ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಟೆಕ್ಕಿ ಮೇಲೆ ಹರಿದ ಟ್ರಕ್, 22 ವರ್ಷದ ಯುವತಿ ದುರ್ಮರಣ!
ಚೆನ್ನೈ: ರಸ್ತೆ ಗುಂಡಿಯಿಂದ ನಿಯಂತ್ರಣ ತಪ್ಪಿ ಸ್ಕೂಟಿಯಿಂದ ಕೆಳಗೆ ಬಿದ್ದ 22 ವರ್ಷದ ಟೆಕ್ಕಿ ಮೇಲೆ ಟ್ರಕ್ ಹರಿದಿದ್ದು ಆಕೆ ಅಲ್ಲೆ ಕೊನೆಯುಸಿರೆಳೆದಿರುವ ದಾರುಣ ಘಟನೆ ನಡೆದಿದೆ.
ಖಾಸಗಿ ಟೆಕ್ ಕಂಪನಿ ಝೋಹೋದಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಶೋಭನಾ ಮೃತ ದುರ್ದೈವಿಯಾಗಿದ್ದಾಳೆ. ತನ್ನ ಸಹೋದರನನ್ನು ನೀಟ್ ಕೋಚಿಂಗ್ ತರಗತಿಗಾಗಿ ಇನ್‌ಸ್ಟಿಟ್ಯೂಟ್‌ಗೆ ಬಿಡಲು ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಸಹೋದರನಿಗೆ ಗಾಯಗಳಾಗಿದ್ದು ಆತ ಪ್ರಾಣಾಪಾಯದಿಂದ ಪಾರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇನ್ನು ಶೋಭನಾ ಹಾಗೂ ಆಕೆಯ ಸಹೋದರ ಹೆಲ್ಮೆಟ್ ಧರಿಸಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದ ನಂತರ ಸ್ಥಳದಿಂದ ಪರಾರಿಯಾಗಿದ್ದ ಟ್ರಕ್ ಚಾಲಕನನ್ನು ಮೋಹನ್ ಎಂದು ಗುರುತಿಸಲಾಗಿದ್ದು, ಆತನನ್ನು ಬಂಧಿಸಲಾಗಿದೆ. ಮೋಹನ್ ವಿರುದ್ಧ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆ ಕಾರಣಕ್ಕಾಗಿ ಬಂಧಿಸಲಾಗಿದೆ ಎಂದು ಪೂನಮಲ್ಲಿ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇನ್ನು ನಾಗರಿಕ ಅಧಿಕಾರಿಗಳು ಘಟನೆಯ ನಂತರ ರಸ್ತೆ ಗುಂಡಿಯನ್ನು ಮುಚ್ಚಿದ್ದಾರೆ.
ಶೋಭನಾ ನಿಧನಕ್ಕೆ ಜೋಹೊ ಸಿಇಒ ಶ್ರೀಧರ್ ವೆಂಬು ಸಾಮಾಜಿಕ ಮಾಧ್ಯಮದಲ್ಲಿ ಸಂತಾಪ ಸೂಚಿಸಿದ್ದಾರೆ. ಶೋಭನಾ ಅವರ ಸಾವಿಗೆ ಹದಗೆಟ್ಟ ರಸ್ತೆಗಳನ್ನು ದೂಷಿಸಿದ್ದಾರೆ. ವೆಂಬು ತಮ್ಮ ಟ್ವೀಟ್ ನಲ್ಲಿ ‘ನಮ್ಮ ಇಂಜಿನಿಯರ್ ಶೋಭನಾ ಅವರು ಚೆನ್ನೈನ ಮಧುರವಾಯಲ್ ಬಳಿ ಭಾರೀ ಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ಸ್ಕೂಟರ್ ಸ್ಕಿಡ್ ಆಗಿ ದುರಂತವಾಗಿ ಸಾವನ್ನಪ್ಪಿದ್ದಾರೆ. ಅವರ ಕಿರಿಯ ಸಹೋದರನನ್ನು ಶಾಲೆಗೆ ಕರೆದೊಯ್ಯುತ್ತಿದ್ದರು. ನಮ್ಮ ಕೆಟ್ಟ ರಸ್ತೆಗಳು ಅವರ ಕುಟುಂಬಕ್ಕೆ ದುರಂತ ನಷ್ಟವನ್ನುಂಟುಮಾಡಿದೆ ಎಂದು ಟ್ವೀಟಿಸಿದ್ದಾರೆ.