ಜೆಡಿಎಸ್ ಅಧಿಕಾರಕ್ಕೆ ಬಂದರೆ 5 ಲಕ್ಷ ಮನೆ ನಿರ್ಮಾಣ: ಎಚ್ಡಿಕೆ ಭರವಸೆ
ಬೆಂಗಳೂರು (ಫೆ.6) : ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ 5 ಲಕ್ಷ ಮನೆ ನಿರ್ಮಿಸಲಾಗುವುದು. ವಾಸ ಮಾಡಲು ಮನೆ ಇಲ್ಲ ಎಂದು ಯಾವುದೇ ಕುಟುಂಬ ಹೇಳಬಾರದು. ಆ ರೀತಿಯ ವಾತಾವರಣ ನಿರ್ಮಾಣ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪಂಚರತ್ನ ಯಾತ್ರೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಮುಂದಿನ ಐದು ವರ್ಷದಲ್ಲಿ ಮನೆ ಇಲ್ಲ ಎಂದು ಯಾರೂ ಹೇಳಬಾರದು. ಆ ರೀತಿಯ ವಾತಾವರಣ ನಿರ್ಮಿಸಿ ಬಡವರಿಗೆ ಮನೆ ವಿತರಿಸಲಾಗುವುದು. ಅಷ್ಟೇ ಅಲ್ಲ, ಪ್ರತಿ ಕುಟುಂಬಕ್ಕೆ 15 ರಿಂದ 20 ಸಾವಿರ ರು. ಆದಾಯ ಬರುವಂತಹ ಕಾರ್ಯಕ್ರಮ ರೂಪಿಸಲು ಚಾಲನೆ ನೀಡಿದ್ದೇವೆ ಎಂದು ಸ್ಪಷ್ಟಪಡಿಸಿದರು.
ನಾನು ಮುಖ್ಯಮಂತ್ರಿಯಾಗಿದ್ದಾಗ ಈ ಭಾಗದ ಅಭಿವೃದ್ಧಿಗೆ ಕೋಟ್ಯಂತರ ರು. ಬಿಡುಗಡೆ ಮಾಡಿದ್ದೆ. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಅದೆಲ್ಲವನ್ನೂ ವಾಪಸ್ ಪಡೆದರು. ಈ ಭಾಗದ ಮಾಜಿ ಶಾಸಕ ಮತ್ತು ಸಂಸದ ಸದಾನಂದಗೌಡ ಸೇರಿಕೊಂಡು ಅನುದಾನಕ್ಕೆ ಕೊಕ್ಕೆ ಹಾಕಿದರು. ನಗರದ ಹೊರ ಭಾಗದ ಹಳ್ಳಿಗಳನ್ನು ಸೇರಿಸಿ ಬಿಬಿಎಂಪಿ ರಚನೆ ಮಾಡಿ ಅಭಿವೃದ್ಧಿ ಮಾಡಿದ್ದು ನನ್ನ ಕಾಲದಲ್ಲಿ. ನಾವು ಆಗ ಲೂಟಿ ಮಾಡಿ ಅದರಲ್ಲಿ ಚುನಾವಣೆ ನಡೆಸಿದ್ದರೆ ಇಂದು ಬಿಜೆಪಿಯವರು ಮನೆಯಲ್ಲಿ ಇರುತ್ತಿದ್ದರು ಎಂದು ಟೀಕಿಸಿದರು.
ನಮ್ಮ ಕುಟುಂಬದ ಟಿಕೆಟ್ ಬಗ್ಗೆ ವರಿಷ್ಠರು ತೀರ್ಮಾನ
ಟಿಕೆಟ್ ಹಂಚಿಕೆಯಲ್ಲಿ ಯಾವುದೇ ಗೊಂದಲ ಇಲ್ಲ. ನಮ್ಮ ಕುಟುಂಬದಲ್ಲಿ ಟಿಕೆಟ್ ಹಂಚಿಕೆಯಲ್ಲಿ ವರಿಷ್ಠರ ತೀರ್ಮಾನವೇ ಅಂತಿಮ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ, ನಟ ನಿಖಿಲ್ ಕುಮಾರಸ್ವಾಮಿ ತಿಳಿಸಿದರು. ಎಚ್.ಡಿ.ರೇವಣ್ಣನವರು ಮಂಡ್ಯ ಜಿಲ್ಲೆಯಿಂದ ಸ್ಪರ್ಧಿಸುವ ವಿಚಾರ ಗೊತ್ತಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ 40-50 ಸ್ಥಾನಗಳಿಗೆ ಸೀಮಿತವಾಗಿಲ್ಲ. 123 ಸ್ಥಾನಗಳನ್ನು ಗೆಲ್ಲುವ ಗುರಿ ಇಟ್ಟುಕೊಂಡು ಎಚ್.ಡಿ.ಕುಮಾರಸ್ವಾಮಿ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದಲ್ಲಿ ಜನಿಸಿದ್ದೇ ನನ್ನ ಪುಣ್ಯ. ಅದರಲ್ಲೂ ಮಾಜಿ ಸಿಎಂ ಕುಮಾರಸ್ವಾಮಿಯವರ ಮಗನಾಗಿ ಜನಿಸಿದ್ದು ನನ್ನ ಭಾಗ್ಯ ಎಂದರು.