ತೀವ್ರ ಹೃದಯಾಘಾತಕ್ಕೊಳಗಾದ ತೆಲುಗು ಚಿತ್ರನಟ ನಂದಮೂರಿ ತಾರಕ ರತ್ನ
ಬೆಂಗಳೂರು (ಜನವರಿ 28, 2023): ತೀವ್ರ ಹೃದಯಘಾತಕ್ಕೆ ಒಳಗಾಗಿದ್ದ ತೆಲುಗು ಚಿತ್ರನಟ ನಂದಮೂರಿ ತಾರಕ ರತ್ನ ಅವರನ್ನು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಶಿಫ್ಟ್ ಮಾಡಲಾಗಿದೆ. ತಡರಾತ್ರಿ ಆಂಧ್ರದ ಕುಪ್ಪಂನ ಪಿಇಎಸ್ ವೈದ್ಯಕೀಯ ಕಾಲೇಜಿನಿಂದ ಬೆಂಗಳೂರಿನ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ ಎಂದು ತಿಳದುಬಂದಿದೆ. ಟಿಡಿಪಿ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಅವರ ಯುವ ಗಲಮ್ ಪಾದಯಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಕುಪ್ಪಂಗೆ ತೆರಳಿದ್ದ ವೇಳೆ ನಂದಮುರಿ ತಾರಕ ರತ್ನ ಅವರಿಗೆ ತೀವ್ರ ಹೃದಯಾಘಾತವಾಗಿತ್ತು. ಈ ಹಿನ್ನೆಲೆ ತಡ ರಾತ್ರಿ ಆಂಬ್ಯುಲೆನ್ಸ್ ಮೂಲಕ ನಾರಾಯಣ ಹೃದಯಾಲಯಕ್ಕೆ ತೆಲುಗು ಚಿತ್ರನಟ ನಂದಮೂರಿ ತಾರಕರತ್ನ ಅವರನ್ನು ಕರೆತರಲಾಗಿದ್ದು, ಐಸಿಯುಗೆ ಶಿಫ್ಟ್ ಮಾಡಲಾಗಿದೆ.
ಮಾಜಿ ಸಿಎಂ ನಾರಾ ಚಂದ್ರಬಾಬು ನಾಯ್ಡು ಅವರ ಪುತ್ರ ನಾರಾ ಲೋಕೇಶ್ ಶುಕ್ರವಾರ ಕುಪ್ಪಂನಲ್ಲಿ ಪಾದಯಾತ್ರೆ ಆರಂಭಿಸಿದ್ದು, ಅವರ ಜೊತೆ ಹಲವು ರಾಜಕೀಯ ಮುಖಂಡರು ಭಾಗಿಯಾಗಿದ್ದರು. ನಟ ಕಮ್ ರಾಜಕಾರಣಿ ತಾರಕ ರತ್ನ ಕೂಡ ಪಾದಯಾತ್ರೆಯ ಭಾಗವಾಗಿದ್ದರು. ಇನ್ನು, ನಾರಾ ಲೋಕೇಶ್ ಪಾದಯಾತ್ರೆ ಆರಂಭಿಸುವ ಮುನ್ನ ಲಕ್ಷ್ಮೀಪುರಂ ಶ್ರೀ ವರದರಾಜ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಸ್ವಲ್ಪ ದೂರ ನಡೆದ ನಂತರ ಲೋಕೇಶ್ ಅಲ್ಲಿನ ಮಸೀದಿಯಲ್ಲಿ ಪ್ರಾರ್ಥನೆ ಮಾಡಿದರು. ತಾರಕ ರತ್ನ ಕೂಡ ಲೋಕೇಶ್ ಜೊತೆಗೆ ಮಸೀದಿಯೊಳಗೆ ಹೋದರು. ಮಸೀದಿಯಿಂದ ಹೊರಬರುವಾಗ ಕಾರ್ಯಕರ್ತರು ಒಮ್ಮೆಗೆ ನುಗ್ಗಿದರು. ನೂಕುನುಗ್ಗಲಿನಲ್ಲಿ ನಟ ಮೂರ್ಛೆ ತಪ್ಪಿ ಕೆಳಗೆ ಬಿದ್ದರು. ತಕ್ಷಣ ವರನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ನಂದಮೂರಿ ತಾರಕ ರತ್ನ ಅವರ ಆರೋಗ್ಯ ವಿಚಾರಿಸಲು ಅವರ ಚಿಕ್ಕಪ್ಪ ಹಾಗೂ ಖ್ಯಾತ ನಟ ನಂದಮೂರಿ ಬಾಲಕೃಷ್ಣ ಆಸ್ಪತ್ರೆಗೆ ಭೇಟಿ ನೀಡಿದ್ದರು. ಆದರೆ, ಹೆಚ್ಚಿನ ಚಿಕಿತ್ಸೆಗಾಗಿ ತಡರಾತ್ರಿ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಶಿಫ್ಟ್ ಮಾಡಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾರಕ ರತ್ನ ಅವರು ಟಿಡಿಪಿ ಸಂಸ್ಥಾಪಕ, ದಿಗ್ಗಜ ನಟ ಮತ್ತು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್.ಟಿ.ರಾಮರಾವ್ ಅವರ ಮೊಮ್ಮಗ. ಜೂನಿಯರ್ ಎನ್ ಟಿ ಆರ್, ಕಲ್ಯಾಣ್ ರಾಮ್ ಮತ್ತು ಲೋಕೇಶ್ ಅವರ ಸೋದರಸಂಬಂಧಿ.