ಇಂದು ಜಮ್ಮು-ಕಾಶ್ಮೀರ, ಹರಿಯಾಣ ಚುನಾವಣಾ ಫಲಿತಾಂಶ; ಮತ ಎಣಿಕೆ ಶುರು
ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಹಾಗೂ ಹರಿಯಾಣ ಚುನಾವಣಾ ಫಲಿತಾಂಶ (Election Results Haryana 2024) ಮಂಗಳವಾರ (ಅ.8) ಹೊರಬೀಳಲಿದೆ. 10 ವರ್ಷಗಳ ಬಳಿಕ, ಆರ್ಟಿಕಲ್ 370 ರದ್ದಾದ ಬಳಿಕ ಕಣಿವೆನಾಡಲ್ಲಿ ನಡೆದ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲೋದು ಯಾರು? ಬಿಜೆಪಿನಾ? ಎನ್‌ಸಿ-ಕಾಂಗ್ರೆಸ್ (Congress-NC) ಮೈತ್ರಿಕೂಟನಾ? ಅಥ್ವಾ ಪಿಡಿಪಿನಾ ಎಂಬ ಪ್ರಶ್ನೆಗೆ ಇಂದು ನಿಖರ ಉತ್ತರ ಸಿಗಲಿದೆ.
ಜಮ್ಮು ಮತ್ತು ಕಾಶ್ಮೀರ, ಹರಿಯಾಣದಲ್ಲಿ 90 ಕ್ಷೇತ್ರಗಳಿಗೆ ನಡೆದ ಚುನಾವಣೆಯ ಫಲಿತಾಂಶ ಇಂದು ಹೊರ ಬೀಳಲಿದೆ. ಮತ ಎಣಿಕೆ ಹಿನ್ನೆಲೆ ಚುನಾವಣೆ ಕೇಂದ್ರಗಳ ಸುತ್ತಲೂ ಬಿಗಿ ಭದ್ರತೆ ನಿಯೋಜಿಸಲಾಗಿದೆ. ಇಂದು ಜಮ್ಮು- ಕಾಶ್ಮೀರದ 28 ಮತ ಎಣಿಕೆ ಕೇಂದ್ರಗಳಲ್ಲಿ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಶುರುವಾಗಲಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ (Jammu And Kashmir) ಯಾವುದೇ ಪಕ್ಷಕ್ಕೆ ಬಹುಮತ ಬರಲ್ಲ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳಿದ್ರೂ, ಇಂಡಿಯಾ ಮೈತ್ರಿ ಕೂಟ ಮತ್ತು ಬಿಜೆಪಿ ಮಾತ್ರ ತಮ್ಮದೇ ಅಧಿಕಾರ ಎಂಬ ವಿಶ್ವಾಸದಲ್ಲಿವೆ. ಮತ್ತೊಂದು ಕಡೆ, ಇಂಡಿಯಾ ಕೂಟ, ಮೆಹಬೂಬಾ ಮುಫ್ತಿ ಬೆಂಬಲದ ನಿರೀಕ್ಷೆಯಲ್ಲಿದೆ.
ಇನ್ನೂ ಹರಿಯಾಣ ಫಲಿತಾಂಶವೂ ಸಾಕಷ್ಟು ಕುತೂಹಲ ಕೆರಳಿಸಿದೆ. 10 ವರ್ಷದಿಂದ ಆಡಳಿತದಲ್ಲಿರುವ ಬಿಜೆಪಿ ಮತ್ತೆ ಅಧಿಕಾರ ಉಳಿಸಿಕೊಳ್ಳುತ್ತಾ? ವಿಪಕ್ಷ ಕಾಂಗ್ರೆಸ್ ಗೆದ್ದು ಆಡಳಿತದ ಚುಕ್ಕಾಣಿ ಹಿಡಿಯುತ್ತಾ ಎಂಬುದು ಕುತೂಹಲಕಾರಿ ಅಂಶ. ಇದ್ರ ಮಧ್ಯೆ ಎಕ್ಸಿಟ್ ಪೋಲ್‌ಗಳೆಲ್ಲಾ ಕಾಂಗ್ರೆಸ್ ಗೆಲ್ಲುತ್ತೆ ಎಂದು ಭವಿಷ್ಯ ನುಡಿದಿದ್ದು, ಇದು ನಿಜವಾಗುತ್ತಾ ಅನ್ನೋದು ಗೊತ್ತಾಗಲಿದೆ.
ಚುನಾವಣೆಯಲ್ಲಿ ಪ್ರಮುಖ ಪಕ್ಷಗಳು ಬಿಜೆಪಿ, ಕಾಂಗ್ರೆಸ್, ಆಮ್ ಆದ್ಮಿ ಪಕ್ಷ (ಎಎಪಿ), ಭಾರತೀಯ ರಾಷ್ಟ್ರೀಯ ಲೋಕದಳ (ಐಎನ್‌ಎಲ್‌ಡಿ)-ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮತ್ತು ಜನನಾಯಕ ಜನತಾ ಪಕ್ಷ (ಜೆಜೆಪಿ)-ಆಜಾದ್ ಸಮಾಜ ಪಕ್ಷ (ಎಎಸ್‌ಪಿ). ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಡುವ ಸಾಧ್ಯತೆಯಿದ್ದು, ಜಮ್ಮು-ಕಾಶ್ಮೀರದಲ್ಲಿ ಹರ್ಯಾಣದ ಜತೆಗೆ ಮತದಾನ ನಡೆದಿದ್ದು, ಕಾಂಗ್ರೆಸ್-ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ.
