ನಾಯಿ ಮೂತ್ರ ಮಾಡಿದ ಬ್ಯಾಗನ್ನು ದಲಿತ ಮಕ್ಕಳಿಂದ ತೊಳೆಸಿದ ಶಿಕ್ಷಕರು
ಮೈಸೂರು : ನಾಯಿ ಮೂತ್ರ ಮಾಡಿದ ಮೇಲ್ಜಾತಿಗೆ ಸೇರಿದ ವಿದ್ಯಾರ್ಥಿಯೊಬ್ಬನ ಬ್ಯಾಗನ್ನು ಬಲವಂತವಾಗಿ ಪ.ಜಾತಿಗೆ ಸೇರಿದ ವಿದ್ಯಾರ್ಥಿಯಿಂದ ತೊಳಿಸಿದ ಘಟನೆ ಖಂಡನೀಯ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಮಿತಿ ಸಂಚಾಲಕ ಚೋರನಹಳ್ಳಿ ಶಿವಣ್ಣ ದೂರಿದರು.
ಹುಣಸೂರು ತಾಲೂಕು ಬೀಜಗನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮೇಲ್ಜಾತಿಗೆ ಸೇರಿದ ವಿದ್ಯಾರ್ಥಿಯೊಬ್ಬನ ನಾಯಿ ಮೂತ್ರ ವಿಸರ್ಜನೆ ಮಾಡಿದ ಬ್ಯಾಗನ್ನು ಅದೇ ಶಾಲೆಯ ಪ.ಜಾತಿಗೆ ಸೇರಿದ ವಿದ್ಯಾರ್ಥಿಯೊಬ್ಬನಿಂದ ಬಲವಂತವಾಗಿ ತೊಳೆಸಲಾಗಿದೆ. ಟಿ. ನರಸೀಪುರ ತಾಲೂಕು ಬನ್ನೂರು ಹೋಬಳಿ ಕೊಡಗಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಶೌಚಾಲಯಗಳನ್ನು ಪ.ಜಾತಿಗೆ ಸೇರಿದ ಶಾಲಾ ಮಕ್ಕಳಿಂದ ತೊಳೆಸುತ್ತಿರುವ ಘಟನೆ ಖಂಡನಾರ್ಹ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಬುಧವಾರ ಹೇಳಿದರು.
ಈ ಸಂಬಂಧ ತಪ್ಪಿತಸ್ಥರ ವಿರುದ್ಧ ದಲಿತರ ಮೇಲಿನ ದೌರ್ಜನ್ಯ ಕಾಯ್ದೆ ಅಡಿ ಸ್ವಯಂ ಪ್ರೇರಿತವಾಗಿ ಒಂದು ವಾರದೊಳಗೆ ದೂರು ದಾಖಲಿಸಿಕೊಳ್ಳಬೇಕು. ಇಲ್ಲದಿದ್ದರೆ ಎಸ್ಪಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಅವರು ಎಚ್ಚರಿಸಿದರು.
ಘಟನೆಗೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಆದರೆ ಡಿಡಿಪಿಐ ಆಮಿಷಕ್ಕೆ ಒಳಗಾಗಿ ಕಠಿಣ ಕ್ರಮ ಕೈಗೊಂಡಿಲ್ಲ. ಜೊತೆಗೆ ಸಂತ್ರಸ್ತ ಬಾಲಕನ ತಂದೆ ಶಿಕ್ಷಕರ ವಿರುದ್ಧ ನೀಡಿದ ದೂರನ್ನು ಹಿಂಪಡೆದಿರುವುದಾಗಿ ಹೇಳಿಕೆ ನೀಡಿ ಗೊಂದಲ ಮೂಡಿಸಿದ್ದಾರೆ ಎಂದು ಆರೋಪಿಸಿದರು.
ಇದೇ ವೇಳೆ, ಟಿ. ನರಸೀಪುರ ತಾಲೂಕು ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ಮಕ್ಕಳು ಹಾಗೂ ಪೋಷಕರು ಯಾವುದೇ ದೂರು ನೀಡದಂತೆ ಅವರ ಕುಟುಂಬದವರಿಗೆ ಬೆದರಿಕೆ ಹಾಕಲಾಗಿದೆ. ಹೀಗಾಗಿ ಈ ಎರಡೂ ಘಟನೆಗಳ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ತಪ್ಪಿದರೆ ಸಮಿತಿಯು ಉಗ್ರ ಹೋರಾಟ ನಡೆಸಲಿದೆ ಎಂದು ಅವರು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಪ್ರಸನ್ನ, ನಟರಾಜ…, ಸ್ವಾಮಿ, ಬಿಳಿಕೆರೆ ದೇವರಾಜ್ ಹಾಗೂ ದೇವೇಂದ್ರ ಇದ್ದರು.