ನಾನು ನಾಳೆ ಬೆಳಗ್ಗೆ ದೆಹಲಿಗೆ ಹೋಗುತ್ತೇನೆ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್
ಬೆಂಗಳೂರು: ನಾನು ನಾಳೆ ಬೆಳಗ್ಗೆ ದೆಹಲಿಗೆ ಹೋಗುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಹೇಳಿದರು. ಸೋಮವಾರ ರಾತ್ರಿ ಸದಾಶಿವನಗರದ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಸಂಜೆ ದೆಹಲಿಗೆ ಹೋಗಬೇಕಿತ್ತು. ಆದರೆ ಆರೋಗ್ಯ ಸರಿಯಿಲ್ಲ, ಹೀಗಾಗಿ ದೆಹಲಿಗೆ ಹೋಗಿಲ್ಲ. ನನ್ನ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಆಗಿಲ್ಲ. ನಾಳೆ ಶಿಮ್ಲಾದಿಂದ ದೆಹಲಿಗೆ ಸೋನಿಯಾ ಗಾಂಧಿ ಅವರು ವಾಪಸಾಗುತ್ತಾರೆ. ನಾನು ಸಹ ನಾಳೆ ಬೆಳಗ್ಗೆ ದೆಹಲಿಗೆ ಹೋಗುತ್ತಿದ್ದೇನೆ. ಸೋನಿಯಾ ಗಾಂಧಿರವರು ಬರಲಿ ಅಂತಾ ನಾನು ಕಾಯುತ್ತಿದ್ದೆ ಎಂದು ಹೇಳಿದರು.
ಯಾರಿಗೆ ಶಾಸಕರ ಬೆಂಬಲ ಇದೆಯೆಂಬುದು ಮುಖ್ಯವಲ್ಲ. ನನ್ನ ಅಧ್ಯಕ್ಷತೆಯಲ್ಲಿ 135 ಶಾಸಕರು ಆಯ್ಕೆಯಾಗಿದ್ದಾರೆ. ಸಿಎಂ ಆಯ್ಕೆ ಬಗ್ಗೆ ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬಿಟ್ಟಿದ್ದೇವೆ. ನನ್ನ ಜೊತೆ ಯಾವ ಶಾಸಕರು ಇಲ್ಲ, ನನಗೆ ಯಾರ ಬೆಂಬಲ ಬೇಡ. ಯಾರು ಯಾರನ್ನು ಬೇಕಾದರೂ ಕರೆದುಕೊಂಡು ಹೋಗಬಹುದು.
ನನ್ನನ್ನು ಕನಕಪುರದ ಬಂಡೆ ಎಂದು ಕರೆಯುತ್ತಿದ್ದೀರಿ. ನನ್ನನ್ನು ಚಪ್ಪಡಿ ಬೇಕಾದರೂ ಮಾಡಿಕೊಳ್ಳಿ, ದಿಂಡು ಮಾಡಿಕೊಳ್ಳಿ. ಜಲ್ಲಿ ಬೇಕಾದರೂ ಮಾಡಿಕೊಳ್ಳಿ. ಸದ್ಯ ಆರೋಗ್ಯ ಸಮಸ್ಯೆಯಾಗಿದೆ, ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದಾರೆ ಎಂದರು.
ಹೊಟ್ಟೆಯಲ್ಲಿ ಸೋಂಕಿನಿಂದ ಲೂಸ್ ಮೋಷನ್ ರೀತಿ ಆಗಿದೆ. ಪ್ರಯಾಣ ಎಷ್ಟು ಮುಖ್ಯವೋ ಆರೋಗ್ಯ ಸಹ ಅಷ್ಟೇ ಮುಖ್ಯ. ನಾಳೆ ಮುಂಜಾನೆ ಸಹ ಬಂದು ತಪಾಸಣೆ ಮಾಡಲಾಗುತ್ತದೆ.