ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಜು.20 ರಂದು ಶಾಲೆ ಪಿಯು ಕಾಲೇಜುಗಳಿಗೆ ರಜೆ ಘೋಷಣೆ
ದಕ್ಷಿಣ ಕನ್ನಡ ಜಿಲ್ಲೆ: ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿರುವ ಹಿನ್ನಲೆ ಜುಲೈ 20 ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಶಾಲೆ, ಪಿಯುಸಿ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಎಲ್ಲಾ ಅಂಗನವಾಡಿಗಳು, ಪ್ರಾಥಮಿಕ ಶಾಲೆಗಳು, ಪ್ರೌಢಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳು (12 ನೇ ತರಗತಿಯವರೆಗೆ) ಮಾತ್ರ ರಜೆ ಘೋಷಣೆ ಮಾಡಲಾಗಿದೆ.
ಹಾಗೆಯೇ ಸಾಂಭವ್ಯ ಪ್ರವಾಹ, ಭೂಕುಸಿತ ಪ್ರದೇಶಗಳನ್ನು ಗುರುತಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಮೀನುಗಾರರು ಸಮುದ್ರಕ್ಕೆ ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಲಾಗಿದೆ. ಪ್ರಾಕೃತಿಕ ವಿಕೋಪದಿಂದ ಯಾವುದೇ ರೀತಿಯ ಘಟನೆಗಳು ಸಂಭವಿಸಿದಲ್ಲಿ ಅಥವಾ ಸಂಭವಿಸಬಹುದಾದ ಸೂಚನೆಯಿದ್ದಲ್ಲಿ ಸಾರ್ವಜನಿಕರು ಕೂಡಲೇ ಸಂಬಂಧ ಪಟ್ಟ ಪಂಚಾಯತ್ ನಗರ ಸ್ಥಳೀಯ ಸಂಸ್ಥೆಗಳಿಗೆ ಮಾಹಿತಿಯನ್ನು ನೀಡಲು ತಿಳಿಸಲಾಗಿದೆ
ಸಂಭಾವ್ಯ ಹಾನಿಯನ್ನು ತಡೆಗಟ್ಟುವ ಹಿನ್ನಲೆಯಲ್ಲಿ ಸಾರ್ವಜನಿಕರು ಅಪಾಯಕಾರಿ ಸನ್ನಿವೇಶಗಳಿಂದ ದೂರವಿದ್ದು ಜಿಲ್ಲಾಡಳಿತದ ಸಲಹೆ ಸೂಚನೆಗಳನ್ನು ಪಾಲಿಸುವಂತೆ ವಿನಂತಿಸಲಾಗಿದೆ
ಉಡುಪಿ ಜಿಲ್ಲೆ: ಇಂದು ನಾಳೆ ಉಡುಪಿ ಜಿಲ್ಲೆಯಾದ್ಯಂತ ಭಾರೀ ಮಳೆಯ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಜುಲೈ 20 ರಂದು ಮುನ್ನೆಚ್ಚರಿಕಾ ಕ್ರಮವಾಗಿ ಉಡುಪಿ ಜಿಲ್ಲೆಯ ಎಲ್ಲಾ ಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಅವರು ಆದೇಶ ಹೊರಡಿಸಿದ್ದಾರೆ.
ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರಕಾರಿ, ಅನುದಾನಿತ ಹಾಗೂ ಖಾಸಗಿ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ
ರಾಜ್ಯದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆ; ಜುಲೈ 20 ರವರೆಗೆ ರೆಡ್ ಅಲರ್ಟ್ ಘೋಷಣೆ
ಬೆಂಗಳೂರು: ಕರ್ನಾಟಕದ ಹಲವು ಭಾಗಗಳಲ್ಲಿ ಭಾರೀ ಮತ್ತು ನಿರಂತರ ಮಳೆಯಾಗುತ್ತಿದ್ದು, ಭಾರತೀಯ ಹವಾಮಾನ ಇಲಾಖೆ(IMD) ಜುಲೈ 20ರ ವರೆಗೆ ರಾಜ್ಯದ ದಕ್ಷಿಣ ಒಳನಾಡು ಮತ್ತು ಕರಾವಳಿ ಭಾಗಗಳಿಗೆ ರೆಡ್ ಅಲರ್ಟ್ ಘೋಷಿಸಿದೆ.
