ಗೆಲುವಿನ ಬಳಿಕ ಆರ್ ಸಿಬಿ ಫ್ಯಾನ್ಸ್ ಗೆ ಸುಮ್ಮನಿರಲು ಸನ್ನೆ ಮಾಡಿದ ಗೌತಮ್ ಗಂಭೀರ್ ;ವಿಡಿಯೋ ವೈರಲ್

ಬೆಂಗಳೂರು(ಏ.11): IPL 2023 ಟೂರ್ನಿಯ ಲೀಗ್ ಪಂದ್ಯದಲ್ಲಿ ಬೆಂಗಳೂರು ತವರಿನಲ್ಲಿ ಮುಗ್ಗರಿಸಿದೆ. ಲಖನೌ ಸೂಪರ್ ಜೈಂಟ್ಸ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಲು ಅನುಭವಿಸಿತ್ತು. ಬೆಂಗಳೂರಿನಲ್ಲಿ ಆರ್‌ಸಿಬಿ ಮಣಿಸಿದ ಲಖನೌ ಸಂಭ್ರಮ ಆಚರಿಸಿದೆ. ಆದರೆ ಲಖನೌ ಸೂಪರ್ ಜೈಂಟ್ಸ್ ಮೆಂಟರ್ ಗೌತಮ್ ಗಂಭೀರ್ ನಡೆ ಇದೀಗ ಬೆಂಗಳೂರು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಗೆಲುವಿನ ಬೆನ್ನಲ್ಲೇ ಲಖನೌ ಸಂಭ್ರಮ ಆಚರಿಸಿದೆ. ಗೌತಮ್ ಗಂಭೀರ್ ಕೂಡ ಮೈದಾನಕ್ಕಿಳಿದು ಸಂಭ್ರಮಿಸಿದ್ದಾರೆ. ಆದರೆ ಅಭಿಮಾನಿಗಳು ಮಾತ್ರ ಆರ್‌ಸಿಬಿ ತಂಡಕ್ಕೆ ನಿರಂತರ ಬೆಂಬಲ ಸೂಚಿಸಿದ್ದಾರೆ. ಎಂದಿನಂತೆ ಆರ್‌ಸಿಬಿ..ಆರ್‌ಸಿಬಿ ಎಂದು ಚಿಯರ್ ಮಾಡಿದ್ದಾರೆ. ಇದು ಗಂಭೀರ್ ಪಿತ್ತ ನೆತ್ತಿಗೇರಿಸಿದೆ. ಇತ್ತ ಗೌತಮ್ ಗಂಭೀರ್, ಅಭಿಮಾನಿಗಳತ್ತ ತಿರುಗಿ ಬಾಯಿ ಮುಚ್ಚಲು ಸನ್ನೆ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆರ್‌ಸಿಬಿ ತಂಡವನ್ನು 1 ವಿಕೆಟ್‌ನಲ್ಲಿ ಮಣಿಸಿದ ಲಖನೌ ಸೂಪರ್ ಜೈಂಟ್ಸ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮಿಸಿತು. ಪಂದ್ಯ ಅಂತಿಮ ಹಂತಕ್ಕೆ ತಲುಪತ್ತಿದ್ದಂತೆ ಗಂಭೀರ್ ಸಂಭ್ರಮಕ್ಕೆ ಸಜ್ಜಾಗಿದ್ದರು. ಪ್ರತಿಯೊಂದು ರನ್‌ಗೂ ಗಂಭೀರ ಸಂಭ್ರಮ ಆಚರಿಸಿದ್ದಾರೆ. ಡಗೌಟ್‌ನಲ್ಲಿ ಕುಳಿತಿದ್ದ ಗಂಭೀರ್ ಪದೇ ಪದೇ ಆಕ್ರೋಶ, ಸಂಭ್ರಮ ಹೊರಹಾಕಿದ್ದಾರೆ. ಇನ್ನು ಗೆಲುವು ಸಾಧಿಸುತ್ತಿದ್ದಂತೆ ಗಂಭೀರ್ ಸಂಭ್ರಮ ಡಬಲ್ ಆಗಿದೆ. ಆದರೆ ಆರ್‌ಸಿಬಿ ಅಭಿಮಾನಿಗಳು ಮಾತ್ರ ಬೆಂಗಳೂರು ತಂಡಕ್ಕೆ ಬೆಂಬಲ ಸೂಚಿಸಿದ್ದರೆ. ಕಿಕ್ಕಿರಿದು ತುಂಬಿದ್ದ ಅಭಿಮಾನಿಗಳು ಆರ್‌ಸಿಬಿ ಎಂದು ಘೋಷಣೆ ಕೂಗಿದ್ದಾರೆ.
