ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಕ್ಷಣಗಣನೆ ; ಯಾವೆಲ್ಲ ದಾಖಲೆ ಬೇಕು? ಹೇಗೆ ಸಲ್ಲಿಸುವುದು? ಇಲ್ಲಿದೆ ಮಾಹಿತಿ
ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ 5 ಗ್ಯಾರೆಂಟಿಗಳ ಪೈಕಿ ಈಗಾಗಲೇ 3 ಗ್ಯಾರೆಂಟಿಗಳು ಜಾರಿಯಲ್ಲಿದ್ದು, ಈಗ 4ನೇ ಗ್ಯಾರೆಂಟಿ ಮನೆ ಯಜಮಾನಿಗೆ ಮಾಸಿಕ 2 ಸಾವಿರ ರೂ. ನೀಡುವ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ಸಿಕ್ಕಿದೆ. ಎಲ್ಲ ಅರ್ಹ ಫಲಾನುಭವಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಹಲವು ಬಾರಿ ಮುಂದೂಡುತ್ತಲೇ ಬಂದಿದ್ದ ಗೃಹಲಕ್ಷ್ಮೇ ಯೋಜನೆಗೆ ಬುಧವಾರ ಮುಖ್ಯಮಂತ್ರಿಗಳು ಚಾಲನೆ ನೀಡಿದ್ದು, ಅರ್ಜಿ ಸಲ್ಲಿಕೆ ಆರಂಭವಾಗಿದೆ. ಆಗಸ್ಟ್ 15ರ ನಂತರ ಕುಟುಂಬಗಳ ಯಜಮಾನಿಯವರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮೆಯಾಗುವ ಸಾಧ್ಯತೆ ಇದೆ. ಅರ್ಜಿ ಸಲ್ಲಿಕೆಗೆ ಯಾವುದೇ ಕಾಲಮಿತಿ ನಿಗದಿಪಡಿಸಿಲ್ಲವಾದರೂ ಅರ್ಜಿ ಸಲ್ಲಿಸಿ ದೃಢಿಕೃತಗೊಂಡರೆ ಯಜಮಾನಿಗಳ ಬ್ಯಾಂಕ್ ಖಾತೆಗೆ ಹಣ ಜಮೆಯಾಗಲಿದೆ.
ಯಜಮಾನಿಗೆ ಅವಕಾಶ: ಎಲ್ಲ ತಾಲೂಕುಗಳಲ್ಲಿ ಗೃಹಲಕ್ಷ್ಮೀ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು, ಅರ್ಹ ಫಲಾನುಭವಿಗಳು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಅಂತ್ಯೋದಯ ಪಡಿತರ ಚೀಟಿ, ಬಿಪಿಎಲ್ ಕಾರ್ಡ್ ಹೊಂದಿರುವವರು, ಎಪಿಎಲ್ ಕಾರ್ಡ್ ಹೊಂದಿರುವ ಮನೆಯ ಯಜಮಾನಿಯರು ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಫಲಾನುಭವಿಗಳು ಯಾರು ?
ಪಡಿತರ ಚೀಟಿಯಲ್ಲಿ ಯಜಮಾನಿ ಮಹಿಳೆ ಎಂದು ಗುರುತಿಸಿರುವ ಮಹಿಳೆಯು ಈ ಯೋಜನೆಯ ಫಲಾನುಭವಿಯಾಗುತ್ತಾರೆ. ಆದರೆ ಫಲಾನುಭವಿ ಯಜಮಾನಿ ಮಹಿಳೆ ಅಥವಾ ಆಕೆಯ ಪತಿ ಆದಾಯ ತೆರಿಗೆ ಅಥವಾ ಜಿಎಸ್‌ಟಿ ಪಾವತಿದಾರರಾಗಿರಬಾರದು ಎಂಬ ನಿಯಮವಿದೆ.
ಯಾವೆಲ್ಲ ದಾಖಲೆ ಬೇಕು?
