ಟೆಕ್ನಾಲಜಿ ಬದಲಾದ್ರೆ ಸಾಕಾ? ರಾಜಕೀಯ, ರಾಜಕಾರಣಿಗಳು ಬದಲಾಗಬಾರದಾ? ಸಂಚಲನ ಸೃಷ್ಟಿಸಿದ ದಳಪತಿ ವಿಜಯ್

ನಟ ವಿಜಯ್ ಭಾನುವಾರ ಸಂಜೆ ತಮಿಳುನಾಡಿನಲ್ಲಿ ತಮ್ಮ ಮೊದಲ ರಾಜಕೀಯ ಸಭೆಯನ್ನು ನಡೆಸಿದ್ದರು. ಅವರ ಚೊಚ್ಚಲ ಸಮ್ಮೇಳನಕ್ಕೆ ಮುಂಚಿತವಾಗಿ ಸೆಲೆಬ್ರಿಟಿಗಳು ಅವರಿಗೆ ಶುಭಾಶಯಗಳನ್ನು ಕಳುಹಿಸಿದರು.
ವಿಕ್ರವಾಂಡಿ: ತಮಿಳಿನ ಸೂಪರ್ ಸ್ಟಾರ್ ದಳಪತಿ ವಿಜಯ್ ಭಾನುವಾರ ಅಧಿಕೃತವಾಗಿ ರಾಜಕೀಯ ಅಖಾಡ ಪ್ರವೇಶಿಸಿದರು. ಚೆನ್ನೈನಿಂದ 150 ಕಿ.ಮೀ.ದೂರದಲ್ಲಿರುವ ವಿಕ್ರಂವಾಡಿಯಲ್ಲಿ ನಡೆದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮೊದಲ ರಾಜ್ಯ ಸಮ್ಮೇಳನದಲ್ಲಿ ಬೃಹತ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ವಿಜಯ್, ತಮ್ಮ ರಾಜಕೀಯ ಪ್ರವೇಶವನ್ನು ಹಾವಿನೊಂದಿಗೆ ಆಡುವ ಮಗುವಿಗೆ ಹೋಲಿಸಿದರು.

‘ರಾಜಕೀಯದಲ್ಲಿ ನಾವಿನ್ನೂ ಮಕ್ಕಳು ಎಂದು ಜನ ಹೇಳ್ತಾರೆ. ಆದರೆ ನಾವು ರಾಜಕೀಯದ ಹಾವಿನ ಜೊತೆ ಆತ್ಮವಿಶ್ವಾಸದಿಂದ ಆಟವಾಡುವ ಮಕ್ಕಳಾಗಿದ್ದೇವೆ ಎಂದರು.
ಮೆಗಾ ರ‍್ಯಾಲಿಯಲ್ಲಿ ಕಣ್ಣು ಹಾಯಿಸಿದ ದೂರವೂ ಜನಸಾಗರವೇ ಸೇರಿತ್ತು. `ನಮ್ಮ ನಾಡು’ ಹೆಸರಿನಲ್ಲಿ ನಡೆಸಿದ ಮೊದಲ ರಾಜಕೀಯ ಭಾಷಣದಲ್ಲೇ ವಿಜಯ್ ಅಬ್ಬರದ ಭಾಷಣ ಮಾಡಿದರು.
ಇನ್ನು ಮಂದೆ ತಮಿಳುನಾಡಿನಲ್ಲಿ `ನಾವುʼ ಆಗಿ ಹೋರಾಡೋಣ. ಕೇವಲ ವಿಜ್ಞಾನ ತಂತ್ರಜ್ಞಾನ ಬದಲಾದರೆ ಸಾಕಾ..? ಯಾಕೆ ರಾಜಕೀಯ.. ರಾಜಕಾರಣಿಗಳು ಬದಲಾಗಬಾರದಾ? ಇನ್ಮೇಲೆ ರಾಜಕಿಯವನ್ನು ಬದಲಾಯಿಸೋಣ.. ಅಭಿವೃದ್ಧಿ ರಾಜಕಾರಣ ಮಾಡೋಣ. ಪೆರಿಯಾರ್, ಕಾಮರಾಜ್ ಅವರ ಮಾರ್ಗದರ್ಶನ, ಮಹಾನ್ ನಾಯಕ ಅಂಬೇಡ್ಕರ್ ಸಂವಿಧಾನದ ಮಾರ್ಗದಲ್ಲಿ ನಡೆಯೋಣ ಅಂತ ಸಮಾಜಸುಧಾರಕಾರು ಹಾಗೂ ತಮಿಳುನಾಡಿನ ಹೋರಾಟಗಾರರನ್ನು ನೆನೆದು ವಿಜಯ್ ಭಾಷಣ ಮಾಡಿದರು.
