ನಿರ್ಮಾಣ ಹಂತದ ಕಟ್ಟಡ ಕುಸಿತ; 5 ಕಾರ್ಮಿಕರ ಸಾವು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ (ಅಕ್ಟೋಬರ್ 22) ಧಾರಾಕಾರ ಮಳೆ ಸುರಿಯುತ್ತಿದ್ದು, ಹೆಣ್ಣೂರು ಸಮೀಪದ ಬಾಬುಸಾಬ್ಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದುಬಿದ್ದಿದೆ. ಇನ್ನು ಕಟ್ಟಡ ಅವಶೇಷಗಳಡಿ 16 ಕಾರ್ಮಿಕರು ಸಿಲುಕಿರಬಹುದು ಎಂದು ತಿಳಿದುಬಂದಿದ್ದು, ಸದ್ಯ ಅಗ್ನಿಶಾಮಕ ದಳ, ಪೊಲೀಸರು ಅವಶೇಷಗಳಡಿ ಸಿಲುಕಿದ್ದ 5 ಕಾರ್ಮಿಕರ ಶವ ಹೊರತೆಗೆದಿದ್ದಾರೆ. ಇನ್ನು ಮೂವರನ್ನು ರಕ್ಷಣೆ ಮಾಡಿದ್ದು, ಇನ್ನುಳಿದಕಾರ್ಮಿಕರಿಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ನಿರ್ಮಾಣ ಹಂತದ ಕಟ್ಟಡ ದುರಂತ ಪ್ರಕರಣದಲ್ಲಿ ಸಾವಿನ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ರಾತ್ರಿಇಡೀ ಅವಶೇಷಗಳಡಿ ಸಿಲುಕಿದವರ ಪತ್ತೆಕಾರ್ಯ ನಡೆಯಿತು. ಮಧ್ಯರಾತ್ರಿ ಮೂವರ ಮೃತದೇಹಗಳು ಪತ್ತೆಯಾಗಿದ್ದು, ಇನ್ನು ಕೆಲವರು ಅವಶೇಷಗಳಡಿ ಸಿಲುಕಿ ಮೃತಪಟ್ಟಿದ್ದಾರೆ. ಮೃತದೇಹಗಳನ್ನು ಹೊರ ತೆಗೆಯಲು ಜೆಸಿಬಿ, ಹಿಟಾಚಿಗಳ ಮೂಲಕ ಕುಸಿದ ಕಟ್ಟಡದ ಅವಶೇಷಗಳನ್ನು ತೆರವು ಮಾಡುವ ಕಾರ್ಯಾಚರಣೆ ನಡೆಯುತ್ತಿದೆ.6 ಮಂದಿ ಕಾರ್ಮಿಕರಿಗೆ ತೀವ್ರ ಗಾಯಗಳಾಗಿದ್ದು, ಓರ್ವ ಕಾರ್ಮಿಕನ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಕಟ್ಟಡ ಕುಸಿಯುತ್ತಿದ್ದಂತೆಯೇ ಅವಶೇಷಗಳಡಿಯಲ್ಲಿ ಸಿಲುಕಿದ್ದ ಕಾರ್ಮಿಕನೋರ್ವ ರಕ್ತ ಸಿಕ್ತ ಸ್ಥಿತಿಯಲ್ಲಿ ಆಚೆ ಬಂದಿದ್ದು, ಕಾರ್ಮಿಕನ ತಲೆಗೆ ಪೆಟ್ಟಾಗಿ ರಕ್ತ ಸೋರುತ್ತಿದೆ. ಇನ್ನು ರಕ್ತದ ಮಡುವಿನಲ್ಲೇ ಅಳುತ್ತ ನಮ್ಮವರು ಒಳಗೆ ಸಿಲುಕಿದ್ದಾರೆಂದು ಎಂದು ಮಾಹಿತಿ ನೀಡಿದ್ದಾನೆ. ಒಳಗೆ ಇನ್ನು ಕಾರ್ಮಿಕರು ಇದ್ದಾರೆ ಎನ್ನುವುದು ಖಚಿತವಾಗುತ್ತಿದ್ದಂತೆಯೇ ರಕ್ಷಣಾ ಕಾರ್ಯಚರಣೆ ಚುರುಕುಗೊಂಡಿದೆ.