ಹರ್ಯಾಣದಲ್ಲಿ 67.90% ಮತದಾನವಾಗಿದೆ, 90 ವಿಧಾನಸಭಾ ಸ್ಥಾನಗಳು, ಒಟ್ಟು 1,031 ಅಭ್ಯರ್ಥಿಗಳು, 464 ಸ್ವತಂತ್ರ ಅಭ್ಯರ್ಥಿಗಳು, 101 ಮಹಿಳೆಯರು, ಹಲವು ಎಕ್ಸಿಟ್ ಪೋಲ್ ಗಳು ಕಾಂಗ್ರೆಸ್ ಗೆಲುವಿನ ಮುನ್ಸೂಚನೆ ನೀಡಿವೆ.
ಜಮ್ಮು ಕಾಶ್ಮೀರ 90 ವಿಧಾನಸಭಾ ಸ್ಥಾನಗಳಿಗೆ ಮೂರು ಹಂತಗಳಲ್ಲಿ ಮತದಾನವಾಗಿದೆ, 873 ಅಭ್ಯರ್ಥಿಗಳ ಭವಿಷ್ಯ ಅತಂತ್ರವಾಗಿದೆ, 2019 ರಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ, ಕೇಂದ್ರಾಡಳಿತ ಪ್ರದೇಶದಲ್ಲಿ ಮೊದಲ ಚುನಾಯಿತ ಸರ್ಕಾರ ರಚನೆಗೆ ದಾರಿ ಸುಗಮವಾಗಲಿದೆ.
ಹಿಂದಿನ ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿದ ಐದು ವರ್ಷಗಳ ನಂತರ ಈ ಚುನಾವಣೆ ನಡೆಯುತ್ತಿದೆ.
ಮುಖ ಪಕ್ಷಗಳಾದ ಕಾಂಗ್ರೆಸ್-ನ್ಯಾಷನಲ್ ಕಾನ್ಫರೆನ್ಸ್ (NC) ಮೈತ್ರಿ, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (PDP) ಮತ್ತು ಭಾರತೀಯ ಜನತಾ ಪಕ್ಷ (BJP). ಜಮ್ಮು ಮತ್ತು ಕಾಶ್ಮೀರದಲ್ಲಿ ಮೂರು ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆದಿದೆ. ಮೊದಲ ಹಂತದಲ್ಲಿ ಸೆಪ್ಟೆಂಬರ್ 18 ರಂದು 24 ಸ್ಥಾನಗಳಿಗೆ ಮತದಾನ ನಡೆದಿತ್ತು. ಎರಡನೇ ಹಂತದಲ್ಲಿ ಸೆಪ್ಟೆಂಬರ್ 25 ರಂದು 26 ಸ್ಥಾನಗಳಿಗೆ ಮತದಾನ ನಡೆಯಿತು. ಮೂರನೇ ಹಂತದಲ್ಲಿ ಅಕ್ಟೋಬರ್ 1 ರಂದು 40 ಸ್ಥಾನಗಳಿಗೆ ಮತದಾನ ನಡೆದಿತ್ತು. ಇಂದು ಈ 90 ಕ್ಷೇತ್ರಗಳ ಮತ ಎಣಿಕೆ ನಂತರ ಫಲಿತಾಂಶ ಪ್ರಕಟವಾಗಲಿದೆ.
ಜಮ್ಮು ಮತ್ತು ಕಾಶ್ಮೀರದ 90 ವಿಧಾನಸಭಾ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 873 ಅಭ್ಯರ್ಥಿಗಳು ಕಣದಲ್ಲಿದ್ದರು. ಇಂದು ಮತ ಎಣಿಕೆ ಬಳಿಕ ಫಲಿತಾಂಶ ಬಂದ ತಕ್ಷಣ ಅವರ ಭವಿಷ್ಯ ನಿರ್ಧಾರವಾಗಲಿದೆ. ಜಮ್ಮು ಮತ್ತು ಕಾಶ್ಮೀರದ 20 ಜಿಲ್ಲೆಗಳಲ್ಲಿ ಮತ ಎಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ 700 ವೀಕ್ಷಕರನ್ನು ಸಹ ನಿಯೋಜಿಸಲಾಗಿದೆ. ಇದರೊಂದಿಗೆ 10 ಸಾವಿರಕ್ಕೂ ಹೆಚ್ಚು ಹೆಚ್ಚುವರಿ ಭದ್ರತಾ ಪಡೆಗಳನ್ನು ಕೂಡ ಭದ್ರತೆಗೆ ನಿಯೋಜಿಸಲಾಗುವುದು.
ಭಾರೀ ಕುತೂಹಲ ಮೂಡಿಸಿರುವ ಜಮ್ಮು ಮತ್ತು ಕಾಶ್ಮೀರ ಹಾಗೂ ಹರ್ಯಾಣ ವಿಧಾನಸಭೆಯ ಚುನಾವಣಾ ಮತ ಎಣಿಕೆ ಇಂದು ನಡೆಯಲಿದ್ದು, ಮಧ್ಯಾಹ್ನದ ವೇಳೆ ಫಲಿತಾಂಶ ಕುರಿತು ಸ್ಪಷ್ಟ ಚಿತ್ರಣಗಳು ಲಭ್ಯವಾಗುವ ನಿರೀಕ್ಷೆಗಳಿವೆ.