‘ದಿ ಕೇರಳ ಸ್ಟೋರಿ’ ತಂಡಕ್ಕೆ ಉಡುಗೊರೆ ನೀಡಿದ ಯೋಗಿ
ಅದಾ ಶರ್ಮಾ ಮುಖ್ಯ ಭೂಮಿಕೆಯ ದಿ ಕೇರಳ ಸ್ಟೋರಿ (The Kerala Story) ಅಡೆತಡೆಗಳ ನಡುವೆಯೂ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ರಿಲೀಸ್ ಆದ ಐದೇ ದಿನಕ್ಕೆ 50 ಕೋಟಿ ರೂಪಾಯಿ ಬಾಚಿದೆ ಎಂದು ಹೇಳಲಾಗುತ್ತಿದೆ. ಈ ನಡುವೆಯೇ ಚಿತ್ರತಂಡವು ಉತ್ತರ ಪ್ರದೇಶದ (Uttar Pradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರನ್ನು ಭೇಟಿ ಮಾಡಿ, ತಮ್ಮ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಿದಕ್ಕೆ ಧನ್ಯವಾದಗಳನ್ನು ತಿಳಿಸಿದೆ.
ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದ ನಿರ್ದೇಶಕ ಸುದಿಪ್ತೊ ಸೇನ್, ನಿರ್ಮಾಪಕ ವಿಫುಲ್ ಅಮೃತ್ ಲಾಲ್ ಶಾ ಹಾಗೂ ನಟಿ ಅದಾ ಶರ್ಮಾ (Adah Sharma) ಅವರಿಗೆ ಉತ್ತರ ಪ್ರದೇಶ ಸರಕಾರದಿಂದ ಸರ್ವ ರೀತಿಯ ಸಹಕಾರವನ್ನು ನೀಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಆದಿತ್ಯನಾಥ್ ತಿಳಿಸಿದ್ದಾರೆ. ಹೀಗಾಗಿ ಚಿತ್ರತಂಡಕ್ಕೆ ಆನೆಬಲ ಬಂದಂತಾಗಿದೆ. ಈ ಖುಷಿಯನ್ನು ಚಿತ್ರತಂಡ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
ಈ ಖುಷಿಯ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಚಿತ್ರತಂಡಕ್ಕೆ ಶಾಕ್ ಕೂಡ ನೀಡಿದೆ. ಪಶ್ಚಿಮ ಬಂಗಾಳ (West Bengal) ನಿಷೇಧಿಸಿರುವುದು ಹಾಗೂ ತಮಿಳುನಾಡಿನಲ್ಲಿ (Tamil Nadu) ನಿಷೇಧಕ್ಕೆ ಮುಂದಾಗಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ (Supreme Court) ಹೇಳಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ (CJI) ಡಿವೈ ಚಂದ್ರಚೂಡ್ (DY Chandrachud) ನೇತೃತ್ವದ ಪೀಠವು ಈ ವಿಷಯವನ್ನು ಬುಧವಾರ ತುರ್ತು ಪಟ್ಟಿಗೆ ಸೇರಿಸಿದ ನಂತರ ಮೇ 12 ರಂದು ವಿಚಾರಣೆಗೆ ಮುಂದೂಡಿತು. ಅಲ್ಲದೆ ನ್ಯಾಯಮೂರ್ತಿ ಪಿಎಸ್ ನರಸಿಂಹ ಅವರನ್ನೊಳಗೊಂಡ ಪೀಠವು ಚಿತ್ರದ ಬಿಡುಗಡೆಗೆ ತಡೆ ನೀಡಲು ನಿರಾಕರಿಸಿದ್ದ ಕೇರಳ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಲು ಸೋಮವಾರ ಒಪ್ಪಿಕೊಂಡಿತ್ತು.
ಚಲನಚಿತ್ರ ನಿರ್ಮಾಪಕ ಸನ್‍ಶೈನ್ ಪಿಕ್ಚರ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ವಿಪುಲ್ ಅಮೃತಲಾಲ್ ಶಾ ಅವರ ಪರ ಹಿರಿಯ ವಕೀಲ ಹರೀಶ್ ಸಾಳ್ವೆ ವಾದ ಮಂಡಿಸಿದ್ದಾರೆ. ಅವರು ನ್ಯಾಯಾಲಯದ ಮುಂದೆ ಪಶ್ಚಿಮ ಬಂಗಾಳ ಚಿತ್ರವನ್ನು ನಿಷೇಧ ಮಾಡಿರುವುದರಿಂದ ಆರ್ಥಿಕವಾಗಿ ನಷ್ಟವಾಗುತ್ತಿದೆ. ಅಲ್ಲದೆ ತಮಿಳುನಾಡು ಸಹ ಚಿತ್ರ ನಿಷೇಧಕ್ಕೆ ಮುಂದಾಗಿದೆ. ಚಿತ್ರವನ್ನು ನಿಷೇಧ ಮಾಡುತ್ತಿರುವುದು ಸವಿಂಧಾನದ 19 (1) (ಎ) ವಾಕ್ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಯತ್ನ ಎಂದು ನ್ಯಾಯಾಲಯದ ಮುಂದೆ ಹೇಳಿಕೊಂಡಿದ್ದಾರೆ.
ಚಿತ್ರ ನಿಷೇಧವು ಚಲನಚಿತ್ರದಿಂದ ಬರುವ ಆದಾಯವನ್ನು ಕಡಿತಗೊಳಿಸುವ ಉದ್ದೇಶದಿಂದ ಮಾಡಲಾಗಿದೆ. ಅಲ್ಲದೆ ಇದು ಚಲನಚಿತ್ರದ ಪೈರೇಟೆಡ್ ಡಿವಿಡಿಗಳಿಗೆ ಪ್ರಚೋದನೆಯನ್ನು ನೀಡುತ್ತದೆ ಎಂದು ನಿರ್ಮಾಪಕರು ದೂರಿದ್ದಾರೆ. ಚಲನಚಿತ್ರಗಳ (ನಿಯಂತ್ರಣ) ಕಾಯಿದೆಯ ಸೆಕ್ಷನ್ 6 (1) ಅಡಿಯಲ್ಲಿ ಶಾಂತಿ ಭಂಗವನ್ನು ಉಂಟುಮಾಡುವ ಸಾಧ್ಯತೆ, ದ್ವೇಷ ಮತ್ತು ಹಿಂಸಾಚಾರ ಸಾಧ್ಯತೆ ಸಲುವಾಗಿ ಪಶ್ಚಿಮ ಬಂಗಾಳ ಈ ಚಿತ್ರಕ್ಕೆ ನಿಷೇಧ ಹೇರಿತ್ತು.