ಚಿಕ್ಕಮಗಳೂರು : ದೇವಸ್ಥಾನದ ಹುಂಡಿಗೆ ಹಾಕಲು ತೆಗೆದುಕೊಂಡು ಹೋಗುತ್ತಿದ್ದ 2.50 ಸಾವಿರ ಹಣ ಸೀಜ್
ಚಿಕ್ಕಮಗಳೂರು: ಧರ್ಮಸ್ಥಳ (Dharmasthala) ಮಂಜುನಾಥ ಸ್ವಾಮಿ ಹಾಗೂ ಕಟೀಲು ದುರ್ಗಾ ಪರಮೇಶ್ವರಿ (Kateelu Durga Parameshwari) ದೇಗುಲದ ಹುಂಡಿಗೆ ಎಂದು ತೆಗೆದುಕೊಂಡು ಹೋಗುತ್ತಿದ್ದ ಸುಮಾರು 2 ಲಕ್ಷದ 50 ಸಾವಿರ ಹಣವನ್ನ ಚುನಾವಣಾ ಅಧಿಕಾರಿಗಳು ಸೀಜ್ ಮಾಡಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಚೆಕ್‍ಪೋಸ್ಟ್ ನಲ್ಲಿ ನಡೆದಿದೆ.
ಚುನಾವಣಾ ನೀತಿ ಸಂಹಿತೆ (Code Of Conduct) ಹಿನ್ನೆಲೆ ಜಿಲ್ಲೆಯಲ್ಲಿ ಅಕ್ಕಪಕ್ಕದ ಜಿಲ್ಲೆಯ ಗಡಿ ಹಂಚಿಕೊಂಡಿರುವ ವಿವಿಧ ಮಾರ್ಗದಲ್ಲಿ ಒಟ್ಟು 18 ಚೆಕ್‍ಪೋಸ್ಟ್‍ಗಳನ್ನ ನಿರ್ಮಿಸಲಾಗಿದೆ. ಅದರಲ್ಲಿ ಜಿಲ್ಲೆಯ ಮೂಡಿಗೆರೆಯಿಂದ ದಕ್ಷಿಣಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ (Charmadi Ghat) ಸಮೀಪದ ಕೊಟ್ಟಿಗೆಹಾರದ ಬಳಿಯೂ ಚೆಕ್‍ಪೊಸ್ಟ್ ನಿರ್ಮಿಸಲಾಗಿದೆ.
ಉಡುಪಿ-ಮಂಗಳೂರು (Udupi- Mangaluru) ಹೋಗುವವರು ಹೆಚ್ಚಾಗಿ ಈ ಮಾರ್ಗವನ್ನ ಬಳಸುತ್ತಾರೆ. ಆದರೆ ಇದೇ ಮಾರ್ಗದಲ್ಲಿ ತುಮಕೂರು ಜಿಲ್ಲೆ ಪಾವಗಡ ಮೂಲದ ವೈದ್ಯ ಧರ್ಮಸ್ಥಳ ಮಂಜುನಾಥ ಸ್ವಾಮಿ ಹಾಗೂ ಕಟೀಲು ದುರ್ಗಾಪರಮೇಶ್ವರಿ ದೇಗುಲದ ಹುಂಡಿಗೆಂದು ತೆಗೆದುಕೊಂಡು ಹೋಗುತ್ತಿದ್ದ ಹಣವನ್ನ ವಾಹನವನ್ನ ತಪಾಸಣೆ ವೇಳೆ ಸಿಕ್ಕಿದ ಎರಡೂವರೆ ಲಕ್ಷ ಹಣವನ್ನ ಸೀಜ್ ಮಾಡಿದ್ದಾರೆ.
ಚುನಾವಣೆ ನೀತಿ ಸಂಹಿತಿ ಜಾರಿಯಲ್ಲಿರುವ ಕಾರಣ ಓರ್ವ ವ್ಯಕ್ತಿ ಏಕಕಾಲಕ್ಕೆ 50 ಸಾವಿರ ಹಣವನ್ನ ಮಾತ್ರ ತೆಗೆದುಕೊಂಡು ಹೋಗಬಹುದು. ವಾಹನ ಅಂತ ಬಂದಾಗಲೂ ಒಂದು ವಾಹನಕ್ಕೆ 50 ಸಾವಿರ ಅಷ್ಟೆ ಅವಕಾಶವಿರೋದು. ಕಾರಿನಲ್ಲಿ ಐದು ಜನ ಇದ್ದೇವೆಂದು ಎಲ್ಲರೂ 50 ಸಾವಿರ ಇಡುವಂತಿಲ್ಲ. ಹಾಗಾಗಿ ಕಾರಿನಲ್ಲಿ ಎರಡೂವರೆ ಲಕ್ಷ ಹಣ ಸಿಕ್ಕಿದ ಹಿನ್ನೆಲೆ ಸೂಕ್ತ ದಾಖಲೆ ಇಲ್ಲದ ಕಾರಣ ಹಣವನ್ನ ಪೊಲೀಸರು ಸೀಜ್ ಮಾಡಿದ್ದಾರೆ.
ಗುರುವಾರ ಕೂಡ ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಪಡೆದು ಹೊರನಾಡು ಅನ್ನಪೂರ್ಣೇಶ್ವರಿ ದರ್ಶನಕ್ಕೆ ಹೋಗುತ್ತಿದ್ದ ರಾಮನಗರ ಮೂಲದ ಭಕ್ತಾದಿಗಳ ಬಳಿಯೂ ಒಂದು ಲಕ್ಷ ಹಣವಿತ್ತು. ಅದನ್ನು ಕೂಡ ಪೊಲೀಸರು ಇದೇ ಕೊಟ್ಟಿಗೆಹಾರ ಚೆಕ್‍ಪೋಸ್ಟ್‍ನಲ್ಲಿ ಸೂಕ್ತ ದಾಖಲೆ ಇಲ್ಲದ ಕಾರಣ ಸೀಜ್ ಮಾಡಿದ್ದರು.