ಯೋಜನೆಯಡಿ ನೋಂದಾಯಿಸಿಕೊಳ್ಳಲು ಪಡಿತರಚೀಟಿ ಸಂಖ್ಯೆ, ಆಧಾರ್ ಕಾರ್ಡ್ ಸಂಖ್ಯೆ, ಪತಿಯ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಯ ಪಾಸ್ ಬುಕ್, ಆಧಾರ್ ನಂಬರ್ ಜೋಡಣೆಯಾಗಿರುವ ಬ್ಯಾಂಕ್ ಖಾತೆ ಹೊರತು ಪಡಿಸಿ ಪರ್ಯಾಯ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಬಯಸಿದಲ್ಲಿ ಸದರಿ ಬ್ಯಾಂಕ್ ಖಾತೆಯ ಪಾಸ್ ಬುಕ್ ಮಾಹಿತಿ ಅಗತ್ಯವಿರುತ್ತದೆ
ನೋಂದಣಿ ಹೇಗೆ?:
ಫಲಾನುಭವಿಯ ನೋಂದಣಿಯನ್ನು 2 ವಿಧಾನದಿಂದ ಮಾಡಿಸಬಹುದು. ಮೊದಲನೆಯದಾಗಿ ಈಗಾಗಲೇ ರೇಷನ್ ಕಾರ್ಡ್‌ನಲ್ಲಿ ಗುರುತಿಸಲಾಗಿರುವ ಪ್ರತಿಯೊಬ್ಬ ಯಜಮಾನಿ ಮಹಿಳೆಗೂ ದಿನಾಂಕ, ಸಮಯ ಹಾಗೂ ನೋಂದಣಿ ಮಾಡಿಸುವ ಸ್ಥಳದ ವಿವರಗಳನ್ನು ಎಸ್‌ಎಂಎಸ್ ಮೂಲಕ ತಿಳಿಸಲಾಗುವುದು. ಗ್ರಾಮಾಂತರ ಪ್ರದೇಶದಲ್ಲಿ ಅವರು ವಾಸಿಸುವ ಗ್ರಾಮದ ಸಮೀಪವಿರುವ ಗ್ರಾಮ-ಒನ್ ಕೇಂದ್ರ ಅಥವಾ ಬಾಪೂಜಿ ಸೇವಾ ಕೇಂದ್ರಗಳಿರುತ್ತವೆ. ಹಾಗೆಯೇ ನಗರ ಪ್ರದೇಶದಲ್ಲಿ ಅವರ ಸಮೀಪವಿರುವ ಕರ್ನಾಟಕ-ಒನ್ ಬೆಂಗಳೂರು-ಒನ್, ಬಿಬಿಎಂಪಿ ವಾರ್ಡ್ ಕಚೇರಿ ಮತ್ತು ಸ್ಥಳೀಯ ನಗರಾಡಳಿತ ಸಂಸ್ಥೆಯ ಕಚೇರಿಗಳು ಕೇಂದ್ರಗಳಾಗಿರುತ್ತವೆ. 2ನೇಯದಾಗಿ ಪರ್ಯಾಯವಾಗಿ ಸರಕಾರ ನೇಮಿಸಿರುವ ಪ್ರಜಾಪ್ರತಿನಿಧಿ ತಮ್ಮ ಮನೆಗೆ ಭೇಟಿ ನೀಡಿದಾಗ ಅವರಿಂದಲೂ ಸಹ ನೋಂದಾಯಿಸಿಕೊಳ್ಳಬಹುದು.
ನೋಂದಣಿಗೆ ಸಮಯ ನಿಗದಿ:
ಪ್ರತಿಫಲಾನುಭವಿಯ ನೋಂದಣಿಗೆ ನಿಗದಿ ಮಾಡಿರುವ ದಿನಾಂಕ, ಸಮಯ ಮತ್ತು ಸ್ಥಳವನ್ನು 1902 ಗೆ ಕಾಲ್ ಮಾಡಿ ಅಥವಾ 8147500500 ನಂಬರ್‌ಗೆ ಎಸ್‌ಎಂಎಸ್ ಮೂಲಕ ಸಂದೇಶ ಕಳುಹಿಸಿ ಮಾಹಿತಿ ಪಡೆಯಬಹುದಾಗಿದೆ. ಒಂದು ವೇಳೆ ನಿಗದಿಪಡಿಸಿದ ದಿನಾಂಕ ಮತ್ತು ಸಮಯದಂದು ಹೋಗಲು ಸಾಧ್ಯವಾಗದೇ ಇದ್ದಲ್ಲಿ, ಅದೇ ಸೇವಾ ಕೇಂದ್ರಗಳಿಗೆ ಮುಂದಿನ ಯಾವುದೇ ದಿನಾಂಕದಂದು ಸಂಜೆ 5 ರಿಂದ 7 ಗಂಟೆಯೊಳಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬಹುದು.
ಸೇವಾ ಕೇಂದ್ರಗಳಲ್ಲಿ ನೋಂದಾಯಿಸಿಕೊಂಡಾಗ ಮಂಜೂರಾತಿ ಪತ್ರವನ್ನು ಕೂಡ ನೀಡಲಾಗುವುದು. ಪ್ರಜಾಪ್ರತಿನಿಧಿ ಮೂಲಕ ನೋಂದಾಯಿಸಿದಲ್ಲಿ ಮಂಜೂರಾತಿ ಪತ್ರವನ್ನು ನಂತರ ತಮ್ಮ ಮನೆಗೆ ತಲುಪಿಸಲಾಗುವುದು. ಸೇವಾ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಂಡರೆ ಅರ್ಜಿದಾರರು ನೀಡಿದ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಮೂಲಕ ಮಂಜೂರಾತಿ ಬಗ್ಗೆ ಸಂದೇಶ ರವಾನೆಯಾಗಲಿದೆ.