ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಮಾಜಿ ಶಾಸಕ ಶಿವಲಿಂಗೇಗೌಡ
ಹಾಸನ: ಇತ್ತೀಚಿಗಷ್ಟೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅರಸೀಕೆರೆ ಮಾಜಿ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ಭಾನುವಾರ ಜೆಡಿಎಸ್ ತೊರೆದು ಅಧಿಕೃತವಾಗಿ ಕಾಂಗ್ರೆಸ್ ಸೇರಿದ್ದಾರೆ.
ಇಂದು ಹಾಸನ ಜಿಲ್ಲೆ ಅರಸೀಕೆರೆಯಲ್ಲಿ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.
ಮೂರು ಬಾರಿ ಜೆಡಿಎಸ್‌ನಿಂದ ಶಾಸಕರಾಗಿದ್ದ ಶಿವಲಿಂಗೇಗೌಡ ಅವರು ಈಚೆಗಷ್ಟೇ ಜೆಡಿಎಸ್ ಪಕ್ಷ ತೊರೆದಿದ್ದರು. ಜೊತೆಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೂಡ ಸಲ್ಲಿಸಿದ್ದರು. ಇದೀಗ ಅರಸೀಕೆರೆ ಪಟ್ಟಣದ ಜೇನುಕಲ್ಲು ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
2008ರಲ್ಲಿ ಮೊದಲ ಬಾರಿ ವಿಧಾನಸಭೆ ಆಯ್ಕೆಯಾಗಿದ್ದರು, 2018ರ ಚುನಾವಣೆಯಲ್ಲಿ ಅರಸಿಕೆರೆ ವಿಧಾನಸಭೆ ಕ್ಷೇತ್ರದಲ್ಲಿ 93,986 ಮತಗಳನ್ನು ಪಡೆದು ಜಯಗಳಿಸಿದ್ದರು. ಜೆಡಿಎಸ್ ನಲ್ಲಿ ನಿರೀಕ್ಷಿತ ಮನ್ನಣೆ, ಸ್ಥಾನಮಾನ ಸಿಗದ ಕಾರಣ ಅವರು ಜೆಡಿಎಸ್ ತೊರೆಯಲು ನಿರ್ಧರಿಸಿದ್ದರು. ಇಂದು ಅಧಿಕೃತವಾಗಿ ಕಾಂಗ್ರೆಸ್ ಸೇರಿದ್ದು, ಮೇ 10 ರಂದು ನಡೆಯುವ ವಿಧಾನಸಭೆ ಚುನಾವಣೆಗೆ ಈ ಬಾರಿ ಕಾಂಗ್ರೆಸ್ ನಿಂದಲೇ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.
ಕಾಂಗ್ರೆಸ್ ಸೇರಿ ನಂತರ ಮಾತನಾಡಿದ ಶಿವಲಿಂಗೇಗೌಡ, ನನ್ನ ಹಣೆಬರಹದಲ್ಲಿ ಬರೆದಿತ್ತು ಅಂತ ಕಾಣುತ್ತೆ. ಸಿದ್ದರಾಮಯ್ಯ ಅವರು ಜೆಡಿಎಸ್ ತೊರೆದು ಹೇಗೆ ಕಾಂಗ್ರೆಸ್ ಸೇರಿದರೋ, ಅದೇ ರೀತಿ ನಾನು ಕಾಂಗ್ರೆಸ್ ಸೇರಬೇಕು ಅಂತ ನನ್ನ ಹಣೆಯಲ್ಲೂ ಬರೆದಿತ್ತು. ಅದಕ್ಕೆ ಇವತ್ತು ಕಾಂಗ್ರೆಸ್ ಸೇರ್ಪಡೆಗೊಂಡಿದ್ದೇನೆ. ಬಹಳ ಸಂತೋಷದಿಂದ ಇವತ್ತು ಕಾಂಗ್ರೆಸ್ ಸೇರಿದ್ದೇನೆ ಎಂದು ಹೇಳಿದರು.
ಅರಸೀಕೆರೆ ಕ್ಷೇತ್ರಕ್ಕೆ ಬಿಜೆಪಿಯಿಂದ ನಿಲ್ಲಲು ಬಂದಿರುವ ಪುಣ್ಯಾತ್ಮ ಎಲ್ಲರ ಮನೆಗೂ ಒಂದು ಪೇಪರ್ ಪ್ರಿಂಟ್ ಹಾಕಿ ಕಳ್ಸಿದ್ದಾನೆ. ಎಲ್ಲಾ ಬಿಜೆಪಿ ಸರ್ಕಾರದಿಂದ ಆಗಿರುವುದು ಅಂತ. ಅದು ಸುಳ್ಳು, ಬಿಜೆಪಿ ಸರ್ಕಾರದಲ್ಲಿ ಅರಸೀಕೆರೆ ಅಭಿವೃದ್ಧಿ ಆಗಿಲ್ಲ. 538 ಹಳ್ಳಿಗಳಿಗೆ ಕುಡಿಯುವ ನೀರು, ಎತ್ತಿನಹೊಳೆ ಯೋಜನೆ ನೀಡಿದ್ದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ. ಬಿಜೆಪಿಯಿಂದ ಕೆಲವೊಂದು ಆಗಿರಬಹುದು, ಆಗಿಲ್ಲ ಅಂತ ಹೇಳಿಲ್ಲ. ಕಾಂಕ್ರಿಟ್ ರಸ್ತೆಗಾಗಿ ಯಡಿಯೂರಪ್ಪ, ಡಿ.ಕೆ.ಶಿವಕುಮಾರ್ ಹಣ ಕೊಟ್ಟಿದ್ದಾರೆ ಎಂದು ಸ್ಮರಿಸಿದರು.