ಮುಂದಿನ 24 ಗಂಟೆಯೊಳಗೆ ಬಂಗಾಳ ಉಪಸಾಗರದಲ್ಲಿ ವಾಯುಭಾರ ಕುಸಿತ ಆಗುವ ಸಾಧ್ಯತೆ ಇದೆ. ಇದ ಪ್ರಭಾವದಿಂದ ಮುಂದಿನ ಮೂರು ದಿನಗಳ ಕಾಲ ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದೆ.
ಜುಲೈ 19 ಮತ್ತು 20 ರಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಒಳನಾಡಿನಲ್ಲಿ ಐಎಂಡಿ ರೆಡ್ ಅಲರ್ಟ್ ಘೋಷಿಸಿದೆ. ಜುಲೈ 20 ಹಾಗೂ 21 ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಶಿರೂರು ಗುಡ್ಡ ಕುಸಿತ; 24 ಗಂಟೆಗಳ ನಿರಂತರ ಕಾರ್ಯಾಚರಣೆಯಿಂದ ನದಿಗೆ ಬಿದ್ದಿದ್ದ ಟ್ಯಾಂಕರ್ನಿಂದ ಗ್ಯಾಸ್ ಹೊರಕ್ಕೆ
ಉತ್ತರ ಕನ್ನಡ, ಜು.19: ಅಂಕೋಲಾ(Ankola) ತಾಲೂಕಿನ ಶಿರೂರು ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದ ಗುಡ್ಡ ಕುಸಿತದಲ್ಲಿ ನದಿಗೆ ತೇಲಿ ಹೋಗಿದ್ದ ಗ್ಯಾಸ್ ಟ್ಯಾಂಕರ್(Gas tanker) ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಟ್ಯಾಂಕರ್ನಿಂದ ಎಲ್ಪಿಜಿ ಗ್ಯಾಸ್ನ್ನು ಯಶಸ್ವಿಯಾಗಿ ಹೊರತೆಗೆಯಲಾಗಿದೆ. ಸುಮಾರು 24 ಗಂಟೆಗಳ ನಿರಂತರ ಕಾರ್ಯಾಚರಣೆ ನಡೆಸಿ ಟ್ಯಾಂಕರ್ನಲ್ಲಿದ್ದ ಪೂರ್ತಿ ಗ್ಯಾಸ್ನ್ನು ಗಂಗಾವಳಿ ನದಿಗೆ ಬಿಡಲಾಗಿದೆ.
ಇನ್ನು ಸುಮಾರು 100 ಕ್ಕೂ ಹೆಚ್ಚು ಜನರ ನಿರಂತರ ಶ್ರಮದಿಂದ ಯಾವುದೇ ಅಪಾಯ ಸಂಭವಿಸಿದಂತೆ ಗ್ಯಾಸ್ನ್ನು ಯಶಸ್ವಿಯಾಗಿ ನದಿಗೆ ಬಿಡಲಾಗಿದೆ. ಇದರಿಂದ ಸುಮಾರು 10 ಗ್ರಾಮಗಳಿಗಿದ್ದ ಆತಂಕ ದೂರವಾಗಿದೆ. ಕುಮಟಾ ಎಸಿ ಕಲ್ಯಾಣಿ ಕಾಂಬ್ಳೆ, ಗೋಕರ್ಣ ಪಿಎಸ್ಐ ಖಾದರ್, ಅಂಕೋಲಾ ತಾಲೂಕು ಪಂಚಾಯತಿ ಎಇಒ ಸೇರಿದಂತೆ ಅಧಿಕಾರಿಗಳು, ತಜ್ಞರು ಹಾಗೂ ಕ್ರೇನ್ ಸಿಬ್ಬಂಧಿಗಳಿಗೆ ಗ್ರಾಮಸ್ಥರು ಧನ್ಯವಾದ ತಿಳಿಸಿದ್ದಾರೆ. ಕಳೆದ ನಾಲ್ಕು ದಿನದಿಂದ ಆತಂಕದಲ್ಲೆ ಜನರು, ಗ್ರಾಮದಿಂದ ಬೇರೆ ಕಡೆ ಶಿಫ್ಟ್ ಆಗಿದ್ದರು. ಜೊತೆಗೆ ವಿದ್ಯುತ್ ಸಂಪರ್ಕ ಕೂಡ ಕಡಿತ ಮಾಡಲಾಗಿತ್ತು. ಸದ್ಯ ದೊಡ್ಡ ಆತಂಕದಿಂದ ಗ್ರಾಮಸ್ಥರನ್ನು ಪಾರುಮಾಡಲಾಗಿದೆ.