ಮಲ್ಲೇಶ್ವರಂನಲ್ಲಿ ವಾಸವಿದ್ದ ಆಂಧ್ರ ಮೂಲದ ಮುನಿರಾಜು ರೆಡ್ಡಿ ಎಂಬುವರಿಗೆ ಸೇರಿದ ಕಟ್ಟಡ ಇದಾಗಿದೆ. 6 ಅಂತಸ್ತಿನ ಅಪಾರ್ಟ್ಮೆಂಟ್ ನಿರ್ಮಾಣ ಕಾರ್ಯ 8 ತಿಂಗಳಿಂದ ನಡೆಯುತ್ತಿದೆ. ಆದ್ರೆ, ಇದೀಗ ಏಕಾಏಕಿ ಕುಸಿದುಬಿದ್ದಿದೆ. ಈ ಘಟನೆ ಸಂಭವಿಸುತ್ತಿದ್ದಂತೆಯೇ ಕಟ್ಟಡ ಮಾಲೀಕ ಮುನಿರಾಜು ರೆಡ್ಡಿ ಸಂಪರ್ಕಕ್ಕೆ ಸಿಗದೇ ನಾಪತ್ತೆಯಾಗಿದ್ದಾರೆ.
ಬೆಂಗಳೂರಿನಲ್ಲಿ ಕಟ್ಟಡ ಕುಸಿತ ದುರಂತದಲ್ಲಿ ಮೂವರ ಕಾರ್ಮಿಕ ಶವ ಪತ್ತೆಯಾದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರು ಡಿಸಿಪಿ ದೇವರಾಜ್ ಅವರಿಗೆ ಫೋನ್ ಮಾಡಿ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ವೇಳೆ 17 ಜನ ಸಿಲುಕಿರುವ ಬಗ್ಗೆ ಮಾಹಿತಿ ಇದೆ ಇದೆ ಎಂದು ಡಿಸಿಪಿ ದೇವರಾಜ್ ಸಿಎಂ, ಡಿಸಿಎಂಗೆ ಮಾಹಿತಿ ನೀಡಿದ್ದಾರೆ.
ಮಳೆಯ ನಡುವೆಯೂ ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಇನ್ನು ಸ್ಥಳಕ್ಕೆ ಸ್ಥಳೀಯ ಶಾಸಕ ಬೈರತಿ ಸುರೇಶ್ ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಅಕ್ರಮ ಕಟ್ಟಡ ನಿರ್ಮಾಣದ ವಿರುದ್ಧ ಕಠಿಣ ಕ್ರಮ: ಡಿಸಿಎಂ ಡಿ.ಕೆ.ಶಿವಕುಮಾರ್:
“ಬೆಂಗಳೂರು ನಗರದಲ್ಲಿ ಕಟ್ಟಡಗಳ ಫಿಟ್ನೆಸ್ ಪ್ರಮಾಣ ಪತ್ರ, ವಿನ್ಯಾಸ ಸೇರಿದಂತೆ ಪಾಲಿಕೆಯಿಂದ ಅನುಮತಿ ತೆಗೆದುಕೊಳ್ಳದೆ ಕಟ್ಟಡ ನಿರ್ಮಾಣ ಮಾಡುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಆದಷ್ಟು ಬೇಗ ಇದರ ಬಗ್ಗೆ ಸಮೀಕ್ಷೆ ಕಾರ್ಯ ನಡೆಸಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ನಗರದ ಬಾಬುಸಾಬ್ ಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದಿರುವ ಸ್ಥಳಕ್ಕೆ ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಸಚಿವರಾದ ಸಂತೋಷ್ ಲಾಡ್, ಬಿಬಿಎಂಪಿ ಆಯುಕ್ತರಾದ ತುಷಾರ್ ಗಿರಿನಾಥ್ ಅವರ ಜೊತೆ ಭೇಟಿ ನೀಡಿ ರಕ್ಷಣಾ ಕಾರ್ಯವನ್ನು ವೀಕ್ಷಣೆ ಮಾಡಿದರು. ರಕ್ಷಣಾ ಕಾರ್ಯ ಹಾಗೂ ಕಾರ್ಮಿಕರ ಬಗ್ಗೆ ಚರ್ಚೆ ನಡೆಸಿದರು.
ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಡಿಸಿಎಂ ಅವರು, “60/40 ಅಳತೆಯ ನಿವೇಶನದಲ್ಲಿ ಇಷ್ಟು ದೊಡ್ಡ ಕಟ್ಟಡ ಕಟ್ಟಿರುವುದು ದೊಡ್ಡ ಅಪರಾಧ. ಅಧಿಕಾರಿಗಳು ಮೂರು ಬಾರಿ ನೋಟಿಸ್ ನೀಡಿದ್ದೇವೆ ಎಂದು ತಿಳಿಸಿದ್ದಾರೆ. ನೋಟೀಸ್ ನೀಡಿದರೆ ಸಾಲದು ಅದರ ಬದಲು ಕಠಿಣ ಕ್ರಮ ತೆಗೆದುಕೊಳ್ಳಬೇಕಿತ್ತು. ಇದು ನಮಗೆ ದೊಡ್ಡ ಪಾಠವಾಗಿದೆ. ರಕ್ಷಣಾ ಕಾರ್ಯ ಮುಗಿದ ನಂತರ ಮುಂದಿನ ಎರಡು ದಿನಗಳಲ್ಲಿ ಇದರ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು” ಎಂದರು.
“ನಗರದಾದ್ಯಂತ ಅಕ್ರಮ ಕಟ್ಟಡಗಳ ಬಗ್ಗೆ ಸರ್ವೆ ಕಾರ್ಯ ಮಾಡಲಾಗುವುದು. ಕಟ್ಟಡ ವಿನ್ಯಾಸ ಹೊಂದಿರದವರಿಗೆ ಯಾವುದೇ ಕಾರಣಕ್ಕೂ ನೋಂದಣಿ ಮಾಡಿಕೊಡಬಾರದು ಎಂದು ಕಂದಾಯ ಇಲಾಖೆಗೆ ಸೂಚನೆ ನೀಡಲಾಗುವುದು. ಕಡಿಮೆ ದುಡ್ಡಿಗೆ ನಿವೇಶನ ತೆಗೆದುಕೊಂಡು ಮಾರಾಟ ಮಾಡಲು ಈ ರೀತಿ ಮಾಡಲಾಗುತ್ತದೆ. ಇಂತಹ ಅಕ್ರಮಗಳನ್ನು ತಡೆಗಟ್ಟುವ ಕಾರಣಕ್ಕಾಗಿ ರೇರಾ ಕಾಯ್ದೆ ಜಾರಿಯಲ್ಲಿದೆ” ಎಂದರು.

ಎನ್ ಡಿಆರ್ ಎಫ್ ಮತ್ತು ಎಸ್ ಡಿ ಆರ್ ಎಫ್ ತಂಡದವರು ಅತ್ಯಂತ ಜಾಗರೂಕವಾಗಿ ತರಾತುರಿಯಲ್ಲಿ ರಕ್ಷಣಾ ಕೆಲಸ ಮಾಡುತ್ತಿದ್ದಾರೆ. ಆಂಧ್ರ ಮತ್ತು ಬಿಹಾರ್ ರಾಜ್ಯದ ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಿದ್ದರು. ಮೃತಪಟ್ಟಿರುವ ಒಬ್ಬ ಕಾರ್ಮಿಕರ ಗುರುತು ಸಿಕ್ಕಿದ್ದು, ಆತ ಬಿಹಾರದವರು ಎಂದು ತಿಳಿದುಬಂದಿದೆ” ಎಂದರು.
“ಕಟ್ಟಡ ನಿರ್ಮಾಣ ಗುತ್ತಿಗೆದಾರ, ನಿವೇಶನದ ಮಾಲೀಕ ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ರಕ್ಷಣೆ ಕಾರ್ಯ ಮುಗಿದ ನಂತರ ಕಾರ್ಮಿಕರಿಗೆ ಪರಿಹಾರವನ್ನು ಕೊಡಲಾಗುವುದು” ಎಂದರು.