ಖ್ಯಾತ ನೇತ್ರತಜ್ಞ ಡಾ.ಭುಜಂಗ ಶೆಟ್ಟಿ ಹೃದಯಾಘಾತದಿಂದ ನಿಧನ!
ಬೆಂಗಳೂರು: ನಾರಾಯಣ ನೇತ್ರಾಯಲಯದ ಅಧ್ಯಕ್ಷ ಭುಜಂಗ ಶೆಟ್ಟಿ (69) ಶುಕ್ರವಾರ ಸಂಜೆ ನಿಧನರಾದರು. ಭುಜಂಗ ಶೆಟ್ಟಿ ದೇಶದ ಖ್ಯಾತ ನೇತ್ರ ತಜ್ಞರಾಗಿದ್ದರು. ಯಶವಂತಪುರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಸಂಜೆ ಹೃದಯಾಘಾತ ಸಂಭವಿಸಿದ್ದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶುಕ್ರವಾರ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ನೀಡಿ ಮನೆಗೆ ವಾಪಸ್ಸಾಗಿದ್ದ ಭುಜಂಗ ಶೆಟ್ಟಿ ಅವರಿಗೆ ಸಂಜೆ ತೀವ್ರ ಹೃದಯಾಘಾತ ಉಂಟಾಗಿತ್ತು.
ಭುಜಂಗ ಶೆಟ್ಟಿ ಅವರು 1978 ರಲ್ಲಿ ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಮಾಡಿದ್ದರು. 1982 ರಲ್ಲಿ ಬೆಂಗಳೂರು ವೈದ್ಯಕೀಯ ಕಾಲೇಜಿನ ಮಿಂಟೋ ಆಪ್ತಾಲ್ಮಿಕ್ ಆಸ್ಪತ್ರೆಯಲ್ಲಿ ನೇತ್ರಶಾಸ್ತ್ರದಲ್ಲಿ ರೆಸಿಡೆನ್ಸಿ ತರಬೇತಿ ಪಡೆದಿದ್ದರು. 80ರ ದಶಕದಲ್ಲಿ ಸಣ್ಣ ಕ್ಲಿನಿಕ್‌ನಲ್ಲಿ ನೇತ್ರ ಚಿಕಿಯ್ಸಾಲಯವನ್ನು ಪ್ರಾರಂಭಿಸಿದ ಡಾ. ಭುಜಂಗ ಶೆಟ್ಟಿ ನಾರಾಯಣ ನೇತ್ರಾಯಲದ ಅಧ್ಯಕ್ಷರಾಗಿದ್ದರು.
ಭುಜಂಗ ಶೆಟ್ಟಿ ನಾರಾಯಣ ನೇತ್ರಾಲಯದಲ್ಲಿ ವಿವಿಧ ಉಪವಿಭಾಗಗಳ ಅಭಿವೃದ್ಧಿಯನ್ನು ಸಕ್ರಿಯವಾಗಿ ಪ್ರೋತ್ಸಾಹಿಸಿದ್ದಾರೆ ಮತ್ತು ನಾರಾಯಣ ನೇತ್ರಾಲಯವನ್ನು ಕರ್ನಾಟಕದ ಅತಿದೊಡ್ಡ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯಾಗಿ ಪರಿವರ್ತಿಸಲು ಕಾರಣರಾಗಿದ್ದರು. ಕಣ್ಣಿನ ಪೊರೆ ಮತ್ತು ಫಾಕೋಎಮಲ್ಸಿಫಿಕೇಶನ್ ಶಸ್ತ್ರಚಿಕಿತ್ಸೆಯಲ್ಲಿ ನೈಪುಣ್ಯತೆ ಹೊಂದಿದ್ದರು.
ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ:
ಸದ್ಯ ಮೃತದೇಹ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿದೆ. ಸಾರ್ವಜನಿಕ ದರ್ಶನಕ್ಕಾಗಿ ರಾಜಾಜಿನಗರದ ನಾರಾಯಣ ನೇತ್ರಾಲಯದ ಬಳಿ ಶನಿವಾರ ಬೆಳಿಗ್ಗೆ 11 ಗಂಟೆಯಿಂದ ಮಧಾಹ್ನ 2 ಗಂಟೆಯವರೆಗೂ ವ್ಯವಸ್ಥೆ ಮಾಡಲಾಗಿದೆ. ಅಭಿಮಾನಿಗಳು, ಭುಜಂಗ ಶೆಟ್ಟಿ ಡಾಕ್ಟರ್ ಬಳಿ ಚಿಕಿತ್ಸೆಯಿಂದ ಗುಣಮುಖರಾದವರು ಆಗಮಿಸಿ ಅಂತಿಮ ದರ್ಶನ ಪಡೆಯಬಹುದು ಎಂದು ನಾರಾಯಣ ನೇತ್ರಾಲಯ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.
ಲಕ್ಷಾಂತರ ಜನರ ಕುಟುಂಬಕ್ಕೆ ಬೆಳಕಾಗಿದ್ದರು – ಸಿದ್ದರಾಮಯ್ಯ ಸಂತಾಪ:
ಡಾ.ಭುಜಂಗ ಶೆಟ್ಟಿ ನಿಧನದ ಕುರಿತು ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ. ” ಖ್ಯಾತ ನೇತ್ರ ತಜ್ಞ ಡಾ.ಭುಜಂಗ ಶೆಟ್ಟಿ ನಿಧನರಾಗಿದ್ದಾರೆ ಎಂದು ತಿಳಿದು ದುಃಖವಾಗಿದೆ. ಲಕ್ಷಗಟ್ಟಲೆ ಜನರಿಗೆ ದೃಷ್ಟಿ ಬರುವಂತೆ ಮಾಡಿ ಅವರ ಕುಟುಂಬಕ್ಕೆ ಬೆಳಕಾಗಿದ್ದರು. ಅವರ ಎಲ್ಲಾ ಹಿತೈಷಿಗಳು ಮತ್ತು ಕುಟುಂಬ ಸದಸ್ಯರಿಗೆ ನನ್ನ ಸಂತಾಪಗಳು” ಎಂದಿದ್ದಾರೆ.
ಬೊಮ್ಮಾಯಿ ಸಂತಾಪ:
ಹಂಗಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಟ್ವೀಟ್ ಮಾಡಿ, ” ಖ್ಯಾತ ನೇತ್ರ ತಜ್ಞರಾದ ಡಾ. ಭುಜಂಗ ಶೆಟ್ಟಿ ಅವರು ಹೃದಯಾಘಾತದಿಂದ ನಿಧನರಾದ ವಿಷಯ ತಿಳಿದು ಅತ್ಯಂತ ದುಃಖವಾಗಿದೆ. ಕಣ್ಣಿನ ಶಸ್ತ್ರಚಿಕಿತ್ಸೆ ಮೂಲಕ ಸಾವಿರಾರು ಅಂಧರ ಬಾಳಿಗೆ ಬೆಳಕಾಗಿದ್ದ ಭುಜಂಗ ಶೆಟ್ಟಿ ಅವರ ನಿಧನದಿಂದ ರಾಜ್ಯ ಒಬ್ಬ ನೇತ್ರ ತಜ್ಞನನ್ನು ಕಳೆದುಕೊಂಡಂತಾಗಿದೆ. ದೇವರು ಅವರ ಆತ್ಮಕ್ಕೆ ಸದ್ಗತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿಃ” ಎಂದು ಸಂತಾಪ ಸೂಚಿಸಿದ್ದಾರೆ.