ಇನ್ನು ನಿನ್ನೆ ಮುನ್ನೆಚ್ಚರಿಕಾ ಕ್ರಮವಾಗಿ ಸಗಡಗೇರಿ ಗ್ರಾಮದ 34 ಕುಟುಂಬಗಳನ್ನು ಜಿಲ್ಲಾಡಳಿತ ಬೇರೆಡೆ ಸ್ಥಳಾಂತರಿಸಿತ್ತು. ಜೊತೆಗೆ ಹೆಚ್.ಪಿ ಕಂಪನಿ ಅವರು ‘ಮೀಟರ್ ಮಾಪನದ ಮೂಲಕ ಅಳೆದು ಟ್ಯಾಂಕರ್ನಲ್ಲಿದ್ದ ಶೇ.30ರಷ್ಟು ಗ್ಯಾಸ್ನ್ನು ನದಿ ನೀರಿಗೆ ಬಿಟ್ಟಿದ್ದರು. ಸ್ಥಳದಲ್ಲಿ ಅಗ್ನಿಶಾಮಕ ಸಿಬ್ಬಂದಿ, ಪೊಲೀಸ್, ಎಸ್.ಡಿ.ಆರ್.ಎಫ್, NDRF , ಹೆಚ್.ಪಿ ಕಂಪನಿಯ ಸಿಬ್ಬಂದಿ, ವೈದ್ಯಕೀಯ ತಂಡ ಮೊಕ್ಕಾಮ್ ಹೊಡಿತ್ತು.
ತುಂಗಭದ್ರಾ ಜಲಾಶಯಕ್ಕೆ ಹೆಚ್ಚಾದ ಒಳಹರಿವು – 24 ಗಂಟೆಯಲ್ಲಿ 9 ಟಿಎಂಸಿ ನೀರು ಸಂಗ್ರಹ!
ಬಳ್ಳಾರಿ: ಮಲೆನಾಡು ಅಚ್ಚುಕಟ್ಟು ಪ್ರದೇಶದಲ್ಲಿ ನಿರಂತರ ಮಳೆ (Heavy Rain) ಸುರಿಯುತ್ತಿರುವುದರಿಂದ ತುಂಗಭದ್ರಾ ಜಲಾಶಯಕ್ಕೆ (Tungabhadra Dam) ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ವಿಜಯನಗರ (Vijayanagara) ಜಿಲ್ಲೆಯ ಹೊಸಪೇಟೆ ಬಳಿ ಇರುವ ತುಂಗಭದ್ರಾ ಜಲಾಶಯಕ್ಕೆ ಎರಡು ದಿನಗಳಿಂದ ಪ್ರತಿನಿತ್ಯ 1 ಲಕ್ಷಕ್ಕೂ ಅಧಿಕ ಕ್ಯುಸೆಕ್ ನೀರು ಬರ್ತಿದೆ.
105 ಟಿಎಂಸಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಇದೀಗ 55.972 ಟಿಎಂಸಿ ನೀರು ಸಂಗ್ರಹವಾಗಿದ್ದು, ಕಳೆದ 24 ಗಂಟೆಯಲ್ಲಿ ಬರೋಬ್ಬರಿ 9 ಟಿಎಂಸಿ ನೀರು ಜಲಾಶಯಕ್ಕೆ ಹರಿದುಬಂದಿದೆ (Water Inflow). ಸದ್ಯ ಜಲಾಶಯಕ್ಕೆ 1,08,090 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, 400 ಕ್ಯುಸೆಕ್ ನೀರನ್ನ ಹೊರಗೆ ಬಿಡಲಾಗ್ತಿದೆ.
ಗುರುವಾರವು (ಜು.18) ಸಹ 7 ಟಿಎಂಸಿ, ಶುಕ್ರವಾರ (ಇಂದು) 9 ಟಿಎಂಸಿ ನೀರು ಜಲಾಶಯಕ್ಕೆ ಹರಿದು ಬಂದಿದೆ. ಇದೇ ರೀತಿ ನೀರು ಹರಿದುಬಂದರೆ ಒಂದೇ ವಾರದೊಳಗೆ ಜಲಾಶಯ ಭರ್ತಿಯಾಗುವ ಸಾಧ್ಯತೆ ಇದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.