ರಾಜ್ಯ ಬಿಜೆಪಿಯಲ್ಲಿ ಬಿಜೆಪಿ ಕಟ್ಟಾಳು ಕೆಎಸ್ ಈಶ್ವರಪ್ಪ(K.S Eshwarappa) ಬಿರುಗಾಳಿ ಎಬ್ಬಿಸಿದ್ದಾರೆ. ಪುತ್ರ ಕಾಂತೇಶ್ಗೆ ಹಾವೇರಿ ಟಿಕೆಟ್ ಫಿಕ್ಸ್ ಆಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಟಿಕೆಟ್ ಕೈತಪ್ಪಿತ್ತು. ಇದರಿಂದ ಈಶ್ವರಪ್ಪ, ಬಿಎಸ್ ಯಡಿಯೂರಪ್ಪ(BS Yediyurappa) ಮತ್ತು ರಾಜ್ಯಾಧ್ಯಕ್ಷ ವಿಜಯೇಂದ್ರ ಮೇಲೆ ಕೆಂಡಾಮಂಡಲವಾಗಿದ್ದಾರೆ. ಇದೀಗ ಬದಲಾದ ಪರಿಸ್ಥಿತಿಯಲ್ಲಿ ಪಕ್ಷವೇ ತಾಯಿ ಎನ್ನುತ್ತಿದ್ದ ಈಶ್ವರಪ್ಪ ಅವರು ಅನಿವಾರ್ಯವಾಗಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಧುಮುಕಿದ್ದಾರೆ. ಈ ನಡುವೆ ಈಶ್ವರಪ್ಪ ಅವರಿಗೆ ಚುನಾವಣೆ ಚಿಹ್ನೆ ಕಬ್ಬಿನ ಜೊತೆಗಿನ ರೈತ ಸಿಕ್ಕಿದೆ.
ಚುನಾವಣೆ ಮುಗಿಯುತ್ತಿದ್ದಂತೆ ಮತ್ತೆ ವಾಪಸ್ ಬಿಜೆಪಿಗೆ ಬರುತ್ತೇನೆ; ಕೆಎಸ್ ಈಶ್ವರಪ್ಪ
Twitter
Facebook
LinkedIn
WhatsApp
ಇನ್ನು ನಾಮಪತ್ರ ವಾಪಸ್ ಪಡೆಯುತ್ತೇನೆ ಎನ್ನುವರಿಗೆ ಈಶ್ವರಪ್ಪ ತಮ್ಮ ಧಾಟಿಯಲ್ಲೇ ತಿರುಗೇಟು ಕೊಟ್ಟಿದ್ದಾರೆ. ಬಿಜೆಪಿ ಶುದ್ಧೀಕರಣ ಮತ್ತು ಕುಟುಂಬ ರಾಜಕಾರಣದ ವಿರುದ್ಧ ಈಶ್ವರಪ್ಪ ಈಗ ತಿರುಗಿಬಿದ್ದಿದ್ದಾರೆ. ಬಿಎಸ್ವೈ ಪುತ್ರ ರಾಘವೇಂದ್ರನ ಸೋಲಿಸಲು ಈಶ್ವರಪ್ಪ ಪಣ ತೊಟ್ಟಿದ್ದಾರೆ. ಅತ್ತ ಮತ್ತೊಬ್ಬ ಪುತ್ರ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಈಶ್ವರಪ್ಪ ಗುಡುಗಿದ್ದು, ರಾಜ್ಯಾಧ್ಯಕ್ಷ ಕುರ್ಚಿಯನ್ನ ಚುನಾವಣೆ ಬಳಿಕ ವಿಜಯೇಂದ್ರ ಕಳೆದುಕೊಳ್ಳಲಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಚುನಾವಣೆ ಮುಗಿಯುತ್ತಿದ್ದಂತೆ ಮತ್ತೆ ವಾಪಸ್ ಬಿಜೆಪಿಗೆ ಬರುತ್ತೇನೆಂದ ಈಶ್ವರಪ್ಪ
