ಕೋವಿಶೀಲ್ಡ್ ಪಡೆದವರು ಕೋಲ್ಡ್, ಐಸ್ ಕ್ರೀಮ್ ಸೇವಿಸಬಾರದು ಎನ್ನುವುದು ಸುಳ್ಳು ಸುದ್ದಿ ಎಂದ ಆರೋಗ್ಯ ಇಲಾಖೆ.!
ಬೆಂಗಳೂರು, ಮೇ 04: ಕೊರೊನಾ (Covid) ಸಂದರ್ಭದಲ್ಲಿ ಕೋವಿಶೀಲ್ಡ್ (Covishield) ಲಸಿಕೆ ಪಡೆದವರು ಫ್ರಿಜ್ ನೀರು, ಐಸ್ ಕ್ರೀಮ್ ಮತ್ತು ತಂಪು ಪಾನೀಯಗಳನ್ನು ಕುಡಿಯಬಾರದು ಎಂಬುವುದು ಸುಳ್ಳು ಸುದ್ದಿಯಾಗಿದೆ ಎಂದು ಆರೋಗ್ಯ ಇಲಾಖೆ (Health Department) ತಿಳಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ರೀತಿಯ ಸುದ್ದಿ ಸುಳ್ಳಾಗಿದ್ದು, ಇಂತಹ ಯಾವುದೇ ಸುತ್ತೋಲೆ ಇಲಾಖೆ ಹೊರಡಿಸಿಲ್ಲ. ಗಾಬರಿ ಗೊಳ್ಳದಿರಿ, ತಪ್ಪು ಮಾಹಿತಿ ಬಗ್ಗೆ ಜಾಗೃತಿ ವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಈ ರೀತಿ ಸೂಚನೆ ನೀಡಿರುವ ಕಾಲೇಜುಗಳಿಗೆ ಕಾರಣ ಕೇಳಿ ಆರೋಗ್ಯ ಇಲಾಖೆ ನೋಟಿಸ್ ನೀಡಿದೆ.
ಸುಳ್ಳು ಸುದ್ದಿ
ಆರೋಗ್ಯ ಇಲಾಖೆಯು ತಿಳಿಸಿರುವ ಮಾಹಿತಿಯ ಪ್ರಕಾರ, ಎಲ್ಲ ವಿದ್ಯಾರ್ಥಿಗಳು ಹಾಗೂ ಪೋಷಕರು ಯಾವುದೇ ರೀತಿಯ ಫ್ರಿಜ್ ನೀರು, ಐಸ್ ಕ್ರೀಮ್ ಮತ್ತಯ ತಂಪು ಪಾನೀಯಗಳನ್ನು ಕುಡಿಯಬಾರದು. ಏಕೆಂದರೆ ಕೊರೊನಾ ಸಂದರ್ಭದಲ್ಲಿ ಕೋವಿಶೀಲ್ಡ್ ಲಸಿಕೆ ಹಾಕಿಸಿಕೊಂಡಿರುವ ಪರಿಣಾಮ ರಕ್ತ ಹೆಪ್ಪುಗಟ್ಟುವುದು ದಿಢೀರ್ ಹೃದಯಾಘಾತ ಸಂಭವಿಸಿ ಪ್ರಾಣ ಹಾನಿಯಾಗುತ್ತಿದೆ. ಹೀಗಾಗಿ ಮೇಲೆ ತಿಳಿಸಿರುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವುದು ಎಂದು ಖಾಸಗಿ ಕಾಲೇಜು ಸುತ್ತೋಲೆ ಹೊರಡಿಸಿತ್ತು.
ಖಾಸಗಿ ಕಾಲೇಜೊಂದು ಈ ರೀತಿಯಾಗಿ ನೋಟಿಸ್ ಹೊರಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಶುಕ್ರವಾರ ಹರದಾಡಲು ಆರಂಭಿಸಿತು. ಇದರಿಂದ ಎಚ್ಚತ್ತ ಆರೋಗ್ಯ ಇಲಾಖೆ ಇದು ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಿದೆ.
ಕೋವಿಶೀಲ್ಡ್ನಿಂದ ಅಡ್ಡ ಪರಿಣಾಮ
ಅಸ್ಟ್ರಾಜೆನೆಕಾ ಕೋವಿಡ್ ಲಸಿಕೆ ಪಡೆದ ಬಳಿಕ ಮೆದುಳು ಅಥವಾ ದೇಹದ ಇತರೆ ರಕ್ತನಾಳಗಳಲ್ಲಿ ರಕ್ತಹೆಪ್ಪುಗಟ್ಟುವುದು, ಪ್ಲೇಟ್ ಲೆಟ್ಗಳ ಸಂಖ್ಯೆ ಕಡಿಮೆಯಾಗುವುದ ಬಗ್ಗೆ ಬ್ರಿಟನ್ ನಿವಾಸಿ ಜೆಮಿ ಸ್ಕಾಟ್ ದೂರು ನೀಡಿದ್ದರು.
ಈ ಪ್ರಕರಣದ ವಿಚಾರಣೆ ವೇಳೆ ಆಸ್ಟ್ರಾಜೆನೆಕಾದ ವಕೀಲರು ಲಿಖಿತ ಹೇಳಿಕೆ ಸಲ್ಲಿಸಿದ್ದು ಅದರಲ್ಲಿ ಕಂಪನಿ ಅಭಿವೃದ್ಧಿಪಡಿಸಿರುವ ಲಸಿಕೆಯು ಅಪರೂಪದ ಪ್ರಕರಣಗಳಲ್ಲಿ ಅಡ್ಡಪರಿಣಾಮಗಳಿಗೆ ಕಾರಣವಾಗುವುದು ನಿಜ. ಲಸಿಕೆ ಪಡೆದವರು ಥ್ರೊಂಬೋಸಿಸ್ ಎಂಬ ಆರೋಗ್ಯ ಸಮಸ್ಯೆಗೆ ತುತ್ತಾಗುವ ಸಾಧ್ಯತೆ ಇದೆ ಎಂದು ಹೇಳಿದೆ. ಈ ಸಮಸ್ಯೆಗೆ ತುತ್ತಾದವರು ರಕ್ತ ಹೆಪ್ಪುಗಟ್ಟುವಿಕೆ ಮತ್ತು ಪ್ಲೇಟ್‌ಲೆಟ್‌ಗಳ ಸಂಖ್ಯೆಯಲ್ಲಿ ಕಡಿಮೆಯ ತೊಂದರೆಗೆ ಒಳಗಾಗುತ್ತಾರೆ. ಅತ್ಯಂತ ಸೂಕ್ಷ್ಮ ಪ್ರಕರಣಗಳಲ್ಲಿ ವ್ಯಕ್ತಿಯು ಸಾವನ್ನಪ್ಪುವ ಸಾಧ್ಯತೆಯೂ ಇರುತ್ತದೆ’ ಎಂಬುದಾಗಿ ಸಂಸ್ಥೆ ತಪ್ಪೊಪ್ಪಿಕೊಂಡಿದೆ.
Not true. No such circular has been issued from @DHFWKA. https://t.co/tNp8w5cQPn
— K'taka Health Dept (@DHFWKA) May 3, 2024