ನಕಲಿ ರಜೆ ಆದೇಶ: ಎಫ್.ಐ.ಆರ್ ದಾಖಲಿಸಲು ಡಿಸಿ ಸೂಚನೆ
ಜುಲೈ 18 ರಂದು ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ನಕಲಿ ಆದೇಶವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಈ ಬಗ್ಗೆ ಎಫ್.ಐ.ಆರ್. ದಾಖಲಿಸಲು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶಿಸಿದ್ದಾರೆ.
ಈ ಹಿಂದಿನ ಆದೇಶವನ್ನು ಎಡಿಟ್ ಮಾಡಿ, ಜೂನ್ 18 ಎಂದು ತಿದ್ದಲಾಗಿದೆ. ಇದನ್ನು ಸೃಷ್ಟಿಸಿದವರ ಮೇಲೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹಂಚುವವರ ವಿರುದ್ಧ ಎಫ್.ಐ.ಆರ್. ದಾಖಲಿಸಲು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಕಾರು ಕಂದಕಕ್ಕೆ ಬಿದ್ದು ಬೆಂಗಳೂರಿನ ಮೂವರು ದುರ್ಮರಣ
ಬೆಂಗಳೂರು: ಪ್ರವಾಸಕ್ಕೆಂದು ತೆರಳಿದ್ದ ಬೆಂಗಳೂರು ಮೂಲದ ಒಂದೇ ಕುಟುಂಬದ ಮೂವರು ಜಮ್ಮು-ಕಾಶ್ಮೀರದಲ್ಲಿ ದುರ್ಮರಣ ಹೊಂದಿದ್ದಾರೆ. ತಂದ್ರ ದಾಸ್(67), ಮೊನಾಲಿಸಾ ದಾಸ್(41) ಸೇರಿದಂತೆ ಮೂವರ ಮೃತಪಟ್ಟಿದ್ದಾರೆ. ಬೆಳ್ಳಂದೂರಿನ ಗ್ರೀನ್ ಗ್ಲೆನ್ ಲೇಔಟ್ ನಿವಾಸಿಗಳಾಗಿದ್ದು, ಅಮರನಾಥ ಯಾತ್ರೆ ಸಮೀಪದ ಝೋಜಿಲ್ ಪಾಸ್ ಬಳಿ ಕಾರು ಪ್ರಪಾತಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ. ದುರಂತ ಅಂದ್ರೆ ಚಾಲಕ ಹ್ಯಾಂಡ್ ಬ್ರೇಕ್ ಹಾಕದೇ ಇಳಿದು ಹೋಗಿದ್ದರಿಂದ ಕಾರು ತನ್ನಷ್ಟಕ್ಕೆ ತಾನೇ ಮೂವ್ ಆಗಿ ಕಂದಕಕ್ಕೆ ಉರುಳಿಬಿದ್ದಿದೆ.
ಮೃತಪಟ್ಟ ಕುಟುಂಬ ಜಮ್ಮು-ಕಾಶ್ಮೀರದಲ್ಲಿ ಬಾಡಿಗೆ ಕಾರಿನಲ್ಲಿ ಪ್ರಯಾಣಿಸುತ್ತಿತ್ತು. ಆದ್ರೆ, ಮಾರ್ಗಮಧ್ಯೆ ಅಮರನಾಥ ಸಮೀಪದ ಝೋಜಿಲ್ ಪಾಸ್ ಬಳಿ ಬೇರೊಂದು ಕಾರು ರಸ್ತೆಯಲ್ಲಿ ಕೆಟ್ಟು ನಿಂತಿದೆ. ಅದನ್ನು ನೋಡಲು ಕುಟುಂಬವನ್ನು ಕರೆದುಕೊಂಡು ಹೋಗುತ್ತಿದ್ದ ಚಾಲಕ ಕಾರು ನಿಲ್ಲಿಸಿದ್ದಾನೆ. ಅಲ್ಲದೇ ಏನಾಗಿದೆ ಎಂದು ಕಾರು ಇಳಿದು ಹೋಗಿದ್ದಾರೆ. ಆದ್ರೆ, ಇಳಿದು ಹೋಗುವ ಮುನ್ನ ಕಾರಿನ ಹ್ಯಾಂಡ್ ಬ್ರೇಕ್ ಹಾಕುವುದನ್ನು ಮರೆತಿದ್ದಾನೆ. ಇದರಿಂದ ಕಾರು ತನ್ನಷ್ಟಕ್ಕೆ ತಾನೇ ಮೂವ್ ಆಗಿ ರಸ್ತೆ ಪಕ್ಕದಲ್ಲಿದ್ದ ಪ್ರಪಾತಕ್ಕೆ ಬಿದ್ದಿದೆ.
