ಜೆಮಿಮಾ, ರಿಚಾ ಸೂಪರ್ ಆಟ; ಪಾಕಿಸ್ತಾನ ವಿರುದ್ಧ ಭಾರತ ಮಹಿಳಾ ತಂಡಕ್ಕೆ 7 ವಿಕೆಟ್ ಗಳ ಭರ್ಜರಿ ಜಯ
ಕೇಪ್‌ಟೌನ್: ಜೆಮಿಮಾ ರಾಡ್ರಿಗಸ್ ಮತ್ತು ರಿಚಾ ಘೋಷ್ ಅತ್ಯುತ್ತಮ ಆಟದಿಂದ ಭಾರತ ತಂಡ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 3 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತು. ಭಾರತ ಇನ್ನೂ 6 ಎಸೆತ ಬಾಕಿ ಇರುವಂತೆಯೇ 3 ವಿಕೆಟ್ ನಷ್ಟಕ್ಕೆ 151 ರನ್ ಹೊಡೆದು ಟೂರ್ನಿಯಲ್ಲಿ ಶುಭಾರಂಭ ಮಾಡಿತು. ವಿಶ್ವಕಪ್ ಇತಿಹಾಸದಲ್ಲಿ ಎರಡನೇ ಅತಿ ದೊಡ್ಡ ಚೇಸಿಂಗ್ ಇದಾಗಿದ್ದು, ಟೂರ್ನಿಯಲ್ಲಿ ಭಾರತದ ಅತಿ ದೊಡ್ಡ ಚೇಸಿಂಗ್ ಇದಾಗಿದೆ.
ಕೊನೆಯ ನಾಲ್ಕು ಓವರ್‌ನಲ್ಲಿ ಟೀಂ ಇಂಡಿಯಾ ಗೆಲುವಿಗೆ 41 ರನ್ ಅಗತ್ಯವಿತ್ತು. 17ನೇ ಓವರ್‌ನಲ್ಲಿ 13 ರನ್ ಬಂದರೆ 18ನೇ ಓವರ್‌ನಲ್ಲಿ ರಿಚಾ ಘೋಷ್ ಹ್ಯಾಟ್ರಿಕ್ ಫೋರ್ ಹೊಡೆದ ಪರಿಣಾಮ 14 ರನ್ ಬಂದಿತ್ತು. 19ನೇ ಓವರ್‌ನಲ್ಲಿ ರಾಡ್ರಿಗಸ್ 3 ಬೌಂಡರಿ ಹೊಡೆದ ಪರಿಣಾಮ ಪಂದ್ಯವನ್ನು ಭಾರತ ಗೆದ್ದುಕೊಂಡಿತು.
ಜೆಮಿಮಾ ಮತ್ತು ರಿಚಾ ಘೋಷ್ ಮುರಿಯದ ನಾಲ್ಕನೇ ವಿಕೆಟಿಗೆ 33 ಎಸೆತಗಳಲ್ಲಿ 58 ರನ್ ಜೊತೆಯಾಟವಾಡುವ ಮೂಲಕ ಪಂದ್ಯವನ್ನು ಗೆಲ್ಲಿಸಿಕೊಟ್ಟರು.
ಜೆಮಿಮಾ ಔಟಾಗದೇ 53 ರನ್(38 ಎಸೆತ, 8 ಬೌಂಡರಿ), ರಿಚಾ ಘೋಷ್ ಔಟಾಗದೇ 31 ರನ್(20 ಎಸೆತ, 5 ಬೌಂಡರಿ) ಶಫಾಲಿ ವರ್ಮಾ 33 ರನ್( 25 ಎಸೆತ, 4 ಬೌಂಡರಿ), ಯಾಸ್ತಿಕ ಭಾಟಿಯಾ 17 ರನ್(20 ಎಸೆತ, 2 ಬೌಂಡರಿ), ನಾಯಕಿ ಹರ್ಮನ್ ಪ್ರೀತ್ ಕೌರ್ 16 ರನ್(12 ಎಸೆತ, 2 ಬೌಂಡರಿ) ಹೊಡೆದರು.
ಟಾಸ್ ಗೆದ್ದು ಮೊದಲು ಬ್ಯಾಟ್ ಬೀಸಿದ ಪಾಕಿಸ್ತಾನದ ಪರವಾಗಿ ನಾಯಕಿ ಬಿಸ್ಮಾ ಮರೂಫ್ ಔಟಾಗದೇ 68 ರನ್(55 ಎಸೆತ, 7 ಬೌಂಡರಿ), ಆಯೇಷಾ ನಸೀಮ್ ಔಟಾಗದೇ 43 ರನ್(25 ಎಸೆತ, 2 ಬೌಂಡರಿ, 2 ಸಿಕ್ಸರ್) ಹೊಡೆದರು.