ಕೊಲೆಯಲ್ಲಿ ಪವಿತ್ರಾ ಪಾತ್ರವಿಲ್ಲ, ಓದುತ್ತಿರುವ ಮಗಳಿದ್ದಾಳೆ, ಹೀಗಾಗಿ ಜಾಮೀನು ನೀಡಬೇಕು: ವಕೀಲರ ವಾದ
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ 17 ಮಂದಿ ಆರೋಪಿಗಳಿದ್ದು ಅವರಲ್ಲಿ ನಾಲ್ಕು ಮಂದಿಗೆ ಈಗಾಗಲೇ ಜಾಮೀನು ದೊರೆತಿದೆ. ಪ್ರಕರಣದ ಎರಡನೇ ಆರೋಪಿ ದರ್ಶನ್ಗೆ ಮಧ್ಯಂತರ ಜಾಮೀನು ದೊರೆತಿದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜಾಮೀನಿನ ಬಗ್ಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಉಳಿದ ಆರೋಪಿಗಳಿಗೆ ಇದರಿಂದ ಸಮಸ್ಯೆ ಆಗಿತ್ತು. ಪವಿತ್ರಾ ಸೇರಿದಂತೆ ಇತರ ಆರೋಪಿಗಳ ಪರ ವಾದ ಮಂಡನೆಗೆ ಸಹ ಸೂಕ್ತ ಕಾಲಾವಕಾಶ ಸಿಕ್ಕಿರಲಿಲ್ಲ. ಆದರೆ ಇಂದು (ಡಿಸೆಂಬರ್ 03) ಪವಿತ್ರಾ ಗೌಡ ಪರ ವಕೀಲರು, ಹೈಕೋರ್ಟ್‌ನಲ್ಲಿ ವಾದ ಮಂಡನೆ ಮಾಡಿದರು.
ರೇಣುಕಾಸ್ವಾಮಿ ಕೊಲೆ ಪ್ರಕರಣ (Renukaswamy Murder Case) ಮತ್ತೊಂದು ರೋಚಕ ತಿರುವು ಪಡೆದಿದೆ. ಅಪಹರಣ ಮತ್ತು ಕೊಲೆಯಲ್ಲಿ ಪವಿತ್ರಾ ಪಾತ್ರವಿಲ್ಲ ಎಂದು ವಕೀಲರು ವಾದ ಮಂಡಿಸಿದ್ದಾರೆ.
ಪವಿತ್ರಾ ಗೌಡ ಹೈಕೋರ್ಟ್‌ನಲ್ಲಿ (High Court) ವಾದ ಮಂಡಿಸಿದ ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್, ಪವಿತ್ರಗೌಡ- ದರ್ಶನ್ ಲೀವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದರು. ಪವಿತ್ರಾಗೌಡ ಮನೆಯಲ್ಲಿ ಪವನ್ ಕೆಲಸಕ್ಕೆ ಇದ್ದ. ದರ್ಶನ್ ಸೂಚನೆಯ ಮೇರೆಗೆ ಪವನ್ ಕಿಡ್ನಾಪ್ ಮಾಡಿದ್ದಾನೆ ಎಂದು ವಾದಿಸಿದ್ದಾರೆ.
ರೇಣುಕಾಸ್ವಾಮಿ ಬರುವ ತನಕ ಶೆಡ್‌ನಲ್ಲಿ ಪವನ್ ಕಾದಿದ್ದ. ದರ್ಶನ್ (Darshan) ಶೆಡ್‌ಗೆ ಹೋಗುವಾಗ ಪವಿತ್ರ ಗೌಡಳನ್ನು ಕರೆದುಕೊಂಡು ಹೋಗಿದ್ದಾರೆ. ಪವಿತ್ರಾಗೌಡ ಶೆಡ್‌ಗೆ ಹೋಗಿ ರೇಣುಕಾಸ್ವಾಮಿಗೆ ಬೈಯ್ದು ವಾಪಸ್ ಮನೆಗೆ ಬಂದಿದ್ದಾರೆ. ಆದರೆ ಪಟ್ಟಣಗೆರೆ ಶೆಡ್‌ನಲ್ಲಿ ಹಲ್ಲೆ ಮಾಡಿದಾಗ ರೇಣುಕಾಸ್ವಾಮಿ ಸಾವು ಸಂಭವಿಸಿರಬಹುದು ಎಂದು ಹೇಳಿದರು.
