ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಲು ಮಸೂದೆ; ವಿಧೇಯಕ ಮಂಡನೆಗೆ ಸಂಪುಟ ಒಪ್ಪಿಗೆ
ಬೆಂಗಳೂರು: ದಶಕಗಳ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಕನ್ನಡಿಗರಿಗೆ ರಾಜ್ಯ ಸರಕಾರ ಸಿಹಿ ಸುದ್ದಿ ನೀಡಿದೆ. ಸ್ಥಳೀಯ ಖಾಸಗಿ ವಲಯಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲು ನೀಡುವ ಮಸೂದೆಯನ್ನು ವಿಧಾನ ಮಂಡಲದಲ್ಲಿ ಮಂಡಿಸಲು ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಮಹತ್ವದ ಮಸೂದೆ ಮಂಡನೆಗೆ ಒಪ್ಪಿಗೆ ದೊರೆತಿದೆ. ಕರ್ನಾಟಕ ರಾಜ್ಯ ಕೈಗಾರಿಕೆಗಳು, ಕಾರ್ಖಾನೆಗಳು ಮತ್ತು ಇತರ ಸಂಸ್ಥೆಗಳಲ್ಲಿ ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ಕರಡು ಮಸೂದೆ,
2024ರ ಪ್ರಕಾರ, ವ್ಯವಸ್ಥಾಪಕ (ಮ್ಯಾನೇಜ್‌ಮೆಂಟ್) ಹುದ್ದೆಗಳು ಶೇ. 50 ಹಾಗೂ ವ್ಯವಸ್ಥಾಪಕೇತರ (ನಾನ್ ಮ್ಯಾನೇಜ್‌ಮೆಂಟ್) ಹುದ್ದೆಗಳಿಗೆ ಶೇ.75ರಷ್ಟನ್ನು ಸ್ಥಳೀಯರಿಗೆ ಮೀಸಲಿಡಬೇಕು. ಈಗ ಇದಕ್ಕೆ ರಾಜ್ಯ ಸಚಿವ ಸಂಪುಟದಲ್ಲಿ ಒಪ್ಪಿಗೆ ದೊರಕಿದ್ದು, ಅಧಿವೇಶನದಲ್ಲಿ ಮಂಡಿಸುವುದೊಂದೇ ಬಾಕಿ ಇದೆ.
ಉಲ್ಲಂಘಿಸಿದರೆ ದಂಡ
ಸ್ಥಳೀಯರಿಗೆ ಉದ್ಯೋಗ ನೀಡದಿದ್ದರೆ ಅಂತಹ ಸಂಸ್ಥೆಗಳಿಗೆ ದಂಡ ವಿಧಿಸುವ ಅಂಶವನ್ನೂ ಮಸೂದೆಯಲ್ಲಿ ಸೇರಿಸಲಾಗಿದೆ. ಕನಿಷ್ಠ 10 ಸಾವಿರ ರೂ.ಗಳಿಂದ 25 ಸಾವಿರ ರೂ. ವರೆಗೂ ದಂಡ ವಿಸ್ತರಣೆ ಮಾಡಲು ಅವಕಾಶ ನೀಡಲಾಗುತ್ತದೆ. ಅನಂತರವೂ ಉದ್ಯೋಗ ನೀಡದೇ ಹೋದರೆ ದಿನಕ್ಕೆ 100 ರೂ. ದಂಡ ವಿಧಿಸಲಾಗುತ್ತದೆ.
ಸಿ, ಡಿ ದರ್ಜೆಗೆ ಶೇ. 100 ಉದ್ಯೋಗ
ರಾಜ್ಯದ ಎಲ್ಲ ಖಾಸಗಿ ಕೈಗಾರಿಕೆಗಳಲ್ಲಿ “ಸಿ ಮತ್ತು ಡಿ’ ದರ್ಜೆಯ ಹುದ್ದೆಗಳಿಗೆ 100ಕ್ಕೆ 100ರಷ್ಟು ಕನ್ನಡಿಗರ ನೇಮಕಾತಿಯನ್ನು ಕಡ್ಡಾಯಗೊಳಿಸುವ ಮಸೂದೆಗೆ ಮಂಗಳವಾರ ನಡೆದ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿದೆ. ಕನ್ನಡಿಗರು ಕನ್ನಡದ ನೆಲದಲ್ಲಿ ಉದ್ಯೋಗ ವಂಚಿತರಾಗುವುದನ್ನು ತಪ್ಪಿಸಿ, ತಾಯ್ನಾಡಿನಲ್ಲಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂಬುದು ನಮ್ಮ ಸರಕಾರದ ಆಶಯ.
