ಟಿಕೆಟ್ ಕೊಡಿಸುವುದಾಗಿ ವಂಚನೆ; ಪ್ರಹ್ಲಾದ ಜೋಶಿ ಸಹೋದರ ಗೋಪಾಲ ಜೋಶಿ ಬಂಧನ

ಟಿಕೆಟ್ ಕೊಡಿಸುವುದಾಗಿ ವಂಚನೆ; ಪ್ರಹ್ಲಾದ ಜೋಶಿ ಸಹೋದರ ಗೋಪಾಲ ಜೋಶಿ ಬಂಧನ
ಬೆಂಗಳೂರು: ಕಳೆದ ಲೋಕಸಭೆ ಚುನಾವಣೆ ವೇಳೆ ಟಿಕೆಟ್ ಕೊಡಿಸುವುದಾಗಿ 2 ಕೋಟಿ ರೂಪಾಯಿ ಪಡೆದು ವಂಚಿಸಿರುವ ಆರೋಪದ ಅಡಿ ದಾಖಲಾಗಿದ್ದ ಪ್ರಕರಣದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಸಹೋದರ ಹಾಗೂ ಅವರ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ.
ಎಸಿಪಿ ಚಂದನ್ (ACP Chandan) ಅವರ ನೇತೃತ್ವದಲ್ಲಿ ಬೆಂಗಳೂರಿನ ಬಸವೇಶ್ವರ ನಗರ ಠಾಣಾ ಪೊಲೀಸರು ಗೋಪಾಲ್ ಜೋಶಿ ಅವರನ್ನು ಬಂಧಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಗೋಪಾಲ್ ಜೋಶಿ ತಲೆಮರೆಸಿಕೊಂಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರ ವಿರುದ್ಧ ಬಸವೇಶ್ವರನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ನಿನ್ನೆಯೇ ಸೋಮಶೇಖರ್ ನಾಯಕ್ ಹಾಗೂ ವಿಜಯಕುಮಾರಿ ಎಂಬುವವರನ್ನು ಬಂಧಿಸಲಾಗಿದೆ.
ಸುನೀತಾ ಚೌಹಾಣ್ ಎಂಬುವವರು ನೀಡಿದ ದೂರಿನ ಮೇರೆಗೆ ಗೋಪಾಲ್ ಜೋಶಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಇಂದು ವಿಚಾರಣೆ ಹಾಜರಾಗುವಂತೆ ಸೂಚನೆ ಹಿನ್ನಲೆ ಹುಬ್ಬಳ್ಳಿ ಕೇಶ್ವಾಪೂರ ಪೊಲೀಸ್ ಠಾಣೆಗೆ ಸುನೀತಾ ಚೌಹಾಣ್ ಆಗಮಿಸಿದ್ದರು. ಬಳಿಕ ಅವರನ್ನು ಸ್ಥಳ ಮಹಜರಿಗಾಗಿ ಹುಬ್ಬಳ್ಳಿಯ ಇಂದಿರಾ ಕಾಲೋನಿಯಲ್ಲಿರುವ ಗೋಪಾಲ್ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಎಸಿಪಿ ಚಂದನ್ರೊಂದಿಗೆ ಅಶೋಕನಗರ ಪೊಲೀಸರ ತಂಡದಿಂದ ಗೋಪಾಲ್ ಜೋಶಿ ನಿವಾಸದಲ್ಲಿ ಪಂಚನಾಮೆ ಮಾಡಲಾಗಿದೆ.
ಹುಬ್ಬಳ್ಳಿ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ತೀವ್ರ ವಿಚಾರಣೆ ನಡೆಸಿದ ಬಳಿಕ ಹುಬ್ಬಳ್ಳಿಯ ಇಂದಿರಾ ಕಾಲೋನಿಯಲ್ಲಿನ ಗೋಪಾಲ ಜೋಶಿ ಅವರ ಮನೆಗೆ ಕರೆ ತಂದು ವಿಚಾರಣೆ ನಡೆಸುತ್ತಿದ್ದಾರೆ. ದೂರುದಾರೆ ಸುನೀತಾ ಚೌಹ್ವಾಣ್ ಸಹ ಕೇಶ್ವಾಪುರ ಠಾಣೆ ಆಗಮಿಸಿದ್ದು ಅವರಿಂದ ಪೊಲೀಸರು ಹೇಳಿಕೆ ಪಡೆಯುತ್ತಿದ್ದಾರೆ.
