‘ಜೊತೆ ಜೊತೆಯಲಿ’ ಸೀರಿಯಲ್ ಪಯಣ ಮುಗಿಯಿತು : ನಟಿ ಮೇಘಾ ಶೆಟ್ಟಿ
ಆರೂರು ಜಗದೀಶ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಜೊತೆ ಜೊತೆಯಲಿ’ (Jothe Jotheyali) ಧಾರಾವಾಹಿ ಮುಗಿಯುತ್ತಿದೆಯಾ? ಅಥವಾ ಸೀರಿಯಲ್ (Serial) ನಾಯಕಿ ಮೇಘಾ ಶೆಟ್ಟಿ (Megha Shetty) ಪಾತ್ರ ಮುಕ್ತಾಯ ಆಗುತ್ತಿದೆಯೋ ಗೊತ್ತಿಲ್ಲ. ಆದರೆ, ತಮ್ಮ ಪಾತ್ರವು ಧಾರಾವಾಹಿಯ ಕಥೆಯಲ್ಲಿ ಮುಗಿಯುತ್ತಿರುವ ಕುರಿತು ನಟಿ ಮೇಘಾ ಶೆಟ್ಟಿ ಹಂಚಿಕೊಂಡಿದ್ದಾರೆ. ಒಂದೊಂದು ರೀತಿಯಲ್ಲಿ ಕುಟುಂಬವನ್ನು ತೊರೆದಂತೆ ನೋವು ಆಗುತ್ತಿದೆ ಎಂದು ಅವರು ಹೇಳಿದ್ದಾರೆ.
ಜೊತೆ ಜೊತೆಯಲಿ ಧಾರಾವಾಹಿಯು ಅವರ ವೃತ್ತಿ ಜೀವನಕ್ಕೆ ದೊಡ್ಡ ಬ್ರೇಕ್ ನೀಡಿತ್ತು. ಸತತ ನಾಲ್ಕು ವರ್ಷಗಳ ಕಾಲ ಪ್ರೇಕ್ಷಕರನ್ನು ರಂಜಿಸಿರುವ ಧಾರಾವಾಹಿಯು ಅಪಾರ ಅಭಿಮಾನಿಗಳನ್ನು ಹೊಂದಿತ್ತು. ಅದರಲ್ಲೂ ಅನಿರುದ್ಧ ಜತ್ಕರ್ ಗೂ ಕೂಡ ದೊಡ್ಡ ಮಟ್ಟದ ಗೆಲುವನ್ನು ತಂದು ಕೊಟ್ಟಿತ್ತು. ಅಂತಹ ಧಾರಾವಾಹಿ ಈಗ ಅಂತಿಮ ದೃಶ್ಯಗಳನ್ನು ಚಿತ್ರೀಕರಿಸುತ್ತಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಮೇಘಾ ನಿರ್ವಹಿಸುತ್ತಿದ್ದ ಪಾತ್ರವೂ ಕೊನೆಗೊಂಡಿದೆ.
ಜೊತೆ ಜೊತೆಯಲಿ ಧಾರಾವಾಹಿ ಮುಗಿಯುತ್ತಿದ್ದಂತೆಯೇ ಮೇಘಾ ಶೆಟ್ಟಿ ಸಿನಿಮಾಗಳಲ್ಲಿ ತೊಡಗಿಕೊಳ್ಳಲಿದ್ದಾರೆ. ಈಗಾಗಲೇ ಅವರು ಗೋಲ್ಡನ್ ಸ್ಟಾರ್ ಗಣೇಶ್ (Ganesh) ನಟನೆಯ ಟ್ರಿಬಲ್ ರೈಡಿಂಗ್ (Triple Riding) ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ್ದಾರೆ. ಅಲ್ಲದೇ, ಧನ್ವೀರ್ ನಟನೆಯ ಕೈವಾ ಸಿನಿಮಾದಲ್ಲೂ ನಾಯಕಿಯಾಗಿ ನಟಿಸಿದ್ದಾರೆ. ಆಪರೇಷನ್ ಲಂಡನ್ ಕೆಫೆ ಸಿನಿಮಾದ ಶೂಟಿಂಗ್ ನಲ್ಲೂ ಬ್ಯುಸಿಯಾಗಿದ್ದಾರೆ.
ಕಿರುತೆರೆಯಿಂದ ಆಚೆ ಬರುತ್ತಿದ್ದಂತೆಯೇ ಹಲವಾರು ನಿರ್ದೇಶಕರು ಮೇಘಾರ ಜೊತೆ ಮಾತುಕತೆ ಮಾಡುತ್ತಿದ್ದಾರಂತೆ. ಹಲವು ಸ್ಕ್ರಿಪ್ಟ್ ಗಳನ್ನೂ ಅವರು ಕೇಳಿದ್ದಾರೆ. ಒಂದಷ್ಟು ಒಪ್ಪಿಕೊಂಡಿದ್ದಾರಂತೆ. ಮುಂದಿನ ದಿನಗಳಲ್ಲಿ ಈ ಸಿನಿಮಾಗಳ ಬಗ್ಗೆ ಮಾಹಿತಿ ಸಿಗಬಹುದು.