‘ದೇಹದಲ್ಲಿ ಕೊಲ್ಲುವಂಥ ನೋವು’; ಆಸ್ಪತ್ರೆ ಸೇರಿದ ನಟಿ ಖುಷ್ಬೂ ಸುಂದರ್

ಬಿಜೆಪಿ ನಾಯಕಿ, ಹಿರಿಯ ನಟಿ ಖುಷ್ಬೂ ಸುಂದರ್ (khushbu sundar) ಅವರು ಇತ್ತೀಚೆಗಷ್ಟೇ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದರು. ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಆಗಿ ಅವರು ನೇಮಕಗೊಂಡಿದ್ದರು. ಈ ಬೆನ್ನಲ್ಲೇ ಅಭಿಮಾನಿಗಳಿಗೆ ಆತಂಕದ ಸುದ್ದಿ ಸಿಕ್ಕಿದೆ. ಖುಷ್ಬೂ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತೀವ್ರ ಜ್ವರದಿಂದ ಆಸ್ಪತ್ರೆ ಸೇರಿರುವುದಾಗಿ ಖುಷ್ಬೂ ಮಾಹಿತಿ ನೀಡಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋ ಅನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವರು ಬೇಗ ಗುಣಮುಖರಾಗಲಿ ಎಂದು ಫ್ಯಾನ್ಸ್ ಕೋರುತ್ತಿದ್ದಾರೆ.

ಆಸ್ಪತ್ರೆಯ ಕೆಲ ಫೋಟೋಗಳನ್ನು ಖುಷ್ಬೂ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಜೊತೆಗೆ ದೇಹದಲ್ಲಿ ತೀವ್ರ ನೋವು ಹಾಗೂ ದೌರ್ಬಲ್ಯ ಕಾಡುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ‘ನಾನು ಹೇಳಿದಂತೆ, ಜ್ವರ ಕೆಟ್ಟದಾಗಿದೆ. ಪರಿಣಾಮ ತುಂಬಾನೇ ಗಂಭೀರವಾಗಿದೆ. ತೀವ್ರ ಜ್ವರ ಹಾಗೂ ಸಾಯಿಸುವಂತಹ ದೇಹದ ನೋವಿನಿಂದ ನಾನು ಆಸ್ಪತ್ರೆ ಸೇರಿದ್ದೇನೆ. ಒಳ್ಳೆಯ ಚಿಕಿತ್ಸೆ ಸಿಗುತ್ತಿದೆ’ ಎಂದಿದ್ದಾರೆ ಖುಷ್ಬೂ.
‘ಅನಾರೋಗ್ಯದ ಚಿಹ್ನೆ ಕಾಣಿಸಿದಾಗ ಅದನ್ನು ನಿರ್ಲಕ್ಷಿಸಬೇಡಿ. ನಾನು ಚೇತರಿಸಿಕೊಳ್ಳುತ್ತಿದ್ದೇನೆ. ಇದಕ್ಕೆ ಇನ್ನೂ ಬಹಳ ಸಮಯ ಬೇಕಿದೆ’ ಎಂದು ಖುಷ್ಬೂ ಬರೆದುಕೊಂಡಿದ್ದಾರೆ. ದೇಶದಲ್ಲಿ ಮತ್ತೆ ಕೊರೊನಾ ಹೆಚ್ಚುತ್ತಿದೆ. ಖುಷ್ಬೂಗೆ ಅಂಟಿರುವುದು ಕೊರೊನಾ ಸೋಂಕೆ ಎಂಬ ಪ್ರಶ್ನೆಯೂ ಮೂಡಿದೆ. ನಟಿಯ ಕಡೆಯಿಂದ ಇದಕ್ಕೆ ಸ್ಪಷ್ಟನೆ ಸಿಕ್ಕಿಲ್ಲ. ಖುಷ್ಬೂ ಬೇಗ ಚೇತರಿಸಿಕೊಳ್ಳಲಿ ಎಂದು ಎಲ್ಲರೂ ಶುಭ ಹಾರೈಸುತ್ತಿದ್ದಾರೆ. ‘ಬೇಗ ಸುಧಾರಿಸಿಕೊಳ್ಳಿ. ಮತ್ತೆ ಮೊದಲಿನಂತೆ ಓಡಾಡುವಂತಾಗಲಿ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ರಾಶಿ ಖನ್ನಾ ಕೂಡ ನಟಿಗೆ ವಿಶ್ ಮಾಡಿದ್ದಾರೆ.

ಖುಷ್ಬೂ ಸದ್ಯ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ದಳಪತಿ ವಿಜಯ್ ಅಭಿನಯದ ‘ವಾರಿಸು’ ಚಿತ್ರದಲ್ಲಿ ಅವರು ನಟಿಸಿದ್ದಾರೆ ಎನ್ನಲಾಗಿತ್ತು. ವಿಜಯ್, ರಶ್ಮಿಕಾ ಮಂದಣ್ಣ ಹಾಗೂ ಖುಷ್ಬೂ ಅವರ ಫೋಟೋ ವೈರಲ್ ಆಗಿತ್ತು. ಆದರೆ, ಸಿನಿಮಾದಲ್ಲಿ ಅವರು ಎಲ್ಲಿಯೂ ಕಾಣಿಸಿಕೊಳ್ಳಲೇ ಇಲ್ಲ. ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು. ಸಿನಿಮಾದ ಅವಧಿ ದೀರ್ಘ ಆದ ಕಾರಣ ಅವರ ಪಾತ್ರಕ್ಕೆ ಕತ್ತರಿ ಹಾಕಲಾಗಿದೆ ಅನ್ನೋದು ಬಳಿಕ ಗೊತ್ತಾಯಿತು. ಖುಷ್ಬೂ ಅವರು ಕನ್ನಡ ಮಂದಿಗೂ ಪರಿಚಿತ. ಕನ್ನಡದಲ್ಲೂ ಅವರು ಸಿನಿಮಾ ಮಾಡಿ ಜನಪ್ರಿಯತೆ ಪಡೆದಿದ್ದಾರೆ. ಅವರಿಗೆ ಇಲ್ಲಿಯೂ ದೊಡ್ಡ ಅಭಿಮಾನಿ ಬಳಗ ಇದೆ.