ರಾಜಕೀಯವನ್ನು ಹಾವಿಗೆ ಹೋಲಿಕೆ ಮಾಡಿದ ದಳಪತಿ, ಭಯವಿಲ್ಲದೆ ಗಂಭೀರತೆ ಮತ್ತು ನಗುವಿನೊಂದಿಗೆ ಅದನ್ನು ಎದುರಿಸಲು ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು. ಈಗಿರುವ ರಾಜಕೀಯ ಭಾಷಣಗಳ ಶೈಲಿಯನ್ನು ಟೀಕಿಸಿದ ಅವರು, ನೇರವಾಗಿ ವಿಷಯಕ್ಕೆ ಬರುವುದು ನಮ್ಮ ವಿಧಾನವಾಗಿರಬೇಕು ಎಂದು ಒತ್ತಿ ಹೇಳಿದರು. ಎಲ್ಲವೂ ಬದಲಾದಾಗ ರಾಜಕೀಯವೂ ಬದಲಾಗಬೇಕು. ವಿಜ್ಞಾನ ಮತ್ತು ತಂತ್ರಜ್ಞಾನ ಮಾತ್ರ ಬದಲಾಗಿ,ಅಭಿವೃದ್ಧಿ ಹೊಂದಬೇಕೇ? ರಾಜಕೀಯ ಬದಲಾಗಬಾರದೇ ಮತ್ತು ಅಭಿವೃದ್ಧಿ ಹೊಂದಬಾರದೇ? ಎಂದು ಪ್ರಶ್ನಿಸಿದರು.
“ಇತರ ರಾಜಕಾರಣಿಗಳ ಬಗ್ಗೆ ಚರ್ಚಿಸಲು, ಸಮಯ ವ್ಯರ್ಥ ಮಾಡಲು ಇಲ್ಲಿಗೆ ಬಂದಿಲ್ಲ. ಆದರೆ ಅವರು ಮಾಡುವುದು ತಪ್ಪು ಎಂದು ತಿಳಿದರೂ ಸುಮ್ಮನೆ ಕೂರುವುದಿಲ್ಲ. ನಾನು ಗಂಟೆಗಟ್ಟಲೆ ಮಾತನಾಡುವುದಿಲ್ಲ, ಇತಿಹಾಸವನ್ನು ಮೆಲುಕು ಹಾಕುವುದಿಲ್ಲ ಅಥವಾ ಅಂಕಿಅಂಶ ನೀಡಲ್ಲ.