ಈಶ್ವರಪ್ಪ ಪಕ್ಷೇತರ ಅಭ್ಯರ್ಥಿ ಆಗಿ ನಿಲ್ಲಲು ಬಿಎಸ್ವೈ ಕುಟುಂಬ ಕಾರಣ ಎನ್ನುವ ಸಿಟ್ಟು ದಿನೇ ದಿನೇ ಈಶ್ವರಪ್ಪರನ್ನ ಕೆರಳಿಸುತ್ತಿದೆ. ನಾನೇ ಓರಿಜನಲ್ ಬಿಜೆಪಿ, ಬಿಎಸ್ವೈ ಡುಪ್ಲೀಕೇಟ್ ಬಿಜೆಪಿ ಎಂದು ಈಶ್ವರಪ್ಪ ವ್ಯಂಗ್ಯ ಮಾಡಿದ್ದಾರೆ. ಕೆಜೆಪಿ ಕಟ್ಟಿ ಯಡಿಯೂರಪ್ಪ ಅವರು ಪಕ್ಷ ಬಿಟ್ಟು ಹೋಗಿದ್ದರು. ಟಿಪ್ಪು ಜಯಂತಿ ಮಾಡಿ ಟೋಪಿ ಹಾಕಿಕೊಂಡಿದ್ದರು. ನಾನು ಪಕ್ಷ ಅಂದ್ರೆ ತಾಯಿ ಇದ್ದಂಗೆ. ಹಾಗಾಗಿ ಈ ಚುನಾವಣೆ ಮುಗಿಯುತ್ತಿದ್ದಂತೆ ಮತ್ತೆ ವಾಪಸ್ ಬಿಜೆಪಿಗೆ ಬರುತ್ತೇನೆಂದು ಈಶ್ವರಪ್ಪ ವಿಶ್ವಾಸ ಹೊರಹಾಕಿದ್ದಾರೆ.
ಈಶ್ವರಪ್ಪ ಪಕ್ಷದಿಂದ ಉಚ್ಚಾಟನೆ
ಇನ್ನು ನಿನ್ನೆ ನಾಮಪತ್ರ ಕಡೆ ದಿನವಾಗಿದ್ದು, ಈಶ್ವರಪ್ಪ ಅವರು ನಾಮಪತ್ರ ವಾಪಸ್ ಪಡೆಯಲಿಲ್ಲ. ಇದರಿಂದ ಕೋಪಗೊಂಡ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಈಶ್ವರಪ್ಪ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಇಂದು ಹನುಮ ಜಯಂತಿ ಹಿನ್ನಲೆಯಲ್ಲಿ ಯಡಿಯೂರಪ್ಪ ಕುಟುಂಬವು ತಮ್ಮ ಆರಾಧ್ಯ ದೈವ ಹುಚ್ಚರಾಯಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ರಥೋತ್ಸವದಲ್ಲಿ ಬಿಎಸ್ ವೈ ಕುಟುಂಬಸ್ಥರು ಭಾಗವಹಿಸಿದ್ದರು. ಜೊತೆಗೆ ಶಿಕಾರಿಪುರದಲ್ಲಿ ವಿಜಯೇಂದ್ರ ಅವರ ಸಮ್ಮುಖದಲ್ಲಿ ಜಿಲ್ಲೆಯ ವಿವಿಧ ತಾಲೂಕಿನ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದವರು ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
ಇದೇ ವೇಳೆ ಈಶ್ವರಪ್ಪ ಉಚ್ಛಾಟನೆಯಲ್ಲಿ ನನ್ನದೇನು ಪಾತ್ರವಿಲ್ಲವೆಂದು ಬಿಎಸ್ವೈ ಸೈಲೆಂಟ್ ಆದರು. ತಮ್ಮ ವಿರುದ್ಧ ನಿಂತಿರುವ ಈಶ್ವರಪ್ಪ ಅವರ ಬಗ್ಗೆ ರಾಘವೇಂದ್ರ ಅವರು ತೀಕ್ಷಣವಾಗಿ ಪ್ರತಿಕ್ರಿಯಿಸಿದ್ದಾರೆ. ಇನ್ನು ಶಿವಮೊಗ್ಗ ಲೋಕಸಭೆ ಕ್ಷೇತ್ರಕ್ಕೆ ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ. ಈ ಹಿನ್ನಲೆಯಲ್ಲಿ ಚುನಾವಣೆ ಕಾವು ಏರತೊಡಗಿದೆ. ಈಶ್ವರಪ್ಪ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವ ಮೂಲಕ ಕ್ಷೇತ್ರದ ಚಿತ್ರಣವೇ ಬದಲಾಗಿದೆ. ಈಶ್ವರಪ್ಪ ಎದುರು ಬಿಎಸ್ ವೈ ಪುತ್ರ ರಾಘವೇಂದ್ರ ಗೆಲ್ಲುವುದು ಈಗ ಬಹುದೊಡ್ಡ ಸವಾಲು ಆಗಿದೆ.