ನಟಿ ತುನಿಷಾ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ : ಬಾಯ್ ಫ್ರೆಂಡ್ ಬಿಚ್ಚಿಟ್ಟ ಡೇಟಿಂಗ್ ವಿಷಯ
ಹಿಂದಿ ಕಿರುತೆರೆ ನಟಿ ತುನಿಷಾ ಶರ್ಮಾ ಆತ್ಮಹತ್ಯೆ ಪ್ರಕರಣಕ್ಕೆ ಮತ್ತೋರ್ವ ಹುಡುಗನ ಎಂಟ್ರಿ ಆಗಿದೆ. ತುನಿಷಾ ಬಾಯ್ ಫ್ರೆಂಡ್ ಶಿಜಾನ್ ಪರ ವಕೀಲರು ಈ ಮಾಹಿತಿಯನ್ನು ಕೋರ್ಟ್ ಗಮನಕ್ಕೆ ತಂದಿದ್ದಾರೆ. ಶಿಜಾನ್ ಮತ್ತು ತುನಿಷಾ ಪ್ರೀತಿಸುತ್ತಿದ್ದರು ನಿಜ. ಆದರೆ, ತುನಿಷಾ ಆತ್ಮಹತ್ಯೆ ಮಾಡಿಕೊಂಡ ಹದಿನೈದು ದಿನಕ್ಕೂ ಮುನ್ನ ಬ್ರೇಕ್ ಅಪ್ ಆಗಿತ್ತು. ಆಕೆ ಡೇಟಿಂಗ್ ಆಪ್ ಬಳಸುತ್ತಿದ್ದಳು. ಅಲಿ ಎನ್ನುವ ಹುಡುಗನ ಜೊತೆ ಡೇಟಿಂಗ್ ಮಾಡುತ್ತಿದ್ದಳು ಎಂದು ತಿಳಿಸಿದ್ದಾರೆ. ಆಕೆ ಸಾಯುವ ಮುನ್ನ ಅಲಿ ಜೊತೆ ವಿಡಿಯೋ ಚಾಟ್ ಮಾಡಿದ್ದಳು ಎಂದೂ ಅವರು ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಹೇಳಿಕೆಗಳು ಬರುತ್ತಿವೆ. ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದರೂ, ಆರೋಪ ಪ್ರತ್ಯಾರೋಪಗಳು ನಡೆಯುತ್ತಲೇ ಇವೆ. ನನ್ನ ಮಗಳು ತುನಿಷಾ ಸಾವಿಗೆ ನೇರವಾಗಿ ಅವಳ ಬಾಯ್ ಫ್ರೆಂಡ್ ಶಿಜಾನ್ ಕಾರಣವೆಂದು ಮತ್ತೊಮ್ಮೆ ತುನಿಷಾ ತಾಯಿ ಆರೋಪ ಮಾಡಿದ್ದಾರೆ. ಶಿಜಾನ್ ಕಿರುಕುಳದ ಬಗ್ಗೆ ಮತ್ತೊಂದು ಬಾಂಬ್ ಹಾಕಿರುವ ಅವರು, ಅವನೊಬ್ಬ ಡ್ರಗ್ಸ್ ವ್ಯಸನಿ ಆಗಿದ್ದ. ಅದನ್ನು ಸಂಭಾಳಿಸಲೆಂದೇ ನನ್ನ ಮಗಳು ನಮ್ಮಿಂದ ಮೂರು ತಿಂಗಳಲ್ಲಿ ಮೂರು ಲಕ್ಷ ರೂಪಾಯಿ ಪಡೆದಿದ್ದಳು. ಅವನ ಆ ಚಟಕ್ಕೆ ನನ್ನ ಮಗಳು ದುಡ್ಡಿನ ಭಾರ ಹೊರಬೇಕಿತ್ತು ಎಂದಿದ್ದಾರೆ.
ತುನಿಷಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು. ಸ್ವತಃ ತುನಿಷಾ ತಾಯಿಯೇ ಅವಳನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ನಮ್ಮ ಕುಟುಂಬದ ಜೊತೆ ತುನಿಷಾ ಚೆನ್ನಾಗಿಯೇ ಇದ್ದಳು ಎಂದು ಮೊನ್ನೆಯಷ್ಟೇ ಶಿಜಾನ್ ಕುಟುಂಬ ಮಾಧ್ಯಮಗಳ ಜೊತೆ ಮಾತನಾಡುತ್ತಾ ತಿಳಿಸಿತ್ತು. ಈ ಮಾತಿಗೆ ತುನಿಷಾ ತಾಯಿ ಪ್ರತಿಕ್ರಿಯೆ ಕೊಟ್ಟು. ನನ್ನ ಮಗಳು ಚೆನ್ನಾಗಿಯೇ ಇದ್ದಳು. ಅವರ ಮಗ ಡ್ರಗ್ಸ್ ವ್ಯಸನಿ ಆಗಿದ್ದ ಎಂದು ತಿರುಗೇಟು ನೀಡಿದ್ದಾರೆ.
ತನ್ನ ತುನಿಷಾ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ತನ್ನ ಮಗಳ ಸಾವಿಗೆ ಆಕೆಯ ಪ್ರಿಯಕರ ಶಿಜಾನ್ ಮತ್ತು ಆಕೆಯ ಕುಟುಂಬವೇ ಕಾರಣ. ನನ್ನ ಮಗಳನ್ನು ಅವರು ಮತಾಂತರ ಮಾಡಲು ಯತ್ನಿಸಿದ್ದರು. ಈ ಸಾವಿನ ಹೊಣೆಯನ್ನು ಅವರೇ ಹೊರಬೇಕು ಎಂದು ತುನಿಷಾ ಶರ್ಮಾ ಅವರ ತಾಯಿಯು ಆರೋಪ ಮಾಡಿದ್ದರು. ಈ ಆರೋಪಕ್ಕೆ ಶಿಜಾನ್ ಕುಟುಂಬ ಉತ್ತರ ನೀಡಿದ್ದು, ತುನಿಷಾ ನಮ್ಮ ಕುಟುಂಬದ ಜೊತೆ ಅನ್ಯೋನ್ಯವಾಗಿದ್ದರು. ಅವರ ತಾಯಿಯೇ ಸರಿ ಇರಲಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿರುವ ತುನಿಷಾ ಬಾಯ್ ಫ್ರೆಂಡ್ ಶಿಜಾನ್ ಕುಟುಂಬ, ‘ಅವರ ತಾಯಿಗೆ ದುಡ್ಡಿನ ಹಪಾಹಪಿ ಇತ್ತು. ಹಾಗಾಗಿ ಮಗಳನ್ನು ಕೆಟ್ಟದ್ದಾಗಿ ನಡೆಸಿಕೊಂಡರು. ತುನಿಷಾ ತಾಯಿ ಮತ್ತು ಆಕೆಯ ಚಿಕ್ಕಪ್ಪ ಆ ಹುಡುಗಿಗೆ ತುಂಬಾ ತೊಂದರೆ ಕೊಟ್ಟಿದ್ದಾರೆ. ಫೋನ್ ವೈಯರ್ ನಿಂದ ಸಾಯಿಸಲು ಪ್ರಯತ್ನಿಸಿದ್ದರು. ಈಗ ಸುಖಾಸುಮ್ಮನೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.