ಬಿಜೆಪಿ ಮಾಜಿ ಶಾಸಕ ದೇವಾನಂದ್ ಸಿಂಗ್ ಚವ್ಹಾಣ್ ಅವರ ಪತ್ನಿ ಸುನಿತಾ ಚವ್ಹಾಣ್ ನೀಡಿದ ದೂರಿನ ಆಧಾರದ ಮೇಲೆ ಬೆಂಗಳೂರು ಪೊಲೀಸರು ಗೋಪಾಲ್ ಜೋಶಿ, ವಿಜಯಲಕ್ಷ್ಮೀ ಹಾಗೂ ಅಜಯ್ ಜೋಶಿ ವಿರುದ್ಧ ಎಫ್ಐಆರ್ ದಾಖಲಿಸಿದ್ದು ಪೊಲೀಸರು ಆರೋಪಿಗಳನ್ನು ಬೆಂಗಳೂರಿಗೆ ಕರೆತರಲು ಸಿದ್ಧತೆ ನಡೆಸುತ್ತಿದ್ದಾರೆ.

ಗೋಪಾಲ್ ಜೋಶಿ ನನ್ನ ಸಹೋದರ ಅದರಲ್ಲಿ ಯಾವುದೇ ಅನುಮಾನವಿಲ್ಲ. ಈಗ ಅವರಿಗೂ ನನಗೂ ಯಾವುದೇ ಕೌಟುಂಬಿಕ ಹಾಗೂ ಹಣಕಾಸಿಕ ಸಂಬಂಧ ಇಲ್ಲ ಎಂದು ಪ್ರಹ್ಲಾದ್ ಜೋಶಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ತಿಳಿಸಿದ್ದರು.
ನನ್ನ ಹಿರಿಯ ಸಹೋದರ ಗೋಪಾಲ್ ಜೋಶಿ ಅವರು ನಾನು ಬೇರೆಯಾಗಿ 33 ವರ್ಷಗಳು ಕಳೆದಿವೆ. ಈ ಹಿಂದೆಯೂ ಅವರ ವಿರುದ್ಧ ಎರಡು ಸಲ ಆರೋಪ ಕೇಳಿ ಬಂದಿತ್ತು. ಅದಕ್ಕಾಗಿ ನಾನು ಹಿಂದೆಯೇ ಗೋಪಾಲ್ ಜೋಶಿ ಅವರೊಂದಿಗೆ ನನ್ನ ಹೆಸರು ಲಿಂಕ್ ಮಾಡಬಾರದು ಎಂದು ಕೋರ್ಟ್‌ನಿಂದ ಆದೇಶ ತಂದಿದ್ದೇನೆ. ಸಾಮಾಜಿಕವಾಗಿ ಆರ್ಥಿಕವಾಗಿ ಯಾವುದೇ ಸಂಬಂಧ ಇಲ್ಲ ಎಂದು ಕೋರ್ಟ್‌ಗೆ ಮಾಹಿತಿ ನೀಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಮಾಜಿ ಸಿಎಂ ಎಸ್‌ಎಂ ಕೃಷ್ಣ ಮಣಿಪಾಲ್ ಆಸ್ಪತ್ರೆಗೆ ದಾಖಲು:
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ (SM Krishna) ಮತ್ತೆ ಮಣಿಪಾಲ್ ಆಸ್ಪತ್ರೆಗೆ(Manipal Hospital) ದಾಖಲಾಗಿದ್ದಾರೆ.