ಪರಿಣಾಮ ಘಟನೆಯಲ್ಲಿ ಬೆಂಗಳೂರಿನ ಬೆಳ್ಳಂದೂರಿನ ಗ್ರೀನ್ ಗ್ಲೆನ್ ಲೇಔಟ್ನ ಕುಟುಂಬ ದುರಂತ ಸಾವು ಕಂಡಿದ್ದಾರೆ. ಇನ್ನು CRPF, ಜಮ್ಮು-ಕಾಶ್ಮೀರ ಪೊಲೀಸರು, ಮೂವರ ಮೃತದೇಹಗಳನ್ನು ಹೊರ ತೆಗೆದಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ 9 ವರ್ಷ ಬಾಲಕಿ ಅದ್ರಿತಾ ದಾಸ್ ಬದುಕುಳಿದಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಶೆಡ್‌ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು – ತಾಯಿ, ಮಗಳು ಸಜೀವ ದಹನ
ಬಾಗಲಕೋಟೆ: ಸಿಂಟೆಕ್ಸ್ ಟ್ಯಾಂಕ್‌ನಲ್ಲಿ ಪೆಟ್ರೋಲ್ (Petrol) ತುಂಬಿಸಿ ಶೆಡ್ (Shed) ಮೇಲೆ ಸುರಿದು ಬೆಂಕಿ ಹಚ್ಚಿದ ಪರಿಣಾಮ ತಾಯಿ-ಮಗಳು ಸಜೀವ ದಹನವಾಗಿದ್ದು, ಮೂವರು ಗಂಭೀರ ಗಾಯಗೊಂಡ ಘಟನೆ ಬಾಗಲಕೋಟೆ (Bagalkote) ಜಿಲ್ಲೆ ಮುಧೋಳ ತಾಲೂಕಿನ ಬೆಳಗಲಿ ಗ್ರಾಮದಲ್ಲಿ ನಡೆದಿದೆ.
ಜೈಬಾನ್ (55), ಶಬಾನ್ (25) ಮೃತ ದುರ್ದೈವಿಗಳು. ಬೆಂಕಿ ಹಚ್ಚಿದ ಪರಿಣಾಮ ತಾಯಿ-ಮಗಳು ಸಜೀವ ದಹನವಾಗಿದ್ದುವ, ಶೆಡ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಘಟನೆಯಲ್ಲಿ ದಸ್ತಗೀರಸಾಬ್, ಸುಬಾನ್ ಹಾಗೂ ಸಿದ್ದಿಕಿ ಎಂಬವರಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೆಂಡತಿಯ ಕಾಟ ತಾಳಲಾರದೆ ಪತಿ ಆತ್ಮಹತ್ಯೆ..!
ನೆಲಮಂಗಲ(ಜು.16): ಹೆಂಡತಿಯ ಕಾಟ ತಾಳಲಾರದೆ ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ತೊಣಚಿನಕುಪ್ಪೆ ಗ್ರಾಮದಲ್ಲಿ ಇಂದು(ಮಂಗಳವಾರ) ನಡೆದಿದೆ. ಗುಲ್ಜಾರ್ ಹುಸೈನ್ ಚೌಧರಿ(20) ಆತ್ಮಹತ್ಯೆಗೆ ಶರಣಾದ ದುರ್ದೈವಿಯಾಗಿದ್ದಾನೆ.
