ದೇಶ ವಿಭಜನೆ ಹೇಳಿಕೆ ಮುಳುವಾಯಿತಾ ಡಿಕೆ ಸುರೇಶ್ ಗೆ..? ಸೋಲಿನ ಬಳಿಕ ಡಿಕೆ ಸುರೇಶ್ ಪ್ರತಿಕ್ರಿಯೆ ಏನು..!
ಬೆಂಗಳೂರು, ಜೂನ್ 4: ಮೂರು ಬಾರಿ ಸಂಸದನಾಗಿ ಕೆಲಸ ಮಾಡಲು ಅವಕಾಶ ಕೊಟ್ಟಿದ್ದೀರಿ. ನಾಲ್ಕನೇ ಬಾರಿ ಅಗ್ನಿಪರೀಕ್ಷೆಯಲ್ಲಿ ವಿರಾಮ ಕೊಟ್ಟಿದ್ದೀರಿ. ಮಾದ್ಯಮದ ಮುಖಾಂತರ ಕ್ಷೇತ್ರದ ಮತದಾರರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಬೆಂಗಳೂರು ಗ್ರಾಮಾಂತರ (Bengaluru rural) ಕ್ಷೇತ್ರದ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ (DK Suresh) ಹೇಳಿದರು. ಲೋಕಸಭೆ ಚುನಾವಣೆ ಫಲಿತಾಂಶ (Lok Sabha Election Result) ಪ್ರಕಟಗೊಳ್ಳುತ್ತಿದ್ದು, ಪ್ರತಿಸ್ಪರ್ಧಿ ಬಿಜೆಪಿಯ ಡಾ. ಸಿಎನ್ ಮಂಜುನಾಥ್ (Dr CN Manjunath) ಗೆಲುವು ಖಚಿತವಾಗುತ್ತಿದ್ದಂತೆಯೇ ಸುರೇಶ್ ಮಾಧ್ಯಮಗಳಿಗೆ ಹೇಳಿಕೆ ನೀಡಿದರು.
ಮತದಾರ ಪ್ರಭುಗಳು ಕೊಟ್ಟಿರುವ ತಿರ್ಮಾನವನ್ನು ಸ್ವಾಗತಿಸುತ್ತೇನೆ. ಗೆಲುವು ಸಾಧಿಸಿದ ಡಾ. ಮಂಜುನಾಥ್ ಅವರಿಗೆ ಧನ್ಯವಾದ ಹೇಳುತ್ತೇನೆ. ನನಗೆ ಅವಕಾಶ ಕೊಟ್ಟ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ನಾಯಕರಾದ ರಾಹುಲ್ ಗಾಂಧಿಯವರಿಗೆ ಹಾಗೂ ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ತಿಳಿಸುತ್ತೇನೆ ಎಂದು ಅವರು ಹೇಳಿದರು.
ಹೊಸಬರು ಚೆನ್ನಾಗಿ ಕೆಲಸ ಮಾಡಲಿ. ಕ್ಷೇತ್ರಕ್ಕೆ ಒಳ್ಳೆಯದಾಗಲಿ. ಕಾರ್ಯಕರ್ತರ ಜೊತೆ ನಾನು ಜೊತೆಯಾಗಿರುತ್ತೇನೆ. ಸೋಲು ಗೆಲುವನ್ನು ಸಮಾನವಾಗಿ ಸ್ವಿಕರಿಸಬೇಕು. ನಾನು ಸೋಲನ್ನು ಸ್ವೀಕರಿಸಿದ್ದೇನೆ. ಗೆಲ್ಲುವ ವಿಶ್ವಾಶ ಇತ್ತು. ಆದರೆ, ಜನ ಬೇರೆ ತಿರ್ಮಾನ ಕೊಟ್ಟಿದ್ದಾರೆ.
ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಿಂದಾಗಿ ಸೋಲಾಯಿತೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ರಾಜಕೀಯದಲ್ಲಿ ತಂತ್ರ ಕುತಂತ್ರ ಕೆಲಸ ಮಾಡುತ್ತದೆ. ಅದನ್ನೇ ಮಾಡಿದ್ದಾರೆ. ನಾನು ಕಾರ್ಯಕರ್ತರ ಜೊತೆ ಇದ್ದವನು. ಈಗಲೂ ಅವರ ಜತೆ ಇರುತ್ತೇನೆ. ನನ್ನ ಹೋರಾಟ ಮುಂದುವರಿಯಲಿದೆ. ಆದಾಗ್ಯೂ ದೇಶದಲ್ಲಿ ಇಂಡಿಯಾ ಒಕ್ಕೂಟಕ್ಕೆ ಒಳ್ಳೆಯ ಸಂಖ್ಯೆ ಬಂದಿದೆ ಎಂದು ಅವರು ಹೇಳಿದರು.
400 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಬಿಜೆಪಿ ಹೇಳಿತ್ತು. ಮಾಧ್ಯಮಗಳ ಸಮೀಕ್ಷೆಗಳೂ ಹಾಗೆ ಹೇಳಿದ್ದವು. ಆದರೆ, ಅವುಗಳೆಲ್ಲ ಸುಳ್ಳಾಗಿವೆ ಎಂದು ಸುರೇಶ್ ಹೇಳಿದರು.
ಬೆಂಗಳೂರು ಗ್ರಾಮಾಂತರ ಕ್ಷೇತ್ರ ಈ ಬಾರಿ ರಾಜ್ಯದ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾಗಿತ್ತು. ಈ ಬಾರಿ ಜಿದ್ದಾಜಿದ್ದಿನ ಕಣವಾಗಿ ಇಡೀ ರಾಜ್ಯದ ಗಮನ ಸೆಳೆದಿತ್ತು. ಜಯದೇವ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ ಲಕ್ಷಾಂತರ ಜನರ ಹೃದಯ ಗೆದ್ದಿರುವ ಡಾ. ಮಂಜುನಾಥ್ ಹಾಲಿ ಸಂಸದ ಡಿಕೆ ಸುರೇಶ್ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಈಗಾಗಲೇ ಎರಡು ಬಾರಿ ಸಂಸದರಾಗಿರುವ ಡಿಕೆ ಸುರೇಶ್ ಹ್ಯಾಟ್ರಿಕ್ ಗೆಲುವು ಸಾಧಿಸುವ ಹುಮ್ಮಸ್ಸಿನಲ್ಲಿದ್ದರು. ಆದರೆ ಎಲ್ಲ ಲೆಕ್ಕಾಚಾರ ತಲೆಕೆಳಗಾಗಿದೆ.