ಜೀವನದಲ್ಲಿ ಅರ್ಧಶತಕ ಬಾರಿಸಿದ ಸಚಿನ್ ತೆಂಡೂಲ್ಕರ್; ಸಾಧನೆಗಳ ಕಿರು ಪರಿಚಯ ಇಲ್ಲಿದೆ!

ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್‌ರ 50ನೇ ಹುಟ್ಟುಹಬ್ಬವನ್ನು 2 ದಿನ ಮೊದಲೇ ಮುಂಬೈ ಇಂಡಿಯನ್ಸ್ ತಂಡ ವಾಂಖೆಡೆ ಮೈದಾನದಲ್ಲಿ ವಿಶೇಷವಾಗಿ ಆಚರಿಸಲಾಗಿತ್ತು. ಪಂಜಾಬ್ ಕಿಂಗ್ಸ್ ಎದುರಿನ ಪಂದ್ಯದ ನಡುವೆಯೇ 2ನೇ ಟೈಮ್ ಔಟ್ ಸಂದರ್ಭದಲ್ಲಿ ಮುಂಬೈ ತಂಡದ ಡಗೌಟ್ ಬಳಿ ಸಚಿನ್ ಕೇಕ್ ಕತ್ತರಿಸಿದ್ದರು.
ಬ್ಯಾಟಿಂಗ್ ದಿಗ್ಗಜ, ಲಿಟಲ್ ಮಾಸ್ಟರ್, ಕ್ರಿಕೆಟ್ ಕ್ಷೇತ್ರದಲ್ಲಿ ದೇವರು ಎಂದೇ ಪರಿಗಣಿತವಾಗಿರುವ ಸಚಿನ್ ತೆಂಡೂಲ್ಕರ್ ಅವರಿಗೆ ಇಂದು (ಏಪ್ರಿಲ್ 24) ತಮ್ಮ 50ನೇ ಜನ್ಮದಿನದ (Sachin Tendulkar 50th birthday) ಸಂಭ್ರಮ. 1973ರ ಏಪ್ರಿಲ್ 24 ರಂದು ಜನಿಸಿದ ಮಹಾರಾಷ್ಟ್ರದ ಸಚಿನ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಟ್ಟಿದ್ದು 16ನೇ ವಯಸ್ಸಿನಲ್ಲಿ. 24 ವರ್ಷಗಳ ಕಾಲ ಕ್ರಿಕೆಟ್ ಜಗತನ್ನು ಆಳಿದ ಕಿರೀಟವಿಲ್ಲದ ಮಹಾರಾಜರಾದರು ಸಚಿನ್. ಅವರ ಜನ್ಮದಿನಕ್ಕೆ ಹಾಲಿ-ಮಾಜಿ ಕ್ರಿಕೆಟರ್ಸ್, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
16ನೇ ವಯಸ್ಸಿನಲ್ಲೇ ಅಂತರರಾಷ್ಟ್ರೀಯ ಅಂಗಳಕ್ಕೆ ಕಾಲಿಟ್ಟು ಇತಿಹಾಸ ಬರೆದ ಸಚಿನ್ ಈಗಲೂ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳ ಆರಾಧ್ಯ ದೈವವ.
ಸಚಿನ್ ಅವರು 2013ರ ನವೆಂಬರ್ 16 ರಂದು ವಾಂಖೆಡೆ ಮೈದಾನದಲ್ಲಿ ಕೊನೆಯ ಪಂದ್ಯವನ್ನಾಡಿ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಭಾವನಾತ್ಮಕ ವಿದಾಯ ಘೋಷಿಸಿದ್ದರು. ವಿಶೇಷ ಎಂದರೆ ಯಾವ ಸ್ಟೇಡಿಯಂನಲ್ಲಿ ಕೊನೆಯ ಪಂದ್ಯವನ್ನಾಡಿದ್ದರೋ, ಅದೇ ಕ್ರೀಡಾಂಗಣದಲ್ಲಿ ಸಚಿನ್ ಅವರು ಶನಿವಾರ 50ನೇ ವರ್ಷದ ಹುಟ್ಟುಹಬ್ಬವನ್ನು ಮುಂಬೈ ಇಂಡಿಯನ್ಸ್ ಆಟಗಾರರು ಮತ್ತು ಫ್ಯಾನ್ಸ್ ಜೊತೆ ಸೆಲೆಬ್ರೇಟ್ ಮಾಡಿದರು. 24 ವರ್ಷಗಳ ಕ್ರಿಕೆಟ್ ವೃತ್ತಿಜೀವನದಲ್ಲಿ ಲಿಟ್ಲ್ ಮಾಸ್ಟರ್ ಹಲವಾರು ಅವಿಸ್ಮರಣೀಯ ಸನ್ನಿವೇಷಗಳಿಗೆ ಸಾಕ್ಷಿಯಾಗಿದ್ದಾರೆ. ಇದರ ಜೊತಗೆ ಅಪರೂಪದ ದಾಖಲೆಗಳನ್ನು ತನ್ನ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕ್ರಿಕೆಟ್ ವೃತ್ತಿಯಿಂದ ನಿವೃತ್ತಿ ಹೊಂದಿದ ಮೇಲೂ ಕ್ರಿಕೆಟ್ ನಂಟು ಬೆಳೆಸಿಕೊಂಡಿರುವ ಸಚಿನ್ ‘ನಿರಂತರ ಕ್ರಿಕೆಟ್ ಆಡುವುದು ನನ್ನ ಕರ್ತವ್ಯ’ ಎಂಬ ತಮ್ಮ ಮಾತಿಗೆ ಬದ್ಧರಾಗಿದ್ದಾರೆ.