ನಮ್ಮದು ಕನ್ನಡಪರವಾದ ಸರಕಾರ. ಕನ್ನಡಿಗರ ಹಿತ ಕಾಯುವುದು ನಮ್ಮ ಆದ್ಯತೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಹೇಳಿದ್ದಾರೆ.
ಶಾಲಾ ಪ್ರಮಾಣ ಪತ್ರ ಇಲ್ಲದಿದ್ದರೆ?
ಕನ್ನಡದಲ್ಲಿ ಮಾಧ್ಯಮಿಕ ಶಾಲಾ ಪ್ರಮಾಣಪತ್ರವಿಲ್ಲದ ಸ್ಥಳೀಯ ಅಭ್ಯರ್ಥಿಗಳು ನಿರ್ದಿಷ್ಟ ಕನ್ನಡ ಪ್ರಾವೀಣ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಇನ್ನು ಅರ್ಹ ಸ್ಥಳೀಯ ಅಭ್ಯರ್ಥಿಗಳು ಲಭ್ಯವಿಲ್ಲದ ಸಂದರ್ಭಗಳಲ್ಲಿ, ಕೈಗಾರಿಕೆಗಳು / ಕಾರ್ಖಾನೆಗಳು / ಸಂಸ್ಥೆಗಳು 3 ವರ್ಷ ಗಳಲ್ಲಿ ಸ್ಥಳೀಯ ಪ್ರತಿಭೆಗಳಿಗೆ ತರಬೇತಿ ನೀಡಲು ಮತ್ತು ತೊಡಗಿಸಿಕೊಳ್ಳಲು ಸರಕಾರಿ ಸಂಸ್ಥೆಗಳೊಂದಿಗೆ ಸಹಕರಿಸಬೇಕಾಗುತ್ತದೆ ಎಂಬುದಾಗಿಯೂ ಮಸೂದೆಯಲ್ಲಿ ಉಲ್ಲೇಖೀಸಲಾಗಿದೆ.
ವಿಧೇಯಕದಲ್ಲೇನಿದೆ?
ಈ ವಿಧೇಯಕದನ್ವಯ ಆಡಳಿತಾತ್ಮಕ ಹುದ್ದೆಗಳಾದ ಸೂಪರ್‌ವೈಸರ್, ವ್ಯವಸ್ಥಾಪಕ, ಟೆಕ್ನಿಕಲ್, ಆಪರೇಷನಲ್, ಆಡಳಿತ ಸೇರಿ ಉನ್ನತ ಹುದ್ದೆಗಳಲ್ಲಿ ಶೇ. 50 ಉದ್ಯೋಗವನ್ನು ಸ್ಥಳೀಯರಿಗೆ ಮೀಸಲಿಡಲಾಗುವುದು. ಇನ್ನು ನಾನ್-ಮ್ಯಾನೇಜ್‌ಮೆಂಟ್‌ನಲ್ಲಿ ಕ್ಲರ್ಕ್‌ಗಳು, ಕೌಶಲ, ಕೌಶಲ ರಹಿತ ಹಾಗೂ ಅರೆಕೌಶಲ, ಗುತ್ತಿಗೆ ನೌಕರ ಹಾಗೂ ಐಟಿ ಹುದ್ದೆಗಳಲ್ಲಿ ಶೇ.75ರಷ್ಟನ್ನು ಸ್ಥಳೀಯರಿಗೆ ಮೀಸಲಿಡುವುದು ಕಡ್ಡಾಯವಾಗಲಿದೆ.
ಯಾರು ಅರ್ಹರು?
