ಗೋ-ಕಾರ್ಟ್ ಗೆ ಕೂದಲು ಸಿಲುಕಿ ಭಾರತ ಮೂಲದ ಬಾಲಕಿಗೆ ಗಂಭೀರ ಗಾಯ
ಜೊಹಾನ್ಸ್‌ಬರ್ಗ್, ಜ 05 : ಮನರಂಜನಾ ಕೇಂದ್ರವೊಂದರ ಗೋ-ಕಾರ್ಟ್ ನಲ್ಲಿ ಕೂದಲು ಸಿಕ್ಕಿ ಹಾಕಿಕೊಂಡ ಪರಿಣಾಮ ಭಾರತೀಯ ಮೂಲದ ಬಾಲಕಿ ಗಂಭೀರ ಗಾಯಗೊಂಡ ಘಟನೆ ಜೋಹಾನ್ಸ್ ಬರ್ಗ್ ನಲ್ಲಿ ನಡೆದಿದೆ.
ಕ್ರಿಸ್ಟನ್ ಗೋವೆಂದರ್ (15) ಗಾಯಗೊಂಡ ಬಾಲಕಿ. ಸದ್ಯ ಅವರು ಡರ್ಬನ್ ನ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಬುಧವಾರವೇ ಈ ಘಟನೆ ನಡೆದಿದ್ದು, ಆಕೆಯ ಸೊಂಟದಿಂದ ಯಾವುದೇ ಚಲನೆ ಇಲ್ಲ ಎಂಬುದಾಗಿ ವೈದ್ಯರು ತಿಳಿಸಿರುವುದಾಗಿ ತಂದೆ ವೆರ್ನಾನ್ ಗೋವೆಂದರ್ ಹೇಳಿದ್ದಾರೆ ಎಂದು ವರದಿಯಾಗಿದೆ.
ಹೆಲ್ಮೆಟ್ ಧರಿಸಿ ಮನರಂಜನಾ ಆಟದಲ್ಲಿ ಭಾಗವಹಿಸಬೇಕೆಂಬ ನಿಯಮವನ್ನು ಮಗಳು ಪಾಲಿಸಿದ್ದಾಳೆ. ಪೋನಿಟೇಲ್ ನಲ್ಲಿ ಆಕೆಯ ಕೂದಲನ್ನು ಕಟ್ಟಲಾಗಿತ್ತು. ಹಾಗಿದ್ದಾಗ್ಯೂ ಘಟನೆ ನಡೆದಿದೆ ಎಂದವರು ಅಳಲು ತೋಡಿಕೊಂಡಿದ್ದಾರೆ.
ಗೋ ಕಾರ್ಟ್‌ನಲ್ಲಿನ ಉಪಕರಣಗಳು ದೋಷಯುಕ್ತವಾಗಿವೆ. ಅಲ್ಲದೆ ತಕ್ಷಣಕ್ಕೆ ಬೇಕಾದ ನೆರವು ಅವರಿಂದ ಸಿಕ್ಕಿಲ್ಲ ಎಂದೂ ತಂದೆ ಆರೋಪಿಸಿದ್ದಾರೆ. ಆದರೆ ಈ ಆರೋಪಕ್ಕೆ ಡರ್ಬನ್ ನ ಗೇಟ್ ವೇ ಮಾಲ್ ನ ಮ್ಯಾಮೇಜ್ ಮೆಂಟ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.