ಎರಡು ದಿನಗಳ ಹಿಂದೆ ಮಣಿಪಾಲ್ ಆಸ್ಪತ್ರೆಗೆ ಎಸ್‌ಎಂ ಕೃಷ್ಣ ದಾಖಲಾಗಿದ್ದಾರೆ. ಕಳೆದ ಬಾರಿ ದೀರ್ಘ ಕಾಲದವರೆಗೂ ಆಸ್ಪತ್ರೆಗೆ ದಾಖಲಾಗಿ ಎಸ್‌ಎಂಕೆ ಚಿಕಿತ್ಸೆ ಪಡೆದಿದ್ದರು. ಇಂದು ಮತ್ತೆ ರೂಟಿನ್ ಚೆಕಪ್ ಮಾಡಿಸಲು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇನ್ನು ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಟ್ವೀಟ್ ಮಾಡಿದ್ದು, ಶೀಘ್ರವೇ ಎಸ್‌ಎಂಕೆ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ. ಅನಾರೋಗ್ಯದ ಕಾರಣದಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿರುವ ರಾಜ್ಯದ ಹಿರಿಯ ರಾಜಕೀಯ ಮುತ್ಸದ್ದಿಗಳು, ಮಾಜಿ ಮುಖ್ಯಮಂತ್ರಿಗಳಾದ ಎಸ್‌ಎಂ ಕೃಷ್ಣ ಅವರು ಶೀಘ್ರ ಗುಣಮುಖರಾಗಿ ಸಹಜ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲೆಂದು ಹಾರೈಸುತ್ತೇನೆ ಎಂದು ವಿಜಯೇಂದ್ರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬಿಜೆಪಿ ಶಾಸಕ ಯತ್ನಾಳ್ ವಿರುದ್ಧ ಪ್ರಕರಣ ದಾಖಲು:
ವಿಜಯಪುರ: ಇತ್ತೀಚೆಗೆ ನಡೆದ ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರನ್ನು ನಿಂದಿಸಿದ ಆರೋಪದ ಮೇಲೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಕಾಂಗ್ರೆಸ್ ನಗರಸಭಾ ಸದಸ್ಯ ಪರಶುರಾಮ ಹೊಸಮನಿ ಅವರ ದೂರಿನ ಮೇರೆಗೆ ಶುಕ್ರವಾರ ಪ್ರಕರಣ ದಾಖಲಾಗಿದೆ. ಅಕ್ಟೋಬರ್ 15 ರಂದು ನಡೆದ ಕಾರ್ಯಕ್ರಮವೊಂದರಲ್ಲಿ ಯತ್ನಾಳ್ ಅವರು ರಾಹುಲ್ ಗಾಂಧಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಹೊಸಮನಿ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ಅವರ ದೂರಿನ ಆಧಾರದ ಮೇಲೆ, ಯತ್ನಾಳ್ ವಿರುದ್ಧ ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ಶಾಂತಿ ಕದಡುವ ಉದ್ದೇಶಪೂರ್ವಕ ಅವಮಾನ ಮತ್ತು ಸುಳ್ಳು ಮತ್ತು ತಪ್ಪು ಮಾಹಿತಿ ಹರಡಿದ ಪ್ರಕರಣವನ್ನು ದಾಖಲಿಸಲಾಗಿದೆ. ಶಾಂತಿ ಸೌಹಾರ್ಧವನ್ನು ಕೆಡಿಸುವ ದುರುದ್ದೇಶದಿಂದ ಸಾರ್ವಜನಿಕವಾಗಿ ಇತರೆ ಧರ್ಮದವರನ್ನು ಹೀಯಾಳಿಸಿ ,ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಎಲ್ಲರಿಗೂ ಮಾನಸಿಕ ನೋವನ್ನುಂಟು ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸರ್ವರ್ ನಿರ್ವಹಣೆ ಕಾರ್ಯ: ರಾಜ್ಯದಾದ್ಯಂತ ಪಡಿತರ ವಿತರಣೆಯಲ್ಲಿ ಸಮಸ್ಯೆ
ದಾವಣಗೆರೆ: ಎನ್‌ಐಸಿ(ರಾಷ್ಟ್ರೀಯ ಮಾಹಿತಿ ಕೇಂದ್ರ)ದಿಂದ ಕರ್ನಾಟಕ ರಾಜ್ಯ ದತ್ತಾಂಶ ಕೇಂದ್ರಕ್ಕೆ(ಕೆಎಸ್‌ಡಿಸಿ) ಸರ್ವರ್ ಸ್ಥಳಾಂತರಗೊಂಡಿರುವುದರಿಂದ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ತಿಂಗಳ ಪಡಿತರ ವಿತರಣೆಯಲ್ಲಿ ತೊಂದರೆ ಉಂಟಾಗಿದೆ.
