ದಕ್ಷಿಣದ ಸಿನಿಮಾಗಳತ್ತ ಬಾಲಿವುಡ್ ನಟಿ ಐಶ್ವರ್ಯ ರೈ ಚಿತ್ತ
ಹಲವು ವರ್ಷಗಳಿಂದ ಖ್ಯಾತನಟಿ ಐಶ್ವರ್ಯ ರೈ (Aishwarya Rai) ಯಾವುದೇ ಬಾಲಿವುಡ್ ಸಿನಿಮಾಗಳನ್ನು ಒಪ್ಪಿಕೊಳ್ಳದೇ ಇದ್ದರೂ, ದಕ್ಷಿಣದ ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಇತ್ತೀಚೆಗಷ್ಟೇ ರಿಲೀಸ್ ಆಗಿರುವ ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್ 1’ ಚಿತ್ರದಲ್ಲಿ ನಟಿಸಿ ಗಮನ ಸೆಳೆದಿದ್ದರು. ಈಗ ಮತ್ತೆ ತಮಿಳಿನ (Tamil) ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಈ ಮೂಲಕ ದಕ್ಷಿಣದ ಸಿನಿಮಾಗಳತ್ತ ಅವರು ಚಿತ್ತ ನೆಟ್ಟಿದ್ದಾರೆ.
ಸಿನಿಮಾಗಳ ಆಯ್ಕೆಯ ವಿಷಯದಲ್ಲಿ ನಾನು ತುಂಬಾ ಚ್ಯೂಸಿಯಾಗಿದ್ದೇನೆ. ಹಾಗಾಗಿ ಸಿಕ್ಕ ಸಿಕ್ಕ ಸಿನಿಮಾಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಐಶ್ವರ್ಯ ಹಲವಾರು ಬಾರಿ ಹೇಳಿದ್ದಿದೆ. ಅವರು ಹೇಳಿದಂತೆ ನಡೆದುಕೊಂಡೂ ಇದ್ದಾರೆ. ಈ ಕಾರಣದಿಂದಾಗಿ ಅವರು ಹೆಚ್ಚೆಚ್ಚು ದಕ್ಷಿಣ ಭಾರತದ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಈ ಮೂಲಕ ದಕ್ಷಿಣ ಭಾರತದ ಸಿನಿಮಾಗಳ ಘನತೆಯನ್ನು ಎತ್ತಿ ಹಿಡಿಯುತ್ತಿದ್ದಾರೆ.
ಐಶ್ವರ್ಯ ರೈ ಇದೀಗ ಮತ್ತೊಂದು ತಮಿಳು ಚಿತ್ರಕ್ಕೆ ಸಹಿ ಮಾಡಿದ್ದು, ಅಜಿತ್ ಕುಮಾರ್ (Ajith) ಈ ಸಿನಿಮಾದ ನಾಯಕ ಎಂದು ಹೇಳಲಾಗುತ್ತಿದೆ. ಅಜಿತ್ ನಟನೆಯ ವಾರಿಸು ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಭರ್ಜರಿ ಕಲೆಕ್ಷನ್ ಮಾಡಿರುವ ಬೆನ್ನಲ್ಲೇ ಅವರ ಹೊಸ ಸಿನಿಮಾ ಕೂಡ ಘೋಷಣೆಯಾಗಿದ್ದು, ಈ ಸಿನಿಮಾದಲ್ಲಿ ಐಶ್ವರ್ಯ ರೈ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ. ಈ ಚಿತ್ರಕ್ಕೆ ನಯನತಾರಾ ಪತಿ ವಿಘ್ನೇಶ್ ಶಿವನ್ (Vignesh Sivan) ನಿರ್ದೇಶಕರು.
ಇದೊಂದು ಭಾರೀ ಬಜೆಟ್ ಸಿನಿಮಾವಾಗಿದ್ದು ಲೈಕಾ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಚಿತ್ರ ಮೂಡಿ ಬರಲಿದೆ. ಈ ಚಿತ್ರದಲ್ಲಿ ಅಜಿತ್ ಹೊಸ ಬಗೆಯ ಹಾಗೂ ರಗಡ್ ಲುಕ್ ಇರುವಂಥ ಪಾತ್ರವನ್ನು ಮಾಡಲಿದ್ದಾರಂತೆ. ಇದು ಅಜಿತ್ ಅವರ 62ನೇ ಸಿನಿಮಾವಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ, ಅತೀ ಶೀಘ್ರದಲ್ಲೇ ಸಿನಿಮಾದ ಬಗ್ಗೆ ಹಲವು ಮಾಹಿತಿಗಳನ್ನು ಹಂಚಿಕೊಳ್ಳಲಿದೆ ಚಿತ್ರತಂಡ.