ಪೆರಿಯಾರ್ ನಮ್ಮ ಸೈದ್ಧಾಂತಿಕ ನಾಯಕ, ಆದರೆ ನಾವು ಅವರ ನಾಸ್ತಿಕ ನಿಲುವನ್ನು ಮಾತ್ರ ಅಳವಡಿಸಿಕೊಳ್ಳುವುದಿಲ್ಲ ಅಥವಾ ಅದನ್ನು ಒಪ್ಪುವುದಿಲ್ಲ. ಒಂದ್ರೆ ಕುಲಂ, ಒರುವನೇ ತೇವನ್’ ಎಂಬುದು ನಮ್ಮ ನಿಲುವು. ಆದಾಗ್ಯೂ, ನಾವು ಮಹಿಳಾ ಶಿಕ್ಷಣ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಕುರಿತು ಪೆರಿಯಾರ್ ಅವರ ತತ್ವಗಳನ್ನು ಅಳವಡಿಸಿಕೊಳ್ಳುತ್ತೇವೆ ಎಂದು ತಿಳಿಸಿದರು. ಕೆ.ಕಾಮರಾಜ್, ನಮ್ಮ ಮತ್ತೊಬ್ಬ ಸೈದ್ಧಾಂತಿಕ ನಾಯಕ. ಅದೇ ರೀತಿ ಬಿ.ಆರ್. ಅಂಬೇಡ್ಕರ್ ಅವರ ಹೆಸರು ಸಾಮಾಜಿಕ ಸಮಾನತೆಯ ವಿರುದ್ಧ ಕಿಡಿಕಾರಿದವರಿಗೆ ನಮ್ಮ ಮಾರ್ಗದರ್ಶಕ ಶಕ್ತಿಯಾಗಲಿದೆ.ಮಹಿಳಾ ನಾಯಕರನ್ನು ಐಕಾನ್‌ಗಳನ್ನಾಗಿ ಸ್ವೀಕರಿಸಿದ ಮೊದಲ ಪಕ್ಷ ಟಿವಿಕೆ ಎಂದ ವಿಜಯ್, ವೇಲು ನಾಚಿಯಾರ್ ಮತ್ತು ಸ್ವಾತಂತ್ರ್ಯ ಹೋರಾಟಗಾರ್ತಿ ಅಂಜಲೈ ಅಮ್ಮಾಳ್ ಕೂಡ ಪಕ್ಷದ ಮಾರ್ಗದರ್ಶಕರಾಗಿದ್ದಾರೆ ಎಂದು ಹೇಳಿದರು.
ರಾಜಕೀಯ ನಿಲುವು ತೆಗೆದುಕೊಳ್ಳುವುದು ಪ್ರಮುಖವಾಗಿದೆ. ನಾವು ಒಂದು ನಿಲುವು ತೆಗೆದುಕೊಂಡರೆ, ಅದು ನಮ್ಮ ವಿರೋಧಿಗಳು ಯಾರು ಎಂಬುದನ್ನು ಸುಲಭವಾಗಿ ಗುರುತಿಸುತ್ತದೆ. ಎಲ್ಲರೂ ಸಮಾನವಾಗಿ ಹುಟ್ಟುತ್ತಾರೆ’ ಎಂದು ನಾವು ಹೇಳಿದಾಗ, ನಮ್ಮ ನಿಜವಾದ ವಿರೋಧಿಗಳು ಯಾರು ಎಂದು ಗುರುತಿಸುತ್ತೇವೆ. ನಾವು ವಿಭಜಕ ರಾಜಕೀಯದ ವಿರುದ್ಧ ಮಾತ್ರವಲ್ಲದೆ ಭ್ರಷ್ಟ ಶಕ್ತಿಗಳ ವಿರುದ್ಧವೂ ಹೋರಾಟ ನಡೆಸುತ್ತೇವೆ ಎಂದರು. ವಿಭಜಕ ಶಕ್ತಿಗಳನ್ನು ಗುರುತಿಸುವುದು ಸುಲಭ, ಆದರೆ ಸಿದ್ಧಾಂತ ಮತ್ತು ತತ್ವಗಳ ಮುಖವಾಡದ ಹಿಂದೆ ಅಡಗಿರುವ ಭ್ರಷ್ಟ ಶಕ್ತಿಗಳನ್ನು ಗುರುತಿಸುವುದು ಕಷ್ಟ. ಇಲ್ಲಿ ಆಳುವವರೇ ಭ್ರಷ್ಟ ಶಕ್ತಿಗಳು ಎಂದು ಪರೋಕ್ಷವಾಗಿ ಡಿಎಂಕೆ ವಿರುದ್ಧ ವಾಗ್ದಾಳಿ ನಡೆಸಿದರು.