ಪವಿತ್ರಾಗೌಡ ಚಪ್ಪಲಿಯಿಂದ ಹೊಡೆದಿದ್ದಾರೆ ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖವಾಗಿದೆ. ಆದರೆ ಚಪ್ಪಲಿಯಿಂದ ಹೊಡೆದಿರುವುದು ರೇಣುಕಾಸ್ವಾಮಿ ಸಾವಿಗೆ ಕಾರಣ ಅಲ್ಲ. ನನ್ನ ಕಕ್ಷಿದಾರರಿಗೆ ಅಪ್ರಾಪ್ತ ಮಗಳಿದ್ದಾಳೆ. ಇದನ್ನೆಲ್ಲಾ ಪರಿಗಣಿಸಿ ಜಾಮೀನು ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.
ಹಲ್ಲೆಗೆ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪ ಇದೆ, ಆದರೆ ಸಾಕ್ಷಿಗಳ ಹೇಳಿಕೆಯಲ್ಲಿ ಪ್ರಚೋದನೆ ನೀಡಿರುವ ಯಾವ ಅಂಶವೂ ಸಹ ಇಲ್ಲ. ಅಲ್ಲದೆ ಪವಿತ್ರಾಗೌಡ ಮಹಿಳೆಯಾಗಿದ್ದು, ಆಕೆಗೆ ಯಾವುದೇ ಅಪರಾಧದ ಹಿನ್ನೆಲೆಯಿಲ್ಲ, ಕೇವಲ ಮಹಿಳೆ ಎಂಬ ಕಾರಣಕ್ಕೆ ಜಾಮೀನು ನೀಡಿದ ಉದಾಹರಣೆಗಳು ಇವೆ. ಪತಿಯನ್ನೇ ಕೊಂದ ಪತ್ನಿಗೂ ಸಹ ಮಹಿಳೆ ಎಂಬ ಕಾರಣಕ್ಕೆ ಜಾಮೀನು ಸಿಕ್ಕಿದೆ. ಪವಿತ್ರಾಗೌಡಗೆ 9ನೇ ತರಗತಿ ಓದುತ್ತಿರುವ ಮಗಳಿದ್ದಾಳೆ, ಹೀಗಾಗಿ ಜಾಮೀನು ನೀಡಬೇಕು ಎಂದು ಸೆಬಾಸ್ಟಿಯನ್ ಮನವಿ ಮಾಡಿದ್ದಾರೆ.
ಪವಿತ್ರಾ ಗೌಡ ಪರವಾಗಿ ಹಿರಿಯ ವಕೀಲರಾದ ಸೆಬಾಸ್ಟಿಯನ್ ಹೈಕೋರ್ಟ್‌ನಲ್ಲಿ ವಾದ ಮಂಡಿಸಿದರು. ಕೆಳಹಂತದ ನ್ಯಾಯಾಲಯದಲ್ಲಿಯೂ ಇವರೇ ಪವಿತ್ರಾ ಪರವಾಗಿ ವಾದಿಸಿದ್ದರು. ವಾದ ಆರಂಭಕ್ಕೂ ಮುಂಚೆಯೇ ನ್ಯಾಯಮೂರ್ತಿಗಳು ಎಷ್ಟು ಸಮಯ ವಾದ ಮಾಡಲಿದ್ದೀರಿ ಎಂದು ಕೇಳಿ ಸಮಯ ನಿಗದಿ ಮಾಡಿಬಿಟ್ಟರು, ಹಾಗಾಗಿ ಚುಟುಕಾಗಿ ಸೆಬಾಸ್ಟಿಯನ್ ಅವರು ವಾದ ಮಂಡನೆ ಮಾಡಿದರು.
ಜಾಮೀನು ಅರ್ಜಿಯ ವಿಚಾರಣೆ ಶುಕ್ರವಾರಕ್ಕೆ ಮುಂದೂಡಿಕೆಯಾಗಿದ್ದು ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್ ಪ್ರತಿವಾದ ಮಂಡಿಸಲಿದ್ದಾರೆ.