ಮೃತ ಗುಲ್ಜಾರ್ ಹುಸೈನ್ ಚೌಧರಿ ಲಾರಿ ಚಾಲಕನಾಗಿದ್ದನು. ಅಸ್ಸಾಂ ಮೂಲದ ಲಾರಿ ಚಾಲಕ ಗುಲ್ಜಾರ್ ಮದುವೆ ನಂತರ ತೊಣಚಿನಕುಪ್ಪೆ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಹೆಂಡತಿಯ ಮೇಕಪ್ ಆಸೆ ಹಾಗೂ ಅತಿಯಾದ ಫೋನ್ ಬಳಕೆಯಿಂದ ರೋಸಿ ಹೋಗಿದ್ದನು ಎಂದು ಹೇಳಲಾಗುತ್ತಿದೆ.
ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ರು ಹೆಂಡತಿ ಶೋಕಿಯಲ್ಲಿದ್ದಳು. ಇದರಿಂದ ಮನನೊಂದ ಗುಲ್ಜಾರ್ ಹುಸೈನ್ ಚೌಧರಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗಂಡ ಹೆಂಡತಿ ನಡುವೆ ಸಾಕಷ್ಟು ಬಾರಿ ಗಲಾಟೆ ನಡೆದಿದ್ದವು, ಇದರಿಂದ ಮನನೊಂದು ಗುಲ್ಜಾರ್ ಹುಸೈನ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರವಾರ ಡಿಪೋಗೆ ನುಗ್ಗಿದ ನೀರು – 50ಕ್ಕೂ ಹೆಚ್ಚು ಬಸ್ಸುಗಳು ಜಲಾವೃತ
ಕಾರವಾರ: ಉತ್ತರ ಕನ್ನಡದಲ್ಲಿ (Uttara Kannada) ಭಾರೀ ಮಳೆಯಾಗುತ್ತಿದ್ದು (Rain) ನಗರದಲ್ಲಿರುವ ಕೆಎಸ್‌ಆರ್‌ಟಿಸಿ (KSRTC) ಬಸ್ ಡಿಪೋ (Bus Depot) ಜಲಾವೃತವಾಗಿದೆ.
50ಕ್ಕೂ ಹೆಚ್ಚು ಬಸ್ಸುಗಳು ನೀರಿನಲ್ಲಿ ಜಲಾವೃತವಾಗಿದ್ದು ವಿವಿಧ ಭಾಗಗಳಿಗೆ ತೆರಳುವ ಬಸ್ಸುಗಳ ಸೇವೆಯಲ್ಲಿ ವ್ಯತ್ಯಯವಾಗಿದೆ. ಹಬ್ಬುವಾಡ ರಸ್ತೆಯಲ್ಲಿ ಡಿಪೋ ಇದ್ದು ಬಸ್ಸುಗಳನ್ನು ಹೊರ ತೆಗೆಯಲು ಚಾಲಕರು ಹರಸಾಹಸ ಪಡುತ್ತಿದ್ದಾರೆ. ಮೂರು ದಿನಗಳಿಂದ ಬಿಟ್ಟು ಬಿಡದೇ ಮಳೆ ಸುರಿಯುತ್ತಿದ್ದು, ಚರಂಡಿ ನೀರು ಡಿಪೋಗೆ ನುಗ್ಗಿದ ಪರಿಣಾಮ ಸಮಸ್ಯೆಯಾಗಿದೆ.
ಹೊನ್ನಾವರ ಭಾಸ್ಕೇರಿ ವರ್ನಕೇರಿ ಬಳಿ ಮತ್ತೆ ಗುಡ್ಡ ಕುಸಿತವಾಗಿದ್ದು ರಾಷ್ಟ್ರೀಯ ಹೆದ್ದಾರಿ 69 ಸಂಚಾರ ತಾತ್ಕಾಲಿಕ ಬಂದ್ ಆಗಿತ್ತು. ಹೊನ್ನಾವರ -ಬೆಂಗಳೂರು ರಸ್ತೆಯಲ್ಲಿ ನೂರಾರು ವಾಹನಗಳು ಬೆಳಗ್ಗೆ ನಿಂತಿದ್ದವು. ಗುಡ್ಡ ತೆರವು ಮಾಡಿದ ಬಳಿಕ ಈಗ ವಾಹನಗಳು ಸಂಚರಿಸುತ್ತಿವೆ.