ಗೆಳೆಯರ ಜೊತೆ ಬ್ಯಾಡ್ಮಿಂಟನ್ ಆಟವಾಡುತ್ತಲೇ ಕುಸಿದು ಬಿದ್ದು ಕೊನೆಯುಸಿರೆಳೆದ ಭಾರತೀಯ ಮೂಲದ ವ್ಯಕ್ತಿ
ಮಸ್ಕತ್: ಗೆಳೆಯರ ಜೊತೆ ಬ್ಯಾಡ್ಮಿಂಟನ್ ಆಟವಾಡುತ್ತಲೇ ವ್ಯಕ್ತಿಯೊಬ್ಬ ಹೃದಯಾಘಾತಗೊಂಡು ಕೊನೆಯುಸಿರೆಳೆದ ಘಟನೆಯೊಂದು ಮಸ್ಕತ್ ನಲ್ಲಿ ನಡೆದಿದೆ.
ಘಟನೆ ಜನವರಿ 2 ರಂದು ನಡೆದಿದ್ದು ಕೇರಳ ಮೂಲದ ವ್ಯಕ್ತಿಯೊಬ್ಬ ತನ್ನ ಸ್ನೇಹಿತರೊಂದಿಗೆ ಬ್ಯಾಡ್ಮಿಂಟನ್ ಆಟವಾಡುತ್ತಿರುವ ವೇಳೆ ಹೃದಯಾಘಾತಗೊಂಡು ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾರೆ, ಈ ಘಟನೆಯ ದೃಶ್ಯವು ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಇಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬರು ತಮ್ಮ ಗೆಳೆಯರೊಂದಿಗೆ ಬ್ಯಾಡ್ಮಿಂಟನ್ ಆಟವಾಡುತ್ತಿದ್ದರು ಈ ವೇಳೆ ಏಕಾಏಕಿ ಕುಸಿದು ಬೀಳುವುದು ಕಾಣಬಹುದು, ಕೂಡಲೇ ಸ್ನೇಹಿತರು ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ದರೂ ಅಷ್ಟೋತ್ತಿಗಾಗಲೇ ವ್ಯಕ್ತಿಯ ಪ್ರಾಣ ಪಕ್ಷಿ ಹಾರಿಹೋಗಿತ್ತು ಎನ್ನಲಾಗಿದೆ.
ವ್ಯಕ್ತಿಯ ಹೆಸರನ್ನು ಬಹಿರಂಗಪಡಿಸಲಾಗಿಲ್ಲ. ಈತನಿಗೆ 38 ವರ್ಷ ಮತ್ತು ಕೇರಳದವನು ಎಂದು ಟೈಮ್ಸ್ ಆಫ್ ಓಮನ್ ವರದಿ ಮಾಡಿದ್ದು. ವ್ಯಕ್ತಿ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಅಸಲಿಗೆ ಮೃತ ವ್ಯಕ್ತಿ ಕ್ರೀಡಾ ಪ್ರೇಮಿಯಾಗಿದ್ದು ದೇಶೀಯ ಕ್ರಿಕೆಟ್ ಲೀಗ್‌ನಲ್ಲಿ ನಿಯಮಿತವಾಗಿ ಆಡುತ್ತಿದ್ದರು ಎನ್ನಲಾಗಿದೆ.