ಪಂದ್ಯ ಸೋತರೂ ಆರ್‌ಸಿಬಿ ಅಭಿಮಾನಿಗಳು ಮಾತ್ರ ತಂಡಕ್ಕೆ ಅದೇ ರೀತಿ ಬೆಂಬಲ ಸೂಚಿಸಿದ್ದಾರೆ. ಇದು ಗಂಭೀರ್ ಪಿತ್ತ ನೆತ್ತಿಗೇರಿಸಿದೆ. ಅಭಿಮಾನಿಗಳತ್ತ ತಿರುಗಿದ ಗಂಭೀರ್ ಕೈ ಸನ್ನೈ ಮೂಲಕ ಬಾಯಿ ಮುಚ್ಚಲು ಸೂಚಿಸಿದ್ದಾರೆ. ಆದರೆ ಗಂಭೀರ್ ನಡೆಯಿಂದ ಅಭಿಮಾನಿಗಳು ಮತ್ತಷ್ಟು ಜೋರಾಗಿ ಆರ್‌ಸಿಬಿ..ಆರ್‌ಸಿಬಿ ಎಂದು ಕೂಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಆರ್‌ಸಿಬಿ ಅಭಿಮಾನಿಗಳ ಆಕ್ರೋಶ ಹೆಚ್ಚಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಂದ್ಯ ಸೋತರೂ ಗೆದ್ದರೂ ನಮ್ಮ ಬೆಂಬಲ ತಂಡಕ್ಕಿದೆ. ಎದೆಂದಿಗೂ ಆರ್‌ಸಿಬಿ ಅಭಿಮಾನಿಗಳು. ನಮ್ಮ ಚಿಯರ್ ಇದಕ್ಕಿಂತ ಹೆಚ್ಚಾಗಲಿದೆ ಎಂದು ಅಭಿಮಾನಿಗಳು ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಕೆಲ ಅಭಿಮಾನಿಗಳು ಗಂಭೀರ್‌ಗೆ ಎಚ್ಚರಿಕೆ ನೀಡಿದ್ದಾರೆ. ಲಖನೌ ಸೂಪರ್ ಜೈಂಟ್ಸ್ ತವರಿನಲ್ಲಿ ಮಣಿಸುವುದಾಗಿ ಸವಾಲು ಹಾಕಿದ್ದಾರೆ.
Gautam Gambhir to RCB Fans !! ?
— Tanay Vasu (@tanayvasu) April 10, 2023
https://t.co/2zzGEuFRHr
ಕೊನೆ 6 ಎಸೆತದಲ್ಲಿ ಲಖನೌಗೆ ಗೆಲ್ಲಲು ಬೇಕಿದ್ದಿದ್ದು 5 ರನ್. ಮೊದಲ ಎಸೆತದಲ್ಲಿ ಉನಾದ್ಕತ್ 1 ರನ್ ಪಡೆದರು. 2ನೇ ಎಸೆತದಲ್ಲಿ ವುಡ್ ಬೌಲ್ಡ್ ಆದರೆ, 3ನೇ ಎಸೆತದಲ್ಲಿ ಬಿಷ್ಣೋಯ್ 2 ರನ್ ಕದ್ದರು. 4ನೇ ಎಸೆತದಲ್ಲಿ 1 ರನ್ ಪಡೆದ ಬಿಷ್ಣೋಯ್ ಸ್ಕೋರ್ ಸಮಗೊಳ್ಳುವಂತೆ ಮಾಡಿದರು. 5ನೇ ಎಸೆತದಲ್ಲಿ ಉನಾದ್ಕತ್ ಔಟಾದರು. ಕೊನೆ ಎಸೆತವನ್ನು ಬೌಲ್ ಮಾಡುವಾಗ ಹರ್ಷಲ್ ಮೊದಲು ‘ಮನ್‌ಕಡಿಂಗ್’ ಯತ್ನವನ್ನು ಕೈಚೆಲ್ಲಿದರು. ಬಳಿಕ ಕೊನೆ ಎಸೆತದಲ್ಲಿ ಬ್ಯಾಟರ್ ಆವೇಶ್ ಬ್ಯಾಟ್‌ಗೆ ಸಿಗದ ಚೆಂಡನ್ನು ಹಿಡಿದು ರನೌಟ್ ಮಾಡಲು ಕಾರ್ತಿಕ್ ವಿಫಲರಾದರು. ಲಖನೌ ಗೆದ್ದು ಸಂಭ್ರಮಿಸಿತು. ಕೊನೆ ಬಾಲ್ ವರೆಗೂ ಅತ್ತಿತ್ತ ಹೊಯ್ದಾಡಿದ ‘ವಿಜಯಲಕ್ಷ್ಮಿ’ ಕೊನೆಗೆ ಲಖನೌ ಡಗೌಟ್ ಸೇರಿದಳು. 3ನೇ ಗೆಲುವು ಕಂಡ ರಾಹುಲ್ ಪಡೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿತು.