದೆಲ್ಲವೂ ಮನುಷ್ಯನ ಆದ್ಯ ಕರ್ತವ್ಯವಾಗಿದೆ ಎಂದು ರಸ್ತೆ ಸುರಕ್ಷತಾ ಸಪ್ತಾಹ ಅಭಿಯಾನದಲ್ಲಿ ವಿದ್ಯಾರ್ಥಿಗಳಿಗೆ ಮಂಜುಳಾ ತಿಳಿಸಿದರು.