'ದೈವನರ್ತಕರಿಗೆ ಮಾಸಾಶನ' -2 ತಿಂಗಳು ಕಳೆದರೂ ಹೊರಬೀಳದ ಮಾರ್ಗಸೂಚಿ
ಬೆಂಗಳೂರು, ಜ 26: ಇತ್ತೀಚೆಗೆ ಕರ್ನಾಟಕ ಸರ್ಕಾರವೂ 60 ವರ್ಷ ದಾಟಿದ ದೈವನರ್ತಕರಿಗೆ ಮಾಸಿಕ ಗೌರವಧನ ನೀಡುವ ಯೋಜನೆಯನ್ನು ಪ್ರಕಟಿಸಿತ್ತು. ಆದರೆ ಅದಾಗಿ ಎರಡು ತಿಂಗಳು ಕಳೆದಿದ್ದರೂ, ಇದಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳು ಇನ್ನೂ ಹೊರಬಂದಿಲ್ಲ.
ಸರಿಯಾದ ಮಾಹಿತಿ ಲಭ್ಯವಾಗದ ಕಾರಣ ಫಲಾನುಭವಿಗಳ ವಿವರ ಸಂಗ್ರಹಿಸುವುದು ಕಷ್ಟಕರವಾಗಿದೆ ಎನ್ನುತ್ತಾರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು.
ಸದ್ಯ ದೈವ ನರ್ತಕರನ್ನು ಜಾನಪದ ಕಲಾವಿದರ ಪಟ್ಟಿಯಲ್ಲಿ ಸೇರಿಸಲಾಗಿದೆ. ಆದರೆ, ದೈವ ನರ್ತಕ ಬಗ್ಗೆಯೇ ಪ್ರತ್ಯೇಕ ಸಮೀಕ್ಷೆ ನಡೆದಿಲ್ಲ. ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸರ್ಕಾರ ಸರಳಗೊಳಿಸಬೇಕಾಗಿರುವ ಅನಿವಾರ್ಯತೆಯೂ ಇದೆ. ಹೀಗಾಗಿ ಇಲ್ಲಿಯವರೆಗೆ ದಕ್ಷಿಣ ಕನ್ನಡದ ಇಬ್ಬರು ಮಾತ್ರ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ಈಗಾಗಲೇ ಅನೇಕ ಕಲಾವಿದರು ವೃದ್ಧಾಪ್ಯ ವೇತನ (ಸಂಧ್ಯಾ ಸುರಕ್ಷಾ) ಪಡೆಯುತ್ತಿದ್ದು, ಈ ಹೊಸ ಮಾಸಿಕ ಗೌರವಧನಕ್ಕೆ ಅರ್ಜಿ ಸಲ್ಲಿಸುವಂತಿಲ್ಲ. ಅವರು ಇದನ್ನು ಪಡೆಯಬೇಕಾದರೆ, ತಮ್ಮ ಸದ್ಯದ ಪಿಂಚಣಿಯನ್ನು (ರೂ. 1,000) ರದ್ದುಗೊಳಿಸಬೇಕಾಗುತ್ತದೆ. ಆದರೆ, ಹಳೆಯ ಪಿಂಚಣಿ ರದ್ದುಪಡಿಸಿ ಹೊಸ ಯೋಜನೆಗೆ ಅರ್ಜಿ ಸಲ್ಲಿಸುವ ಈ ಪ್ರಕ್ರಿಯೆ ಜಟಿಲವಾಗಿದೆ.