ಖೇಲೋ ಇಂಡಿಯಾ ವಿವಿ ಗೇಮ್ಸ್‌ಗೆ ಇಂದು ಪ್ರಧಾನಿ ಮೋದಿ ಚಾಲನೆ
ಲಖನೌ(ಮೇ.25): 3ನೇ ಆವೃತ್ತಿಯ ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಚಾಲನೆ ನೀಡಲಿದ್ದಾರೆ. ಉತ್ತರ ಪ್ರದೇಶದ ನಾಲ್ಕು ನಗರಗಳಲ್ಲಿ ನಡೆಯಲಿರುವ ಕೂಟವನ್ನು ಸಂಜೆ 7 ಗಂಟೆಗೆ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ.
ಕ್ರೀಡಾಕೂಟದಲ್ಲಿ 200ಕ್ಕೂ ಹೆಚ್ಚು ಯುನಿವರ್ಸಿಟಿಗಳ 4750ರಷ್ಟುಅಥ್ಲೀಟ್ಗಳು ಪಾಲ್ಗೊಳ್ಳಲಿದ್ದು, 21 ಕ್ರೀಡೆಗಳು ನಡೆಯಲಿವೆ. ವಾರಾಣಸಿ, ಗೋರಖ್ಪುರ, ಲಖನೌ ಹಾಗೂ ಗೌತಮ ಬುದ್ಧ ನಗರಗಳು ಕೂಟಕ್ಕೆ ಆತಿಥ್ಯ ವಹಿಸಲಿವೆ. ಜೂ.3ರಂದು ವಾರಣಾಸಿಯಲ್ಲಿ ಕ್ರೀಡಾಕೂಟ ಸಮಾಪ್ತಿಗೊಳ್ಳಲಿದೆ. ಕಬಡ್ಡಿ ಸ್ಪರ್ಧೆಯು ಮೇ 23ರಂದೇ ಆರಂಭಗೊಂಡಿದ್ದು, ಫುಟ್ಬಾಲ್, ಟೆನಿಸ್, ಟೇಬಲ್ ಟೆನಿಸ್, ವಾಲಿಬಾಲ್, ಬಾಸ್ಕೆಟ್ಬಾಲ್ ಸೇರಿದಂತೆ ಕೆಲ ಕ್ರೀಡೆಗಳು ಬುಧವಾರ ಆರಂಭಗೊಂಡವು.
2020ರಲ್ಲಿ ಮೊದಲ ಆವೃತ್ತಿಯ ಕ್ರೀಡಾಕೂಟ ಒಡಿಶಾದಲ್ಲಿ ನಡೆದಿತ್ತು. ಚಂಡೀಗಢದ ಪಂಜಾಬ್ ವಿವಿ ಚಾಂಪಿಯನ್ ಆಗಿತ್ತು. ಕಳೆದ ವರ್ಷ 2ನೇ ಆವೃತ್ತಿ ಬೆಂಗಳೂರಿನ ಜೈನ್ ವಿವಿಯಲ್ಲಿ ಆಯೋಜಿಸಲಾಗಿತ್ತು. ಆತಿಥೇಯ ವಿವಿ ಸಮಗ್ರ ಪ್ರಶಸ್ತಿ ಗೆದ್ದಿತ್ತು.