ಅವರ ಅಮೋಘ ಸಾಧನೆ, ದಾಖಲೆಗಳ ಕಿರು ಪರಿಚಯ ಇಲ್ಲಿದೆ:
1989ರ ನವೆಂಬರ್ 15ರ ಪಾಕಿಸ್ತಾನ ವಿರುದ್ಧದ ಟೆಸ್ಟ್ ಮತ್ತು ಅದೇ ವರ್ಷ ಡಿಸೆಂಬರ್ 18ರಂದು ಏಕದಿನ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು. 2013ರಲ್ಲಿ ವೆಸ್ಟ್ ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್ಗೆ ಹಾಗೂ 2012ರಲ್ಲಿ ಪಾಕ್ ವಿರುದ್ಧದ ಪಂದ್ಯದಲ್ಲಿ ಏಕದಿನ ಕ್ರಿಕೆಟ್ಗೆ ವಿದಾಯ ಹೇಳುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಲೋಕಕ್ಕೆ ಗುಡ್ ಬೈ ಹೇಳಿದ್ದರು.
ತೆಂಡೂಲ್ಕರ್ ಭಾರತದ ಪರ 200 ಟೆಸ್ಟ್ ಪಂದ್ಯಗಳು (Tests), 463 ಏಕದಿನ ಪಂದ್ಯಗಳು (ODI) ಮತ್ತು ಏಕೈಕ ಟಿ20 ಪಂದ್ಯ (T20I) ಆಡಿದ್ದಾರೆ. ಕ್ರಿಕೆಟ್ ಜಗತ್ತಿನ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 100 ಶತಕ ಬಾರಿಸಿರುವ ವಿಶ್ವದ ಏಕೈಕ ಕ್ರಿಕೆಟಿಗ ಅವರೊಬ್ಬರೇ! ಸುಮಾರು ಎರಡೂವರೆ ದಶಕಗಳ ಕಾಲ ಮಾಸ್ಟರ್ ಬ್ಲಾಸ್ಟರ್ ಕ್ರಿಕೆಟ್ ಜಗತ್ತನ್ನು ಆಳಿದ್ದಾರೆ. ಅವರ ಹೆಸರಿನಲ್ಲಿ ಗರಿಷ್ಠ ಟೆಸ್ಟ್ ಹಾಗೂ ಏಕದಿನ ರನ್ ಬಾರಿಸಿದ ದಾಖಲೆ ಹೊಂದಿದ್ದಾರೆ ಎಂಗ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
200 ಟೆಸ್ಟ್ ಪಂದ್ಯಗಳನ್ನಾಡಿರುವ ಸಚಿನ್ 15,921 ರನ್, ಬಾರಿಸಿದ್ದಾರೆ. ಇದರಲ್ಲಿ 51 ಶತಕಗಳಿವೆ. 463 ಏಕದಿನ ಪಂದ್ಯಗಳನ್ನಾಡಿದ 49 ಶತಕ ಹಾಗೂ 96 ಅರ್ಧಶತಕ ಸಹಿತ 18,426 ರನ್ ಸಿಡಿಸಿದ್ದಾರೆ. ಸಚಿನ್ ತೆಂಡುಲ್ಕರ್ 6 ಬಾರಿ ಏಕದಿನ ವಿಶ್ವಕಪ್ಗಳಲ್ಲಿ ಭಾರತ ತಂಡದ ಸದಸ್ಯರಾಗಿದ್ದಾರೆ. MS ಧೋನಿ ನೇತೃತ್ವದ ಭಾರತ 2011ರಲ್ಲಿ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಸಚಿನ್ ಕೂಡ ಮಹತ್ವದ ಪಾತ್ರ ವಹಿಸಿದ್ದರು. ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ಮೊದಲ ಬ್ಯಾಟರ್ ಎನ್ನುವ ಶ್ರೇಯ ಕೂಡ ತೆಂಡುಲ್ಕರ್ಗೆ ಸಲ್ಲಲಿದೆ.
