ಕ್ಯಾನ್ಸರ್ ನಿಂದ ಬಳಲುತ್ತಿರುವ ನಟಿಗಾಗಿ ಹಾಡಲಿದ್ದಾರೆ ಚಿನ್ಮಯಿ
ಸಾಫ್ಟ್ ಲಿಂಕ್ಸ್ ಸಂಸ್ಥೆಯ ಸುರೇಶ್ ಬಾಬು ಕಳೆದ ಕೆಲವು ವರ್ಷಗಳಿಂದ ಹಲವು ಸಂಗೀತ (Music) ಸಂಜೆಗಳನ್ನು (Program) ಆಯೋಜಿಸುತ್ತಾ ಬಂದಿದ್ದಾರೆ. ಈಗ ಅವರು ಖ್ಯಾತ ಗಾಯಕಿ ಚಿನ್ಮಯಿ ಶ್ರೀಪಾದ (Chinmayi Sripad) ಅವರ ಸಂಗೀತ ಸಂಜೆಯನ್ನು ಮಾರ್ಚ್ 18ರಂದು ನಗರದ ಚೌಡಯ್ಯ ಮೆಮೋರಿಯಲ್ ಹಾಲ್ನಲ್ಲಿ ಆಯೋಜಿಸಿದ್ದಾರೆ.
ಕಳೆದ 20 ವರ್ಷಗಳಿಂದ ದಕ್ಷಿಣ ಭಾರತದ ಜನಪ್ರಿಯ ಹಿನ್ನೆಲೆ ಗಾಯಕಿಯಾಗಿ ಗುರುತಿಸಿಕೊಂಡಿರುವ ಚಿನ್ಮಯಿ ಶ್ರೀಪಾದ, ರೇಡಿಯೋ ಜಾಕಿಯಾಗಿ, ಡಬ್ಬಿಂಗ್ ಕಲಾವಿದೆಯಾಗಿ, ನಿರೂಪಕಿಯಾಗಿಯೂ ಹೆಸರು ಮಾಡಿದ್ದಾರೆ. ಬ್ಲೂ ಎಲಿಫೆಂಟ್ ಎಂಬ ಸಂಸ್ಥೆಯ ಸಂಸ್ಥಾಯ ಮತ್ತು ಸಿಇಓ ಆಗಿಯೂ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.
ಬಾಲ್ಯದಿಂದಲೂ ಗಾಯಕಿಯಾಗಿ ಗುರುತಿಸಿಕೊಂಡಿರುವ ಚಿನ್ಮಯಿ ಶ್ರೀಪಾದ, ಚಿತ್ರರಂಗಕ್ಕೂ ಬರುವ ಮುನ್ನ ಹಲವು ಟಿವಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಸನ್ ಟಿವಿಯಲ್ಲಿ ಪ್ರಸಾರವಾದ ‘ಸಪ್ತಸ್ವರಂಗಳ್’ ಎಂಬ ಕಾರ್ಯಕ್ರಮದಲ್ಲಿ ಅವರ ಗಾಯನ ಪ್ರತಿಭೆಯನ್ನು ಗುರುತಿಸಿದ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರು ತಮ್ಮ ಸಂಗೀತ ನಿರ್ದೇಶನದ ‘ಕಣ್ಣತ್ತಿಲ್ ಮುತ್ತಮಿಟ್ಟಾಲ್’ ಚಿತ್ರದ ಒಂದು ಪ್ರಮುಖ ಹಾಡನ್ನು ಹಾಡುವುದಕ್ಕೆ ಅವಕಾಶ ನೀಡಿದ್ದಾರೆ. 2002ರಲ್ಲಿ ಬಿಡುಗಡೆಯಾದ ಈ ಚಿತ್ರದ ‘ಒರು ದೈವಂ ತಂದ ಪೂವೆ …’ ಹಾಡಿನಿಂದ ಜನಪ್ರಿಯರಾದ ಚಿನ್ಮಯಿ ಮತ್ತೆಂದೂ ಹಿಂದಿರುಗಿ ನೋಡಲಿಲ್ಲ. ತಮಿಳು, ತೆಲುಗು, ಕನ್ನಡ, ಹಿಂದಿ ಹಾಗೂ ಮಲಯಾಳಂ ಭಾಷೆಯ ಚಿತ್ರಗಳಿಗೆ ನೂರಾರು ಹಾಡುಗಳನ್ನು ಹಾಡಿದ್ದಾರೆ.
