ತಂದೆಯ ಭದ್ರಕೋಟೆಯಲ್ಲಿಯೇ ಸತತ ಸೋಲು ಕಂಡ ನಿಖಿಲ್ ಕುಮಾರಸ್ವಾಮಿ; ಪಕ್ಷದ ಭವಿಷ್ಯಕ್ಕೆ ಹಿನ್ನಡೆ?
ಜೆಡಿಎಸ್ ಭದ್ರಕೋಟೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲು ಅನುಭವಿಸಿದ್ದಾರೆ. ರಾಮನಗರದಲ್ಲಿ ಮಗನಿಗಾಗಿ ಶಾಸಕಿ ಅನಿತಾ ಕುಮಾರಸ್ವಾಮಿ ಕ್ಷೇತ್ರವನ್ನೇ ತ್ಯಾಗ ಮಾಡಿದ್ದರು. ಆ ತ್ಯಾಗವೂ ಮಗನಿಗಾಗಿ ಫಲಿಸಲಿಲ್ಲ. ತಂದೆ ಹೆಚ್. ಡಿ ಕುಮಾರಸ್ವಾಮಿ ಬಲವನ್ನೂ ಮತದಾರರು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ ಗೆಲುವು ಸಾಧಿಸಿದ್ದಾರೆ.
ರಾಮನಗರ ಕ್ಷೇತ್ರದಲ್ಲಿ 12ನೇ ಸುತ್ತಿನ ಮತೆಣಿಕೆ ಬಳಿಕ ನಿಖಿಲ್ ಕುಮಾರಸ್ವಾಮಿ 14,377 ಮತಗಳ ಹಿನ್ನಡೆ ಅನುಭವಿಸಿದ್ದಾರೆ. ಕಾಂಗ್ರೆಸ್ನ ಇಕ್ಬಾಲ್ ಹುಸೇನ್ 57,839 ಮತ ಗಳಿಸಿದ್ದಾರೆ. ನಿಖಿಲ್ ಕುಮಾರಸ್ವಾಮಿ 43,362 ಮತ ಪಡೆದಿದ್ದಾರೆ.
ಜೆಡಿಎಸ್ನ ಘನನಾಯಕ ಹೆಚ್ಡಿ ಕುಮಾರಸ್ವಾಮಿ ಪುತ್ರ, ಪಕ್ಷವನ್ನು ಮುನ್ನಡೆಸಲು ವಿಫಲರಾಗುವ ಸೂಚನೆ ನೀಡುತ್ತಿದ್ದಾರೆ. ಕಳೆದ ಬಾರಿ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ, ಪಕ್ಷೇತರ ಅಭ್ಯರ್ಥಿ ಸುಮಲತಾ ವಿರುದ್ಧ ಸೋತಿದ್ದ ನಿಖಿಲ್ ಕುಮಾರಸ್ವಾಮಿ, ಇದೀಗ ಮತ್ತೆ ವಿಧಾನಸಭಾ ಚುನಾವಣೆಯಲ್ಲೂ ಸೋಲನುಭವಿಸಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಯಿಂದಾಗಿ ಈ ಬಾರಿ ರಾಮನಗರ ಕ್ಷೇತ್ರ ಕುತೂಹಲ ಮೂಡಿಸಿತ್ತು. ಇಲ್ಲಿ ಕಾಂಗ್ರೆಸ್ನ ಇಕ್ಬಾಲ್ ಹುಸೇನ್ ಅವರು ನಿಖಿಲ್ಗೆ ತೀವ್ರ ಸ್ಪರ್ಧೆ ಒಡ್ಡಿ ಗೆದ್ದಿದ್ದಾರೆ. ತಮ್ಮ ತಂದೆಯ ಭದ್ರಕೋಟೆಯಲ್ಲಿಯೇ ನಿಖಿಲ್ ಹಿನ್ನಡೆ ಅನುಭವಿಸಿರುವುದು ಅಚ್ಚರಿಯ ಫಲಿತಾಂಶಕ್ಕೆ ಕಾರಣವಾಗಿದೆ.
ರಾಮನಗರ ಮೊದಲಿನಿಂದಲೂ ಜೆಡಿಎಸ್ನ ಭದ್ರಕೋಟೆ. ಮುಖ್ಯವಾಗಿ ಹೆಚ್ಡಿ ಕುಮಾರಸ್ವಾಮಿ ಅವರ ಭದ್ರಕೋಟೆ. ಈ ಕ್ಷೇತ್ರದಲ್ಲಿ ಸತತ ಗೆಲುವಿನ ಇತಿಹಾಸ ಹೊಂದಿರುವ ಎಚ್ಡಿಕೆ, ಈ ಹಿಂದೆ ಈ ಕ್ಷೇತ್ರವನ್ನು ತಮ್ಮ ಪತ್ನಿ ಅನಿತಾ ಕುಮಾರಸ್ವಾಮಿಗೆ ಬಿಟ್ಟುಕೊಟ್ಟಿದ್ದರು. ಕಳೆದ ಬಾರಿ ಇಲ್ಲಿ ಗೆಲುವು ಸಾಧಿಸಿದ್ದ ಅನಿತಾ, ಪತಿ ಹೆಸರು ಉಳಿಸಿದ್ದರು.
ಆದರೆ, ಈ ಬಾರಿ ಆ ತಂದೆಯ ಹೆಸರನ್ನು ಉಳಿಸುವಲ್ಲಿ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ವಿಫಲರಾಗಿದ್ದಾರೆ. ಕಳೆದ ಬಾರಿ ನಡೆದ ಲೋಕಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಬಳಿಕ, ಇದೀಗ ವಿಧಾನಸಭೆ ಚುನಾವಣೆಯಲ್ಲೂ ಸೋತಿದ್ದಾರೆ. ಜೆಡಿಎಸ್ನ ಭದ್ರಕೋಟೆಯಲ್ಲಿ ಜೆಡಿಎಸ್ನ ಕುಡಿಗೆ ಸಿಕ್ಕಿರುವ ಸೋಲು ಅಚ್ಚರಿಯ ಫಲಿತಾಂಶಕ್ಕೆ ಕಾರಣವಾಗಿದೆ.
ಜೆಡಿಎಸ್ನ ಉತ್ತರಾಧಿಕಾರಿ ಎನ್ನಲಾಗಿರುವ ನಿಖಿಲ್, ಸತತ ಎರಡು ಪ್ರಮುಖ ಸೋಲು ಕಂಡಿದ್ದಾರೆ. ಹೀಗಾಗಿ ಇದು ಪಕ್ಷದ ಭವಿಷ್ಯಕ್ಕೆ ಹಿನ್ನಡೆಯಾಗಲಿದೆ ಎಂದು ಹೇಳಲಾಗುತ್ತಿದೆ.