-ಕರ್ನಾಟಕದಲ್ಲಿಯೇ ಹುಟ್ಟಿದವರು
-ರಾಜ್ಯದಲ್ಲಿ 15 ವರ್ಷಗಳಿಂದ ವಾಸಿಸುತ್ತಿರುವವರು
-ಕನ್ನಡ ಓದಲು, ಬರೆಯಲು, ಮಾತನಾಡಲು ಬರುವವರು
-ನೋಡಲ್ ಏಜೆನ್ಸಿ ನಡೆಸುವ ಕನ್ನಡ ಕುರಿತು ಪರೀಕ್ಷೆಯಲ್ಲಿ ಉತ್ತೀರ್ಣರಾದವರು.
ರಾಜ್ಯದ ಎಲ್ಲ ಖಾಸಗಿ ಕೈಗಾರಿಕೆಗಳಲ್ಲಿ “ಸಿ ಮತ್ತು ಡಿ’ ದರ್ಜೆಯ ಹುದ್ದೆಗಳಿಗೆ 100ಕ್ಕೆ 100ರಷ್ಟು ಕನ್ನಡಿಗರ ನೇಮ
ಕಾತಿ ಕಡ್ಡಾಯಗೊಳಿಸಲಾಗುತ್ತದೆ.
– ಸಿದ್ದರಾಮಯ್ಯ, ಮುಖ್ಯಮಂತ್ರಿ
ಅಂಜಲಿ ಹತ್ಯೆ ಪ್ರಕರಣ: ಸಂತ್ರಸ್ತೆ ಕುಟುಂಬಕ್ಕೆ ಪರಿಹಾರ ಒದಗಿಸಲು ಕ್ರಮ-ಡಾ. ಜಿ. ಪರಮೇಶ್ವರ್
ಬೆಂಗಳೂರು: ಹುಬ್ಬಳ್ಳಿಯ ವೀರಾಪುರ ಓಣಿಯ ಅಂಜಲಿ ಅಂಬಿಗೇರ ಹತ್ಯೆ ಪ್ರಕರಣವನ್ನು ಸರ್ಕಾರ ವಿಶೇಷ ಪ್ರಕರಣವೆಂದು ಪರಿಗಣಿಸಿ, ಆಕೆಯ ಕುಟುಂಬಕ್ಕೆ ಪರಿಹಾರ ಒದಗಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಸಂತ್ರಸ್ತೆ ಕುಟುಂಬಕ್ಕೆ ಪರಿಹಾರ ವಿಳಂಬ ಕುರಿತು ವಿಧಾನಪರಿಷತ್ತಿನಲ್ಲಿಂದು ಸದಸ್ಯ ತಿಪ್ಪಣ್ಣ ಕಾಮಕನೂರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ತ್ವರಿತಗತಿಯಲ್ಲಿ ಪ್ರಕರಣದ ವಿಚಾರಣೆ ನಡೆಸಲಾಗುತ್ತಿದೆ. ಈ ಪ್ರಕರಣವನ್ನು ಸರ್ಕಾರಿ ವಿಶೇಷ ಪ್ರಕರಣವೆಂದು ಪರಿಗಣಿಸಲಿದ್ದು, ಆಕೆಯ ಕುಟುಂಬಕ್ಕೆ ಪರಿಹಾರ ಒದಗಿಸಲಾಗುವುದು, ಈ ಸಂಬಂಧ ಮುಖ್ಯಮಂತ್ರಿ ಜೊತೆಗೆ ಚರ್ಚಿಸಿ, ಕುಟುಂಬಕ್ಕೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಾಮಾನ್ಯವಾಗಿ ಹತ್ಯೆ ಪ್ರಕರಣಗಳಲ್ಲಿ ಸರ್ಕಾರಿ ಪರಿಹಾರ ನೀಡಲ್ಲ. ಆದರೆ, ಸಂತ್ರಸ್ತೆ ಕುಟುಂಬದ ತೀವ್ರ ಬಡತನವನ್ನು ಪರಿಗಣಿಸಿ, ಇದನ್ನು ವಿಶೇಷ ಪ್ರಕರಣವೆಂದು ಸರ್ಕಾರ ಪರಿಗಣಿಸಿದೆ. ತಾನು ಕೂಡಾ ಅಂಜಲಿ ನಿವಾಸಕ್ಕೆ ತೆರಳಿ, ಆಕೆಯ ಅಜ್ಜಿಯೊಂದಿಗೆ ಮಾತನಾಡಿದ್ದು, ಅವರ ಜೀವನ ಪರಿಸ್ಥಿತಿಯನ್ನು ನೋಡಿದ್ದು, ನೆರವು ನೀಡುವ ಭರವಸೆ ನೀಡಿದ್ದೇನೆ. ಕೊಳಚೆ ಮಂಡಳಿ ಅಥವಾ ಆಶ್ರಯ ಯೋಜನೆಯಡಿ ಸರ್ಕಾರದಿಂದ ಮನೆ ಒದಗಿಸಲಾಗುವುದು ಎಂದು ಸಚಿವರು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಸಂತ್ರಸ್ತೆ ಕುಟುಂಬಕ್ಕೆ ಆಶ್ರಯ ಯೋಜನೆಯಡಿ ಮನೆ ಒದಗಿಸಲು ಒಪ್ಪಿಕೊಂಡಿದ್ದಾರೆ. ಪ್ರಕರಣದ ವಿಚಾರಣೆ ಪ್ರಸ್ತುತ ಚಾರ್ಜ್ ಶೀಟ್ ಸಲ್ಲಿಕೆ ಹಂತದಲ್ಲಿದೆ.
ಆರೋಪಿಯನ್ನು ಬಂಧಿಸಲಾಗಿದ್ದು, ಎಲ್ಲಾ ಸಾಕ್ಷ್ಯಧಾರ ಸಂಗ್ರಹಿಸಲಾಗಿದೆ ಎಂದು ಸಚಿವರು ಸದನಕ್ಕೆ ತಿಳಿಸಿದರು.ಮದುವೆಯಾಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ಆರೋಪಿ ಆಕೆಯ ಕುಟುಂಬದ ಎದುರೇ ಚಾಕು ಇರಿದು ಹತ್ಯೆ ಮಾಡಿದ್ದ. ಆರೋಪಿಯಿಂದ ಜೀವ ಬೆದರಿಕೆ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು ಎಂದು ಅಂಜಲಿ ಕುಟುಂಬ ಹೇಳುತ್ತಿದ್ದಂತೆ ಈ ಘಟನೆ ರಾಜ್ಯದಲ್ಲಿ ಕೋಲಾಹಲ ಸೃಷ್ಟಿಸಿತ್ತು.
ಕರಾವಳಿ ಜಿಲ್ಲೆಗಳಿಗೆ ಮತ್ತೆ ರೆಡ್ ಅಲರ್ಟ್:
ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನಲ್ಲಿ ಮಳೆ ಮುಂದುವರೆದಿದೆ. ಮೈಸೂರು, ಹಾಸನ, ಯಾದಗಿರಿ, ರಾಯಚೂರು, ಕಲಬುರಗಿ, ಬೀದರ್, ಬೆಳಗಾವಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು ಮಳೆ ವಿಪರೀತವಾಗಲಿದೆ. ಅಷ್ಟೇ ಅಲ್ಲದೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಕೊಡಗು ಜಿಲ್ಲೆಗಳಲ್ಲಿ ಕೂಡ ಧಾರಾಕಾರ ಮಳೆ ಸುರಿಯಲಿದೆ.
ಕರ್ನಾಟಕದ ಕರಾವಳಿಯಲ್ಲಿ ಭಾರಿ ಮಳೆ ಮುಂದುವರೆದಿದ್ದು, ಬಹುತೇಕ ನದಿಗಳು ತುಂಬಿ ಹರಿಯುತ್ತಿವೆ, ಸಾಕಷ್ಟು ಕಡೆ ಭೂ ಕುಸಿತ ಸಂಭವಿಸಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದ್ದು ಮಳೆ ಹೆಚ್ಚಲಿದೆ. ಮೈಸೂರು, ಹಾಸನ, ಯಾದಗಿರಿ, ರಾಯಚೂರು, ಕಲಬುರಗಿ, ಬೀದರ್, ಬೆಳಗಾವಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು ಮಳೆ ವಿಪರೀತವಾಗಲಿದೆ.
