ಗ್ರಾಮೀಣ ಕ್ರೀಡೆಯಲ್ಲಿ ಟ್ರ್ಯಾಕ್ಟರ್ ಹಿಮ್ಮುಖವಾಗಿ ಚಲಾಯಿಸಿ ಬರೋಬ್ಬರಿ ಒಂದು ಲಕ್ಷ ಬಹುಮಾನ ಗೆದ್ದುಕೊಂಡ ಸಾಹಸಿ!
ಯಾದಗಿರಿ: ಇಲ್ಲೊಬ್ಬ ಅಪರೂಪದ ಸಾಹಸಿ 1 ಗಂಟೆ 43 ನಿಮಿಷಗಳಲ್ಲಿ ಬರೋಬ್ಬರಿ 24 ಕಿಲೋ ಮೀಟರ್ ದೂರ ಹಿಮ್ಮುಖವಾಗಿ ಟ್ರ್ಯಾಕ್ಟರ್ ಚಾಲನೆ 1 ಲಕ್ಷದ 45 ಸಾವಿರ ರೂಪಾಯಿ ಭರ್ಜರಿ ಮೊತ್ತದ ಬಹುಮಾನವನ್ನು ಬಾಚಿಕೊಂಡಿದ್ದಾನೆ.
ಹೌದು, ಯಾದಗಿರಿ ಜಿಲ್ಲೆಯ ದೋರನಹಳ್ಳಿ ಗ್ರಾಮದ ನಿವಾಸಿ ಬಸಲಿಂಗಪ್ಪ ಹುರಸಗುಂಡಗಿ ಈ ಅಪರೂಪದ ಸಾಧನೆ ಮಾಡಿ ಭೇಷ್ ಎನಿಸಿಕೊಂಡಿದ್ದಾನೆ. ನಾಗರ ಪಂಚಮಿ ಅಂಗವಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿಶೇಷವಾಗಿ ವಿಭಿನ್ನ ಸಾಹಸ ಸ್ಪರ್ಧೆಗಳು ನಡೆಯುತ್ತವೆ. ಆದರೆ, ಇದೇ ಮೊದಲ ಬಾರಿಗೆ ಯಾದಗಿರಿ ಜಿಲ್ಲೆಯಲ್ಲಿ ಟ್ರ್ಯಾಕ್ಟರ್ ಹಿಮ್ಮುಖವಾಗಿ ಬಹುದೂರ ಚಲಾಯಿಸುವ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು.
ಬಸಲಿಂಗಪ್ಪ ಹುರಸಗುಂಡಗಿ, ವಿಜಯಪುರ-ಹೈದರಾಬಾದ್ ಹೆದ್ದಾರಿಯಲ್ಲಿ ಬರುವ ದೋರನಹಳ್ಳಿ ಗ್ರಾಮದಿಂದ ಯಾದಗಿರಿ ಹೊರವಲಯದ ವಡಗೇರಿ ಕ್ರಾಸ್ವರೆಗೆ ಟ್ರ್ಯಾಕ್ಟರ್ ಹಿಮ್ಮುಖವಾಗಿ ಚಲಾಯಿಸಿಕೊಂಡು ಬಂದು 1 ಗಂಟೆ 43 ನಿಮಿಷದಲ್ಲಿ ತಲುಪಿದ್ದಾನೆ. ಇನ್ನೋರ್ವ ಪ್ರತಿಸ್ಪರ್ಧಿ ಪರಶುರಾಮ ಟೋಕಾಪುರ ಎಂಬುವವರು ಟ್ರ್ಯಾಕ್ಟರ್ ಹಿಮ್ಮುಖವಾಗಿ ಚಲಾಯಿಸಿಕೊಂಡು ಬಂದರೂ ಸಹ 1 ತಾಸು 45 ನಿಮಿಷದಲ್ಲಿ ದೂರವನ್ನು ಕ್ರಮಿಸಿದರು. ಆದರೆ ಅಂತಿಮವಾಗಿ 2 ನಿಮಿಷ ಮೊದಲು ತಲುಪಿದ ಬಸಲಿಂಗಪ್ಪ ಹುರಸಗುಂಡಿಗಿ ಅವರನ್ನು ವಿಜೇತರನ್ನಾಗಿ ಘೋಷಿಸಲಾಯಿತು.
ಸುಮಾರು 24 ಕಿ.ಮೀ. ದೂರವನ್ನು ತಲುಪಿದಾಗ ಅಲ್ಲಿನ ಗ್ರಾಮಸ್ಥರು ಶಿಳ್ಳೆ, ಕೇಕೆ ಹಾಕಿ ವಿಜೇತ ಬಸಲಿಂಗಪ್ಪನನ್ನ ಹೊತ್ತು ಸಂಭ್ರಮಾಚರಣೆ ಮಾಡಿದ್ರು. ದೋರನಹಳ್ಳಿ ಗ್ರಾಮಸ್ಥರಿಂದ ಸಂಗ್ರಹಿಸಿದ್ದ ಒಟ್ಟು 1 ಲಕ್ಷ 45 ಸಾವಿರ ರೂಪಾಯಿ ಹಣವನ್ನು ಬಹುಮಾನವಾಗಿ ಟ್ರ್ಯಾಕ್ಟರ್ ಹಿಮ್ಮುಖವಾಗಿ ಚಲಾಯಿಸಿ ವಿಜೇತನಾದ ಬಸಲಿಂಗಪ್ಪ ಹುರಸಗುಂಡಿಗಿ ನೀಡಲಾಯಿತು.
ಗ್ರಾಮೀಣ ಸೊಗಡಿನ ಕ್ರೀಡೆಗಳು ಮರೆಯಾಗುತ್ತಿರುವ ಇತ್ತೀಚಿನ ದಿನಗಳಲ್ಲಿ ವಿಶೇಷ ಸ್ಪರ್ಧೆ ಆಯೋಜಿಸಿದ್ದು ವಿಶೇಷವಾಗಿತ್ತು. ಸ್ಥಳೀಯರು ಸಾಕಷ್ಟು ಸಂಭ್ರಮಿಸಿದರು