‘ಹನಿಹನಿ’ ಚಿತ್ರದ ‘ಬೇಡ ಬೇಡ’ ಎಂಬ ಹಾಡಿನ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಚಿನ್ಮಯಿ, ನಂತರದ ದಿನಗಳಲ್ಲಿ ‘ಮಸ್ತ್ ಮಜಾ ಮಾಡಿ’ ಚಿತ್ರದ ‘ಚೋರಿ ಚೋರಿ’, ‘ಗನ್’ ಚಿತ್ರದ ‘ತಾಜ ತಾಜ ಕನಸುಗಳು’, ‘ವಿಕ್ರಾಂತ್ ರೋಣ’ ಚಿತ್ರದ ‘ಹೇ ಫಕೀರಾ’, ‘ದಿಯಾ’ ಚಿತ್ರದ ‘ಸೌಲ್ ಆಫ್ ದಿಯಾ’ ಸೇರಿದಂತೆ ಹಲವು ಹಾಡುಗಳನ್ನು ಹಾಡಿದ್ದಾರೆ.
ಚಿತ್ರರಂಗದಲ್ಲಿ ಹಿನ್ನೆಲೆ ಗಾಯಕಿಯಾಗಿ 20 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಸಾಫ್ಟ್ ಲಿಂಕ್ಸ್ ಸಂಸ್ಥೆಯಿಂದ ‘ಸುವರ್ಣ ಸಂಜೆ’ ಎಂಬ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಸಮಾರಂಭದಲ್ಲಿ ಚಿನ್ಮಯಿ ಶ್ರೀಪಾದ ಅವರನ್ನು ವಿಶೇಷವಾಗಿ ಗೌರವಿಸಲಾಗುತ್ತದೆ. ಅಂದು ಕನ್ನಡದ ಹಲವು ಜನಪ್ರಿಯ ಹಾಡುಗಳನ್ನು ಹಾಡಲಾಗುವುದು. ಚಿನ್ಮಯಿ ಶ್ರೀಪಾದ ಸಹ ಈ ಸಂದರ್ಭದಲ್ಲಿ ತಾವು ಹಾಡಿರುವ ಕೆಲವು ಜನಪ್ರಿಯ ಹಾಡುಗಳನ್ನು ಲೈವ್ ಆಗಿ ಹಾಡಲಿದ್ದಾರೆ. ಅವರ ಜತೆಗೆ ಅಜಯ್ ಕೃಷ್ಣ ಸೇರಿದಂತೆ ಹಲವು ಜನಪ್ರಿಯ ಗಾಯಕ, ಗಾಯಕಿಯರು ಧ್ವನಿಗೂಡಿಸಲಿದ್ದಾರೆ. ಈ ಸಮಾರಂಭದಲ್ಲಿ ಕನ್ನಡ ಚಿತ್ರರಂಗದ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಈ ಸಂಗೀತ ಸಂಜೆಯಿಂದ ಬರುವ ಹಣದ ಒಂದು ಭಾಗವನ್ನು, ಕ್ಯಾನ್ಸರ್ನಿಂದ (Cancer) ಬಳಲುತ್ತಿರುವ ಹಿರಿಯ ಕಲಾವಿದೆ ಶೈಲಶ್ರೀ ಸುದರ್ಶನ್ ಅವರ ಚಿಕಿತ್ಸೆಗೆ ಭರಿಸಲಾಗುವುದು.