ಕೆಲವರು ಮೀನು ಕೊಡುವುದಕ್ಕಿಂತ ಮೀನು ಹಿಡಿಯುವುದನ್ನು ಕಲಿಸುವುದು ಉತ್ತಮ ಎಂದು ಹೇಳುತ್ತಾರೆ. ಅದರಲ್ಲಿ ನಮಗೆ ನಂಬಿಕೆ ಇಲ್ಲ. ಮೀನು ಹಿಡಿಯಬಲ್ಲವರು ಮೀನು ಹಿಡಿಯಲಿ. ಆಗದವರಿಗೆ ಮೀನು ಹಿಡಿದು ಅವರಿಗೂ ಕೊಡೋಣ. ಜನರಿಗೆ ಒಳ್ಳೆಯದನ್ನು ಮಾಡಿದರೆ ಏನೂ ತಪ್ಪಿಲ್ಲ. ಇಲ್ಲಿ ಸೇರಿರುವವರು ಹಣಕ್ಕಾಗಿ ಸೇರಿಲ್ಲ. ಆದರೆ ಒಳ್ಳೆಯ ಉದ್ದೇಶಕ್ಕಾಗಿ ಸೇರಿದ್ದಾರೆ. ಒಡೆದು ಆಳುವ ರಾಜಕಾರಣ ಮಾಡುವವರು ನಮ್ಮ ಸೈದ್ಧಾಂತಿಕ ಶತ್ರುಗಳು ಎಂದರು.
ನಮ್ಮ ನಾಡಿಗಾಗಿ ಎಕ್ಟ್ರಾ ಮಾಡಲು ಬಂದಿದ್ದೇನೆ. ಇಲ್ಲಿ ನೀವೆಲ್ಲಾ ಸೇರಿರೋದು ಹಣದಿಂದ ಅಲ್ಲ. ಒಂದು ಒಳ್ಳೇ ಕಾರಣಕ್ಕಾಗಿ ಸ್ವಯಂಪ್ರೇರಿತವಾಗಿ ಸೇರಿದ್ದೀರಿ. ನಾವೆಲ್ಲಾ ಒಳ್ಳೆಯದನ್ನು ಮಾಡಲು ಇರುವ ಸೈನಿಕರಿದ್ದಂತೆ. ಸೋಷಿಯಲ್ ಮೀಡಿಯಾದ ಟ್ರೋಲ್‌ಗೆಲ್ಲಾ ಅಂಜಲ್ಲ. ಅಂದ್ರು. 2026ರ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರದಲ್ಲಿ ನಿಲ್ತೇವೆ, ಬಹುದೊಡ್ಡ ಪಕ್ಷವಾಗಿ ಗೆಲ್ತೇವೆ ಅಂತ ವಿಜಯ ಹೇಳಿದ್ದಾರೆ.
ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಜನರು ಬಹುಮತ ನೀಡುವ ಮೂಲಕ ಟಿ.ವಿ.ಕೆಯನ್ನು ಗೆಲ್ಲಿಸಲಿದ್ದಾರೆ ಎಂಬ ವಿಶ್ವಾಸವಿದೆ. ಒಂದು ವೇಳೆ ಬಹುಮತ ಬಾರದಂತ ರಾಜಕೀಯ ಪರಿಸ್ಥಿತಿ ಉದ್ಬವಿಸಿದಾಗ ಮೈತ್ರಿ ಬಯಸುವ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲಾಗುವುದು ಎಂದು ಹೇಳುವುದರೊಂದಿಗೆ ದಳಪತಿ ವಿಜಯ್ ತಮ್ಮ ಮಾತು ಮುಗಿಸಿದರು.
ಸಮಾವೇಶಕ್ಕೆ ತಮಿಳುನಾಡು ಮತ್ತು ನೆರೆ ರಾಜ್ಯಗಳಿಂದ ಸುಮಾರು 5 ಲಕ್ಷಕ್ಕೂ ಹೆಚ್ಚು ಬೆಂಬಲಿಗರು ಮತ್ತು ಅಭಿಮಾನಿಗಳು ಬಂದಿದ್ದರು ಎಂದು ಮೂಲಗಳು ತಿಳಿಸಿವೆ.