ಅವಳಿ ಜಿಲ್ಲೆಗಳ ವಿವಿಧ ಭಾಗಗಳಲ್ಲಿ ಮತ್ತು ರಾಜ್ಯದ ಇತರ ಭಾಗಗಳಲ್ಲಿನ ಪಿಡಿಎಸ್ ಅಂಗಡಿಗಳ ಮುಂದೆ ಫಲಾನುಭವಿಗಳು ದೊಡ್ಡ ಕ್ಯೂಗಳಲ್ಲಿ ಗಂಟೆಗಟ್ಟಲೆ ನಿಲ್ಲಬೇಕಾಯಿತು. ಹೊಸ ಸರ್ವರ್‌ನಲ್ಲಿ ಡೇಟಾ ಲಭ್ಯವಿಲ್ಲದ ಕಾರಣ ಅವರಲ್ಲಿ ಕೆಲವರು ಬರಿಗೈಯಲ್ಲಿ ಹಿಂತಿರುಗಿದರು. ಇನ್ನು ಕೆಲವರು ಸರ್ವರ್ ವೈಫಲ್ಯದಿಂದ ಪಡಿತರ ಸಿಗದೆ ವಾಪಸ್ಸಾಗಬೇಕಾಯಿತು.
ರಾಷ್ಟ್ರೀಯ ಮಾಹಿತಿ ಕೇಂದ್ರದ ಸರ್ವರ್‌ನಲ್ಲಿ ಸೃಷ್ಟಿಯಾದ ಹಲವು ಸಮಸ್ಯೆಗಳಿಂದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಹೊಸ ಸರ್ವರ್ ಅನ್ನು ಕರ್ನಾಟಕ ಸ್ಟೇಟ್ ಡೇಟಾ ಸೆಂಟರ್(ಕೆಎಸ್‌ಡಿಸಿ) ಗೆ ಸ್ಥಳಾಂತರಿಸಲಾಗಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಧುಸೂಧನ್ ಮಾತನಾಡಿ, ಎರಡು ದಿನಗಳ ಹಿಂದೆ ಎನ್‌ಐಸಿ ಸರ್ವರ್‌ನಿಂದ ಕೆಎಸ್‌ಡಿಸಿ ಸರ್ವರ್‌ಗೆ ದತ್ತಾಂಶ ಬದಲಾವಣೆ ಆರಂಭವಾಗಿದ್ದು, ಇದರಿಂದ ಸಾರ್ವಜನಿಕರು ಪಡಿತರ ಚೀಟಿ ಪಡೆಯಲು ಸಮಸ್ಯೆ ಎದುರಿಸುತ್ತಿದ್ದಾರೆ. ಎರಡರಿಂದ ಮೂರು ದಿನಗಳಲ್ಲಿ ಅದನ್ನು ಸರಿಪಡಿಸಿ ಪಡಿತರ ವಿತರಿಸಲಾಗುವುದು ಎಂದು ಹೇಳಿದ್ದಾರೆ.
NFSA (ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ) ಅಡಿಯಲ್ಲಿ ಪಡಿತರ ವಿತರಣೆ ಶೀಘ್ರದಲ್ಲೇ ಸಹಜ ಸ್ಥಿತಿಗೆ ಬರಲಿದೆ. ಪ್ರಸ್ತುತ ಪಡಿತರ ಚೀಟಿದಾರರು ಭಯಪಡುವ ಅಗತ್ಯ ಇಲ್ಲ. ಸಮಸ್ಯೆಯನ್ನು ಸರಿಪಡಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಚಿತ್ರದುರ್ಗದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್ ಮಾತನಾಡಿ, ಎನ್‌ಐಸಿ ಸರ್ವರ್ ಸಮಸ್ಯೆಗಳಿಂದ ತುಂಬಿದ್ದು, ರಾಷ್ಟ್ರೀಯ ಮಾಹಿತಿ ಕೇಂದ್ರದಿಂದ ಕರ್ನಾಟಕ ರಾಜ್ಯ ದತ್ತಾಂಶ ಕೇಂದ್ರದ ಸರ್ವರ್‌ಗೆ ಸ್ಥಳಾಂತರಿಸುತ್ತಿದ್ದೇವೆ. ಇದು ಇಲಾಖೆಗೆ ಸುಲಭವಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ ಎಂದಿದ್ದಾರೆ.