ಸಚಿನ್ ದಾಖಲೆಗಳ ಸರದಾರ. ಅಸಾಧ್ಯವಾದದ್ದನ್ನೂ ನೀರು ಕುಡಿದಷ್ಟೇ ಸುಲಭವಾಗಿ ಸಾಧಿಸುತ್ತಿದ್ದ ಛಲಗಾರ. ಅವರ ಹೆಸರಿನಲ್ಲಿ ದಾಖಲೆಗಳ ಸರಮಾಲೆಯೇ ಇದೆ. 24 ವರ್ಷಗಳ ಸುದೀರ್ಘ ಕ್ರಿಕೆಟ್ ಕರಿಯರ್ನಲ್ಲಿ ಸಚಿನ್ ಒಟ್ಟಾರೆ ಆಡಿದ 664 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 34,357 ರನ್ ಸಿಡಿಸಿದ್ದಾರೆ. ಬೌಲಿಂಗ್‌ನಲ್ಲೂ ಮಿಂಚಿದ್ದು, 201 ವಿಕೆಟ್ ಪಡೆದಿದ್ದಾರೆ. ಅಲ್ಲದೇ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ಪರ 2,334 ರನ್ ಬಾರಿಸಿದ್ದಾರೆ.
ಟೆಸ್ಟ್ (15,921) ಮತ್ತು ಏಕದಿನ ಕ್ರಿಕೆಟ್ನಲ್ಲಿ (18,426) ಅತಿ ಹೆಚ್ಚು ರನ್, ಟೆಸ್ಟ್ (50) ಮತ್ತು ಏಕದಿನ (49) ಕ್ರಿಕೆಟ್ನಲ್ಲಿ ಹೆಚ್ಚು ಶತಕಗಳು, ಅತಿ ಹೆಚ್ಚು ಟೆಸ್ಟ್ (200) ಪಂದ್ಯಗಳು, ಅತಿ ಹೆಚ್ಚು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳು (463), ಅತಿ ಹೆಚ್ಚು ಪಂದ್ಯಶ್ರೇಷ್ಠ (62) ಪ್ರಶಸ್ತಿ, ಹೆಚ್ಚು ಸರಣಿ ಶ್ರೇಷ್ಠ (15) ಪ್ರಶಸ್ತಿ, ಏಕದಿನ ಪಂದ್ಯದಲ್ಲಿ 200 ರನ್ ಸಿಡಿಸಿದ ಮೊದಲ ಆಟಗಾರ, ವಿಶ್ವಕಪ್ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ರನ್, ಟೆಸ್ಟ್ ಪಂದ್ಯಗಳಲ್ಲಿ 50 ಶತಕ ಗಳಿಸಿದ ಮೊದಲ ಆಟಗಾರ.
ಟೆಸ್ಟ್‌ನಲ್ಲಿ ವೇಗವಾಗಿ 10,000 ರನ್ (195 ಇನ್ನಿಂಗ್ಸ್) 14,000 ರನ್ ( 279 ಇನ್ನಿಂಗ್ಸ್) 15,000 ರನ್ (300 ಇನಿಂಗ್ಸ್) ಪೂರೈಸಿದ್ದಾರೆ. ಹೆಚ್ಚು ಬಾರಿ 90ಕ್ಕಿಂತ ಹೆಚ್ಚು ರನ್ ಬಾರಿಸಿದ ಆಟಗಾರ ಎಂಬ ದಾಖಲೆ ಸಚಿನ್ ಹೆಸರಿನಲ್ಲಿದೆ. ಒಂದೇ ಏಕದಿನ ವಿಶ್ವಕಪ್‌ನಲ್ಲಿ (2003ರಲ್ಲಿ) ಹೆಚ್ಚು ರನ್ ಸಿಡಿಸಿದ ಸಾಧನೆಯೂ ಅವರ ಹೆಸರಲ್ಲಿದೆ. 11 ಪಂದ್ಯಗಳಿಂದ ಸರಾಸರಿಯಲ್ಲಿ 673 ರನ್ ಗಳಿಸಿದ್ದರು. ಐಸಿಸಿ ವಿಶ್ವಕಪ್‌ನಲ್ಲಿ ಹೆಚ್ಚು ರನ್ ಗಳಿಸಿದ್ದು, 45 ಪಂದ್ಯಗಳಿಂದ 56.95 ಸರಾಸರಿಯಲ್ಲಿ 2278 ರನ್ ಬಾರಿಸಿದ್ದಾರೆ.
ಸಚಿನ್ ಅವರ ಸಾಧನೆಗೆ ಪದ್ಮವಿಭೂಷಣ ಪ್ರಶಸ್ತಿ, ಭಾರತ ರತ್ನ, ರಾಜೀವ್ ಗಾಂಧಿ ಖೇಲ್ ರತ್ನ, ಪದ್ಮಶ್ರೀ ಪ್ರಶಸ್ತಿ, ಲಾರೆಸ್ ವಿಶ್ವ ಕ್ರೀಡಾ ಪ್ರಶಸ್ತಿ 2020 ಸೇರಿದಂತೆ ಅನೇಕ ಪ್ರಶಸ್ತಿಗಳು ದೊರಕಿವೆ.