ಧಾರವಾಡ, ಗದಗ, ಹಾವೇರಿ, ಕೊಪ್ಪಳ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ,ಕೋಲಾರ, ಮಂಡ್ಯ, ತುಮಕೂರು ಜಿಲ್ಲೆಗಳಲ್ಲಿ ಕೂಡ ಭಾರಿ ಮಳೆಯಾಗಲಿದೆ.
ಗೋಕರ್ಣ, ಕುಂದಾಪುರ, ಮಂಕಿ, ಲಿಂಗನಮಕ್ಕಿ, ಸಿದ್ದಾಪುರ, ಹೊನ್ನಾವರ, ಕೊಲ್ಲೂರು, ಕೊಟ್ಟಿಗೆಹಾರ, ಭಾಗಮಂಡಲ, ಕೊಪ್ಪ, ಶೃಂಗೇರಿ, ಕುಮಟಾ, ಸಿದ್ದಾಪುರ, ಕ್ಯಾಸಲ್ರಾಕ್, ಚಿಕ್ಕಮಗಳೂರು, ಕಮ್ಮರಡಿ, ಶಿರಾಲಿ, ಕದ್ರಾದಲ್ಲಿ ಹೆಚ್ಚಿನ ಮಳೆ ಸುರಿದಿದೆ.
ಹುಂಚದಕಟ್ಟೆ, ಕಳಸ, ಉಡುಪಿ, ಸೋಮವಾರಪೇಟೆ, ಕಾರ್ಕಳ, ತ್ಯಾಗರ್ತಿ, ಎನ್ಆರ್ಪುರ, ಮೂರ್ನಾಡು, ಬನವಾಸಿ, ಯಲ್ಲಾಪುರ, ಧರ್ಮಸ್ಥಳ, ಪುತ್ತೂರು, ಮೂಡಿಗೆರೆ, ಉಪ್ಪಿನಂಗಡಿ, ಸುಳ್ಯ, ಮಾಣಿ, ಇಳಕಲ್, ದೇವದುರ್ಗ, ನಾಪೊಕ್ಲುವಿನಲ್ಲಿ ಮಳೆಯಾಗಿದೆ.
ಬೆಳ್ತಂಗಡಿ, ಆನವಟ್ಟಿ, ಪೊನ್ನಂಪೇಟೆ, ಜೋಯಿಡಾ, ಪಣಂಬೂರು, ಗಬ್ಬೂರು, ವಿರಾಜಪೇಟೆ, ಬೇಲೂರು, ಹೊನ್ನಾಳಿ, ಭದ್ರಾವತಿ, ತರೀಕೆರೆ, ಕಿರವತ್ತಿ, ಹಾರಂಗಿ, ಮುಂಡಗೋಡು, ಸೇಡಂ, ಚಿಂಚೋಳಿ, ಇಂಡಿ, ಅರಕಲಗೂಡು, ಹಾಸನ, ಹೊಸದುರ್ಗ, ಚನ್ನಗಿರಿ, ಭಾಲ್ಕಿ, ಕಡೂರು, ರಾಣೆಬೆನ್ನೂರು, ಕಲಬುರಗಿ, ಕಮಲಾಪುರ, ಮುದಗಲ್, ಗುಂಡ್ಲುಪೇಟೆ, ಕೊಳ್ಳೇಗಾಲದಲ್ಲಿ ಮಳೆಯಾಗಿದೆ.
ಬೆಂಗಳೂರಿನಲ್ಲಿ ಮೋಡಮುಸುಕಿದ ವಾತಾವರಣವಿದ್ದು, ಎಚ್ಎಎಲ್ನಲ್ಲಿ 25.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.7 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 24.1 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್ನಲ್ಲಿ 24.3ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.9 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 26.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 18.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ಹೊನ್ನಾವರದಲ್ಲಿ 26.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 23.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕಾರವಾರದಲ್ಲಿ 26.8ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 23.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಶಿರಾಲಿಯಲ್ಲಿ 28.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 17.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.