ಕೊಹ್ಲಿಯ ಸಿಡಿಲಬ್ಬರದ ಶತಕ - ಹೈದರಾಬಾದ್ ವಿರುದ್ಧ ಅಮೋಘ ಜಯ ; ಟಾಪ್-4 ಕ್ಕೆ ಆರ್ ಸಿಬಿ ಎಂಟ್ರಿ
ಹೈದರಾಬಾದ್: ಪ್ಲೇ ಆಫ್ ಸ್ಥಾನಕ್ಕೇರಲು ತೀವ್ರ ಹೋರಾಟ ಸಂಘಟಿಸುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ ಅಮೋಘ ಜಯ ಸಾಧಿಸಿದೆ.
ಟಾಸ್ ಗೆದ್ದ ಫಾಫ್ ಡು ಪ್ಲೆಸಿಸ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಹೈದರಾಬಾದ್ ಹೆನ್ರಿಕ್ ಕ್ಲಾಸೆನ್ ಅವರ ಅತ್ಯಮೋಘ ಶತಕದ ನೆರವಿನಿಂದ 5 ವಿಕೆಟ್ ನಷ್ಟಕ್ಕೆ 186 ರನ್ ಕಲೆ ಹಾಕಿತು. ದಕ್ಷಿಣ ಆಫ್ರಿಕಾ ಮೂಲದ ಕ್ಲಾಸೆನ್ 51 ಎಸೆತಗಳಲ್ಲಿ ಸ್ಪೋಟಕ ಆಟವಾಡಿ 104 ರನ್ ಗಳಿಸಿ ಔಟಾದರು. 8ಬೌಂಡರಿ ಮತ್ತು 6 ಸಿಕ್ಸರ್ ಸಿಡಿಸಿದ್ದರು. ಅಭಿಷೇಕ್ ಶರ್ಮಾ 11, ತ್ರಿಪಾಠಿ 15, ನಾಯಕ ಮಾರ್ಕ್ರಾಮ್ 18, ಹ್ಯಾರಿ ಬ್ರೂಕ್ ಔಟಾಗದೆ 27, ಗ್ಲೆನ್ ಫಿಲಿಪ್ಸ್ 5 ರನ್ ಗಳಿಸಿ ಔಟಾದರು.
ಗುರಿ ಬೆನ್ನಟ್ಟಿದ ಆರ್ ಸಿಬಿ ಪರ ವಿರಾಟ್ ಕೊಹ್ಲಿ ಮತ್ತು ನಾಯಕ ಪ್ಲೆಸಿಸ್ ಭರ್ಜರಿ ಜತೆಯಾಟವಾಡಿದರು. 19.2 ಓವರ್ ಗಳಲ್ಲಿ 187 ರನ್ ಗಳಿಸುವ ಮೂಲಕ ಅನಿವಾರ್ಯವಾಗಿದ್ದ ಪಂದ್ಯದಲ್ಲಿ 8 ವಿಕೆಟ್ ಗಳ ಭರ್ಜರಿ ಜಯ ತನ್ನದಾಗಿಸಿಕೊಂಡಿತು. ಜವಾಬ್ದಾರಿಯುತ ಆಟವಾಡಿದ ಕೊಹ್ಲಿ 62 ಎಸೆತಗಳಿಂದ ಅಮೋಘ ಶತಕ ಸಿಡಿಸಿ ಔಟಾದರು. ನಾಲ್ಕು ವರ್ಷಗಳ ನಂತರ ಐಪಿಎಲ್‌ನಲ್ಲಿ ಶತಕ ಸಿಡಿಸಿ ಸಂಭ್ರಮಿಸಿದರು. 12 ಬೌಂಡರಿ ಮತ್ತು 4 ಸಿಕ್ಸರ್ ಅವರ ಇನ್ನಿಂಗ್ಸ್ ನಲ್ಲಿ ಒಳಗೊಂಡಿತ್ತು. ಪ್ಲೆಸಿಸ್ ನಾಯಕನ ಆಟವಾಡಿ ಕೊಹ್ಲಿಗೆ ಸಾಥ್ ನೀಡಿದರು. 47 ಎಸೆತಗಳಲ್ಲಿ 71 ರನ್ ಗಳಿಸಿ ಔಟಾದರು.13 ಪಂದ್ಯಗಳಿಂದ 14 ಅಂಕವನ್ನು ಆರ್ ಸಿಬಿ ಗಳಿಸಿದ್ದು , ಮುಂಬೈ ಕೂಡ 13 ಪಂದ್ಯಗಳಿಂದ 14 ಅಂಕ ಹೊಂದಿದೆ.