ಗಂಡನ ಜತೆ ರಸ್ತೆ ಪಕ್ಕದಲ್ಲಿ ತೆರಳುವಾಗ ಆಟೋ ಡಿಕ್ಕಿ: ಗರ್ಭಿಣಿ ದುರಂತ ಸಾವು
ಕಾರವಾರ: ಗರ್ಭಿಣಿ ಮಹಿಳೆಗೆ ಆಟೋ ರಿಕ್ಷಾ ಢಿಕ್ಕಿಯಾಗಿ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಭಾವಿಕೇರಿ ಗ್ರಾಮದಲ್ಲಿ ನಡೆದಿದೆ. ಗರ್ಭಿಣಿ ರಸ್ತೆ ಬದಿ ತೆರಳುತ್ತಿದ್ದ ವೇಳೆ ರಿಕ್ಷಾ ಢಿಕ್ಕಿಯಾಗಿ ಮೃತಪಟ್ಟಿದ್ದಾರೆ. ಶೋಭಾ ಗೋಪಾಲ ನಾಯಕ(28) ಮೃತ ದುರ್ದೈವಿಯಾಗಿದ್ದು, ಈಕೆ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದರು. ಗಂಡನೊಂದಿಗೆ ಮನೆಯ ಎದುರಿನ ರಸ್ತೆಯಲ್ಲಿ ತೆರಳುತ್ತಿದ್ದ ವೇಳೆ ಅಪಘಾತವಾಗಿ ಈ ದುರಂತ ನಡೆದಿದೆ. ಅತಿವೇಗವಾಗಿ ಅಜಾಕರೂಕತೆಯಿಂದ ಬಂದ ರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ಈ ದುರಂತ ನಡೆದಿದೆ. ರಿಕ್ಷಾ ಢಿಕ್ಕಿಯಾದ ರಭಸಕ್ಕೆ ಗಂಭೀರ ಗಾಯಗೊಂಡು ಗರ್ಭಿಣಿ ಉಸಿರು ಚೆಲ್ಲಿದ್ದಾರೆ. ಅಪಘಾತದ ಬಳಿಕ ರಿಕ್ಷಾ ಸಮೇತ ಚಾಲಕ ಪರಾರಿಯಾಗಿದ್ದಾನೆ. ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಬೆಂಗಳೂರು ಕರಗ ಹೊತ್ತಿದ್ದ ಜ್ಞಾನೇಂದ್ರ ಕೊಲೆ ಯತ್ನ, ಓರ್ವ ಆರೋಪಿ ಬಂಧನ:
ಬೆಂಗಳೂರು: ಬೆಂಗಳೂರಿನಲ್ಲಿ ಐತಿಹಾಸಿಕ ಕರಗ(Bengaluru Karaga) ಮಹೋತ್ಸವ ಅದ್ಧೂರಿಯಾಗಿ ಸಂಪನ್ನಗೊಂಡಿದೆ. ಆದ್ರೆ, ಕರಗವನ್ನು ಹೊತ್ತಿದ್ದ ಜ್ಞಾನೇಂದ್ರ (Gnanendra) ಅವರ ಕೊಲೆ ಯತ್ನ ನಡೆದಿದೆ ಎನ್ನುವ ಆಘಾತಕಾರಿ ಮಾಹಿತಿಯೊಂದು ಕೇಳಿಬಂದಿದೆ. ಏಪ್ರಿಲ್ 6ರಂದು ನಡೆದ ಕರಗ ಉತ್ಸವದ ವೇಳೆ ಜ್ಞಾನೇಂದ್ರ ಅವರ ಮೇಲೆ ರಾಸಾಯನಿಕ ಮಿಶ್ರಣ ಹಾಗೂ ಖಾರದ ಪುಡಿ ಎರಚಿ ಹತ್ಯೆಗೆ ಯತ್ನಿಸಲಾಗಿದೆ ಎಂದು ಆರೋಪಿಸಲಾಗಿದ್ದು, ಈ ಬಗ್ಗೆ ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಸಂಬಂಧ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಈ ಪ್ರಕಣವನ್ನು ಗಂಭೀರವಾಗಿ ತೆಗೆದುಕೊಂಡ ಹಲಸೂರು ಗೇಟ್ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ಬಳಿಕ ಜಯನಗರದ ಆದಿನಾರಾಯಣ ಎನ್ನುವಾತನನು ಬಂಧಿಸಿದ್ದಾರೆ. ಇನ್ನು ಈ ಬಗ್ಗೆ ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದು, ಮಂಗಳವಾರ ಜ್ಞಾನೇಂದ್ರ ಅವರಿಂದ ದೂರು ಸ್ವೀಕರಿಸಿದ ಹಲಸೂರು ಗೇಟ್ ಪೊಲೀಸರು ಆದಿನಾರಾಯಣನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಅಲ್ಲದೇ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ತೆಗೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಕರಗ ಉತ್ಸವದ ವೇಳೆ ಜ್ಞಾನೇಂದ್ರ ಮೇಲೆ ಆದಿನಾರಾಯಣ ಯಾವುದೋ ವಸ್ತು ಎಸೆಯುವ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದರಿಂದ ಜ್ಞಾನೇಂದ್ರ ಅವರ ಕುತ್ತಿಗೆ ಭಾಗದಲ್ಲಿ ಸುಟ್ಟಗಾಯಗಳಾಗಿವೆ. ಹಲವು ವರ್ಷಗಳಿಂದ ಕರಗ ಹೊರುವ ವಿಚಾರವಾಗಿ ಆದಿನಾರಾಯಣ ಹಾಗೂ ಜ್ಞಾನೇಂದ್ರ ನಡುವೆ ಮನಸ್ತಾಪವಿದೆ. ಈ ಸೇಡಿನಿಂದ ಆತ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಈ ಬಗ್ಗೆ ವಿಚಾರಣೆ ನಡೆಸಿದ್ದಾರೆ.
ಕರಗ ಉತ್ಸವದ ವೇಳೆ ತಮ್ಮ ಮೇಲೆ ರಾಸಾಯನಿಕ ವಸ್ತು ಎರಚಿ ಕೊಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಹಲಸೂರು ಗೇಟ್ ಠಾಣೆಗೆ ಕರಗ ಹೊತ್ತಿದ್ದ ಜ್ಞಾನೇಂದ್ರ ಮಂಗಳವಾರ ದೂರು ನೀಡಿದ್ದರು. ಜಯನಗರದ ಆದಿನಾರಾಯಣ ಮತ್ತು ಆತನ ಸಹಚರರು ಕರಗ ಉತ್ಸವದ ವೇಳೆ ರಾಸಾಯನಿಕ ಮಿಶ್ರಣ ಹಾಗೂ ಖಾರದ ಪುಡಿ ಮಿಶ್ರಣ ಮಾಡಿದ ಹೂವು ಎರಚಿದ್ದಾರೆ. ಇದರಿಂದದೇಹದ ಮೇಲೆ ಗಾಯಗಳಾಗಿವೆ ಎಂದು ಜ್ಞಾನೇಂದ್ರ ಅವರು ದೂರಿನಲ್ಲಿ ಉಲ್ಲೇಖಿಸಿದ್ದರು. ಈ ದೂರಿನ ಮೇರೆಗೆ ಜಯನಗರದ ಆದಿನಾರಾಯಣ ವಿರುದ್ಧ ಕೊಲೆ ಯತ್ನ ಆರೋಪದಡಿ ಎಫ್‌ಐಆರ್ ದಾಖಲಾಗಿತ್ತು.