ತನಗಾಗಿ ಕೆನಡಾದಿಂದ ಭಾರತಕ್ಕೆ ಬಂದಿದ್ದ ಪ್ರೇಯಸಿಯನ್ನೇ ಕೊಂದ ಬಾಯ್ಫ್ರೆಂಡ್
ಚಂಡೀಗಢ: ಪ್ರಿಯಕರನನ್ನು ಮದುವೆಯಾಗಲು ಕೆನಡಾದಿಂದ (Canada) ಭಾರತಕ್ಕೆ (India) ಬಂದಿದ್ದ ಯುವತಿಯ ಮೃತದೇಹ ಹರಿಯಾಣದ (Haryana) ಹೊಲವೊಂದರಲ್ಲಿ ಪತ್ತೆಯಾಗಿದೆ. ಕಳೆದ ವರ್ಷ ಜೂನ್ನಲ್ಲಿ ನೀಲಂ (23) ಎಂಬಾಕೆಯನ್ನು ಆಕೆಯ ಪ್ರಿಯಕರನೇ ಗುಂಡಿಟ್ಟು ಕೊಂದಿದ್ದು, ನಂತರ ಮೃತದೇಹವನ್ನು ತನ್ನ ಹೊಲದಲ್ಲಿ ಹೂತು ಹಾಕಿದ್ದಾನೆ.
ಸುನಿಲ್ ತನಗಾಗಿ ಬಂದ ಪ್ರಿಯತಮೆಗೆ ಗುಂಡಿಟ್ಟು ಕೊಂದು ಹೂತುಹಾಕಿದ್ದಾರೆ. ಆಕೆಯ ಅಸ್ಥಿಪಂಜರದ ಅವಶೇಷಗಳು ಮಂಗಳವಾರ ಭಿವಾನಿಯಲ್ಲಿ ಪೊಲೀಸರಿಗೆ ಪತ್ತೆಯಾಗಿವೆ.
ಯುವತಿ ನೀಲಂಳನ್ನು ಅಪಹರಿಸಿ ಕೊಂದಿರುವುದಾಗಿ ಸುನೀಲ್ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತನ್ನ ಅಪರಾಧವನ್ನು ಮರೆಮಾಚಲು ಆಕೆಯ ತಲೆಗೆ ಎರಡು ಬಾರಿ ಗುಂಡು ಹಾರಿಸಿ ನಂತರ ಶವವನ್ನು ತನ್ನ ಹೊಲದಲ್ಲಿ ಹೂತು ಹಾಕಿದ್ದಾನೆ ಎಂದು ಪೊಲೀಸ್ ಅಧಿಕಾರಿ ರವೀಂದ್ರ ಹೇಳಿದ್ದಾರೆ.
ಕಳೆದ ಜೂನ್ನಲ್ಲಿ ನೀಲಂ ಸಹೋದರಿ ರೋಶನಿ ಪೊಲೀಸರಿಗೆ ದೂರು ನೀಡಿದ್ದರು. ನೀಲಂ, ಇಂಟರ್ನ್ಯಾಷನಲ್ ಇಂಗ್ಲಿಷ್ ಲ್ಯಾಂಗ್ವೇಜ್ ಟೆಸ್ಟಿಂಗ್ ಸಿಸ್ಟಮ್ (ಐಇಎಲ್ಟಿಎಸ್) ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಳು. ಕೆಲಸಕ್ಕಾಗಿ ಕೆನಡಾಕ್ಕೆ ಹೋಗಿದ್ದಳು. ಕಳೆದ ವರ್ಷ ಜನವರಿಯಲ್ಲಿ ಸುನಿಲ್ ಆಕೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿ ಭಾರತಕ್ಕೆ ವಾಪಸ್ ಕರೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕಸ್ಟಡಿಯಲ್ಲಿದ್ದ ಸುನಿಲ್ ವಿಚಾರಣೆಯ ಆಧಾರದ ಮೇಲೆ ಅಧಿಕಾರಿಗಳು ನೀಲಂ ಅಸ್ಥಿಪಂಜರದ ಅವಶೇಷಗಳನ್ನು ಆತನ ಜಮೀನಿನಲ್ಲಿ 10 ಅಡಿ ಆಳದ ಗುಂಡಿಯಿಂದ ಹೊರತೆಗೆದರು. ಮೃತದೇಹವನ್ನು ಸೋನಿಪತ್ ಸಿವಿಲ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.